ಯಾವುದೇ ಸ್ಪಷ್ಟ ರೂಪುರೇಷೆ ಇಲ್ಲದೆ ರಚಿಸಿದ ಪರಿಣಾಮ ಈಗ ಮುಚ್ಚುವ ಭೀತಿ ಎದುರಿಸುತ್ತಿರುವ ಒಂಬತ್ತು ಹೊಸ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಶ್ವವಿದ್ಯಾಲಯವೂ ಒಂದು.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಮಾ.17): ಯಾವುದೇ ಸ್ಪಷ್ಟ ರೂಪುರೇಷೆ ಇಲ್ಲದೆ ರಚಿಸಿದ ಪರಿಣಾಮ ಈಗ ಮುಚ್ಚುವ ಭೀತಿ ಎದುರಿಸುತ್ತಿರುವ ಒಂಬತ್ತು ಹೊಸ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಶ್ವವಿದ್ಯಾಲಯವೂ ಒಂದು. ಆರಂಭವಾಗಿ ಎರಡು ವರ್ಷಗಳಾದರೂ ಆಮೆಗತಿಯ ನಡಿಗೆ, ಕನಿಷ್ಠ ಸೌಲಭ್ಯಗಳೂ ಇಲ್ಲದೆ ಸೊರಗುತ್ತಿದೆ. ವಿಪರ್ಯಾಸವೆಂದರೆ ಈ ವಿವಿಯ ಕುಲಪತಿಗೆ ಕನಿಷ್ಠ ಕಾರಿನ ಸೌಲಭ್ಯವೂ ಇಲ್ಲ. ಹಿಂದಿನ ಸರ್ಕಾರ ಹೊಸ ವಿವಿಗಳನ್ನು ರಚಿಸುವಾಗ ಯಾವುದೇ ಜಮೀನು, ಕಟ್ಟಡ, ಸಿಬ್ಬಂದಿ, ಮೂಲಸೌಕರ್ಯ ಕೇಳುವಂತಿಲ್ಲ ಎಂದು ವಿಧಿಸಿರುವ ಷರತ್ತುಗಳನ್ನೇ ಮುಂದಿಟ್ಟುಕೊಂಡು ಈಗಿನ ಸರ್ಕಾರ ಕೂಡ ವಿವಿಯನ್ನು ಬಲಪಡಿಸುವ ಕೆಲಸ ಮಾಡುತ್ತಿಲ್ಲ. ಅದು ಯಾವ ಮಟ್ಟಕ್ಕೆಂದರೆ ಆಂತರಿಕ ಆದಾಯದಲ್ಲೇ ಕಾರು ಖರೀದಿಸಲು ಅನುಮತಿ ಕೋರಿದ್ದರೂ ಕುಲಪತಿ ಹಾಗೂ ಇತರೆ ಅಧಿಕಾರಿಗಳಿಗೆ ಒಪ್ಪಿಗೆ ಸಿಕ್ಕಿಲ್ಲ.
ಪರಿಣಾಮ ಸ್ಥಳೀಯವಾಗಿ ಟ್ಯಾಕ್ಸಿ, ಕ್ಯಾಬ್‌ನಲ್ಲಿ ಸಂಚರಿಸುವ ಕುಲಪತಿ ಬೆಂಗಳೂರು ಸೇರಿ ಇನ್ನಿತರೆ ದೂರದ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ಬಸ್‌ನಲ್ಲಿ ಸಂಚರಿಸುವ ಸ್ಥಿತಿ ಇದೆ. ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 40 ಕಾಲೇಜುಗಳನ್ನು ಸೇರಿಸಿ ಕೊಪ್ಪಳ ವಿವಿ ರಚಿಸಲಾಗಿದೆ. 16,500 ವಿದ್ಯಾರ್ಥಿಗಳು ವಿವಿಧ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈವರೆಗೂ ಈ ವಿವಿಗೆ ಅಗತ್ಯ ಬೋಧಕ, ಬೋಧಕೇತರ ಸಿಬ್ಬಂದಿಯ ಮಂಜೂರಾತಿ ಕೂಡ ಸಿಕ್ಕಿಲ್ಲ. ಅಷ್ಟೇ ಅಲ್ಲ, ಹೊಸ ವಿವಿ ರಚಿಸಿದ ಬಳಿಕ ಆ ವಿವಿಗೆ ಸೇರಬೇಕಿರುವ ಆಸ್ತಿ, ಕಾಯಂ ಬೋಧಕರ ಹಂಚಿಕೆ, ಆಂತರಿಕ ಸಂಪನ್ಮೂಲ, ಮೂಲ ವಿವಿಯಿಂದ ಬರಬೇಕಿರುವ ಅನುದಾನ, ಹಿಂದಿನ ಸರ್ಕಾರ ನಿಗದಿಪಡಿಸಿದ್ದ 2 ಕೋಟಿ ಹಣ ಯಾವುದೂ ಇಲ್ಲದೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಇದರಿಂದ ಹೆಸರಿಗಷ್ಟೇ ಹೊಸ ವಿಶ್ವವಿದ್ಯಾಲಯವಾಗಿ ಉಳಿದಿದೆ.
