ವಿಧಾನಸಭೆಯಲ್ಲಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಶಂಕರ್ ಬಿದರಿ ಅವರನ್ನು ತಳ್ಳಿದ ಘಟನೆ ಚರ್ಚೆಗೆ ಬಂದಿತು. ಸಿದ್ದರಾಮಯ್ಯ ಅವರು ಘಟನೆಗೆ ಸ್ಪಷ್ಟನೆ ನೀಡಿದರು.
ವಿಧಾನಸಭೆ (ಮಾ.18): ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರನ್ನು ತಳ್ಳಿದ, ಸದನದೊಳಗೆ ಪ್ರವೇಶಿಸಲು ಬಾಗಿಲನ್ನೇ ಒದ್ದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ನನಗೆ ಈಗ ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾಯಣ ಅವರ ರೀತಿ ಜೋಶ್‌ನಿಂದ ಮಾತನಾಡುವುದಕ್ಕೆ ಆಗುವುದಿಲ್ಲ ಎಂದರು.
ಅದಕ್ಕೆ ಡಾ.ಅಶ್ವತ್ಥನಾರಾಯಣ, ಹಿಂದೆಲ್ಲ ನೀವು ತೊಡೆ ತಟ್ಟುತ್ತಿದ್ದಿರಲ್ಲ ಸಾರ್ ಎಂದು ಕಿಚಾಯಿಸಿದರು. ಆಗ ಸಿದ್ದರಾಮಯ್ಯ, ತೊಡೆ ತಟ್ಟಿಲ್ಲಪ್ಪ, ನಿಮ್ಮ ವಿರುದ್ಧ (ಬಿಜೆಪಿ) ಸದನದಲ್ಲಿ ತೋಳು ತಟ್ಟಿದ್ದೆ ಅಷ್ಟೇ ಎಂದರು. ಆಗ ಬಿಜೆಪಿ ಶಾಸಕ ಸಿ.ಸಿ.ಪಾಟೀಲ್, ಶಂಕರ ಬಿದರಿ ಅವರನ್ನೇ ತಳ್ಳಿದ್ದಿರಲ್ಲಾ ಸಾರ್ ನೀವು. ಹಾಗೇ ಸದನದೊಳಗೆ ಪ್ರವೇಶಿಸುವ ಬಾಗಿಲನ್ನೇ ಒದ್ದು ಒಳಗೆ ಬಂದಿದ್ದಿರಲ್ಲಾ ಎಂದು ಸ್ಮರಿಸಿದರು.
ಅದಕ್ಕೆ ಸಿದ್ದರಾಮಯ್ಯ, ಪೊಲೀಸ್ ಸಮವಸ್ತ್ರದಲ್ಲಿ ಯಾರೂ ಸದನದೊಳಗೆ ಬರಬಾರದು. ಆದರೆ, ಶಂಕರ್ ಬಿದರಿ ಸದನ ಪ್ರವೇಶಿಸುವ ದ್ವಾರದಲ್ಲಿ ಸಮವಸ್ತ್ರ ಧರಿಸಿ ನಮ್ಮನ್ನು ಒಳಗೆ ಬಿಡದೆ ಅಡ್ಡ ನಿಂತಿದ್ದರು. ನೀವೇನು ಮಾರ್ಷಲ್ ಅಲ್ಲ, ಇಲ್ಲಿಗೆ ಸಮವಸ್ತ್ರದಲ್ಲಿ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿ ಅವರನ್ನು ತಳ್ಳಿದೆ. ಹಾಗೆಯೇ, ನಮ್ಮನ್ನು ಒಳಗೆ ಬಿಡದೇ ಬಾಗಿಲು ಮುಚ್ಚಿದ್ದರಿಂದಾಗಿ ಬಾಗಿಲಿಗೆ ಒದ್ದೆ ಎಂದು ಹಳೆಯ ಘಟನೆಗೆ ಸ್ಪಷ್ಟನೆ ನೀಡಿದರು. ಸಾಮಾನ್ಯವಾಗಿ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆ ಸನ್ನಿವೇಶ ಹಾಗಿತ್ತು, ಹಾಗಾಗಿ ಹಾಗೆ ಮಾಡಿದೆ ಅಷ್ಟೇ? ಎಂದರು.