ಮಂಡ್ಯ ವಿಶ್ವವಿದ್ಯಾಲಯದಲ್ಲೂ ಬೋಧಕ ಹುದ್ದೆ ಖಾಲಿ: ಶಿಕ್ಷಣ, ಸಂಶೋಧನೆಗೆ ಸಿಗದ ಆದ್ಯತೆ
ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಕುಲಪತಿ ಬಿ.ಕೆ.ರವಿ ಅವರು, ಕಾಲೇಜುಗಳ ಸಂಯೋಜನಾ ಶುಲ್ಕ, ದಾಖಲಾತಿ ಅನುಮೋದನೆ ಶುಲ್ಕ, ಪರೀಕ್ಷಾ ಶುಲ್ಕ ಇನ್ನಿತರೆ ಮೂಲಗಳಿಂದ ಪ್ರತಿ ವರ್ಷ ಬರುವ ಸುಮಾರು ಎರಡ್ಮೂರು ಕೋಟಿ ರು. ಆಂತರಿಕ ಆದಾಯದಲ್ಲೇ ವಿವಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬಹುತೇಕ ದಾಖಲಾತಿಗಳು ಸಹ ಈಗ ವಿವಿ ಹೆಸರಿನಲ್ಲಿಯೇ ಮುದ್ರಿತವಾಗುತ್ತಿವೆ. ಪರೀಕ್ಷೆಗಳನ್ನೂ ವಿವಿಯೇ ನಡೆಸುತ್ತಿದೆ. ವಿವಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಹತ್ತಾರು ಕೋಟಿ ರು. ಅನುದಾನ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುದಾನ ಬಿಡಿ ಕನಿಷ್ಠ ಮೂಲಸೌಕರ್ಯವನ್ನೂ ಕಲ್ಪಿಸುವ ಕೆಲಸ ಮಾಡಿಲ್ಲ. ಇದರಿಂದ ಜಿಲ್ಲೆಗೆ ಹೊಸ ವಿವಿ ಬಂತೆಂದು ಸಂಭ್ರಮಿಸಿದ್ದ ಸ್ಥಳೀಯರು ಸರ್ಕಾರದ ಮುಚ್ಚುವ ಆಲೋಚನೆಯಿಂದ ತೀವ್ರ ಅಸಮಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯುಜಿಸಿಯ 2ಎಫ್ ಮಾನ್ಯತೆ ಇದೆ: ಸದ್ಯ ಕೊಪ್ಪಳ ವಿವಿಯನ್ನು ಕುಕನೂರು ತಾಲೂಕಿನ ಎಂಜನಿಯರಿಂಗ್ ಕಾಲೇಜಿನಲ್ಲೇ ಎರವಲು ಪಡೆದು ನಡೆಸಲಾಗುತ್ತದೆ. ಕುಲಪತಿ ಮತ್ತು ಕುಲಸಚಿವರಿಗೆ ಕಾರ್ಯಾಲಯ ಮಾಡಿಕೊಳ್ಳಲಾಗಿದೆ. ಸ್ಥಳೀಯ ಸಂಪನ್ಮೂಲಗಳ ಮೂಲಕ ಪೀಠೋಪಕರಣ ಮಾಡಿಕೊಳ್ಳಲಾಗಿದೆ. ಇದರ ಹೊರತಾಗಿ ಕೊಪ್ಪಳ ವಿವಿ ಎನ್ನುವುದಕ್ಕೆ ಮತ್ತೇನೂ ಕುರುಹು ಇಲ್ಲ. ಆದರೂ, ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಪದವಿ ವ್ಯಾಸಂಗ, ಪರೀಕ್ಷೆ, ಪ್ರಮಾಣ ಪತ್ರ ನೀಡಲು ಯಾವುದೇ ಅಡ್ಡಿ ಇಲ್ಲ. ಯುಜಿಸಿಯಿಂದ 2 ಎಫ್ ಮಾನ್ಯತೆ ಸಿಕ್ಕಿದೆ. ಆದರೆ, ಸಂಶೋಧನಾ ಚಟುವಟಿಕೆಗೆ ಯುಜಿಸಿ ಅನುದಾನ ಪಡೆಯಲು ಬೇಕಾದ 12 ಬಿ ಮಾನ್ಯತೆ ಸದ್ಯಕ್ಕಂತು ಮರೀಚಿಕೆ. ಇದಕ್ಕೆ ಅರ್ಜಿ ಸಲ್ಲಿಸಲು ವಿವಿಗೆ ಕನಿಷ್ಠ 5 ವರ್ಷಗಳಾಗಿರಬೇಕು. ಶೇ.75ರಷ್ಟು ಬೋಧಕ, ಬೋಧಕೇತರ ಸಿಬ್ಬಂದಿ ಇರಬೇಕೆಂಬುದು ಸೇರಿ ಯಾವ ಅರ್ಹತೆಯೂ ಸದ್ಯಕ್ಕೆ ಈ ವಿವಿಗಿಲ್ಲ.
ಸಿಬ್ಬಂದಿಯೂ ಇಲ್ಲ: ಮಾಹಿತಿ ಪ್ರಕಾರ, ಕುಲಪತಿ, ಕುಲಸಚಿವರಿಗೆ ಒಂದು ವರ್ಷದಿಂದ ವೇತನವೇ ಇರಲಿಲ್ಲ. ಇತ್ತೀಚೆಗೆ ವೇತನ ಸಮಸ್ಯೆ ಬಗೆಹರಿದಿದೆ. ಇದರ ಹೊರತಾಗಿ ಬಳ್ಳಾರಿ ವಿವಿಯ ಕೆಲವಾದರೂ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಈ ವಿವಿಗೆ ಹಂಚಿಕೆ ಮಾಡಬೇಕಿತ್ತು. ಅದೂ ಆಗಿಲ್ಲ. ಈಗ ಹೊಸ ವಿವಿಗಳನ್ನು ಮುಚ್ಚುವ ವಿಚಾರ ಹಬ್ಬಿದ ಮೇಲಂತು ಅಲ್ಲಿನ ಸಿಬ್ಬಂದಿ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೂ, ಕೊಪ್ಪಳ ವಿವಿ ಅಡಿ ನಡೆಯುವ ಸ್ನಾತಕೋತ್ತರ ಕೇಂದ್ರದಲ್ಲಿ 70 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ತರಗತಿ ನಡೆಸಲಾಗುತ್ತಿದೆ.
ಮುಚ್ಚುವ ಆಲೋಚನೆಗೆ 2 ವರ್ಷ ಬೇಕಿತ್ತಾ?: ಹೊಸ ವಿವಿಗಳನ್ನು ಮುಚ್ಚಲು ಸರ್ಕಾರದ ಆಲೋಚನೆಗೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಮುಚ್ಚಲು ಬಿಡುವುದಿಲ್ಲ ಎಂದು ಜನಪ್ರತಿನಿಧಿಗಳು, ಸಾಹಿತಿಗಳು, ಹೋರಾಟಗಾರರು ಕಿಡಿಕಾರಿದ್ದಾರೆ. ಈಗಾಗಲೇ ಅನೇಕ ಹೋರಾಟಗಳನ್ನೂ ಮಾಡಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದ ಮೇಲೆ ಇಂಥ ಆಲೋಚನೆ ಮಾಡಿದ ಉದ್ದೇಶವೇನು? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಗೂ ವಿವಿ ಇದೆ, ವಿಜಯನಗರ ಜಿಲ್ಲೆಯಲ್ಲಿ ಹಂಪಿ ವಿವಿ ಇದೆ. ಗದಗ ಜಿಲ್ಲೆಯಲ್ಲಿಯೂ ಗ್ರಾಮೀಣ ವಿವಿ ಇದೆ. ಮಧ್ಯದಲ್ಲಿರುವ ಕೊಪ್ಪಳ ಜಿಲ್ಲೆ ಮಾತ್ರ ವಿವಿಯಿಂದ ವಂಚಿತವಾಗಬೇಕೇ ಎನ್ನುವ ಪ್ರಶ್ನೆ ಸ್ಥಳೀಯರದ್ದು. ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಪದವಿ ಮತ್ತು ಸ್ನಾತಕೊತ್ತರ ಶಿಕ್ಷಣದ ಕೊರತೆ ಬಹಳಷ್ಟಿದೆ. ಜಿಲ್ಲೆಯಲ್ಲಿ ಶೇ.14 ರಷ್ಟು ಮಂದಿ ಸಹ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿಲ್ಲ ಎನ್ನುವುದು ಇಲ್ಲಿಯ ಉನ್ನತ ಶಿಕ್ಷಣದ ಕೊರತೆಯನ್ನು ಎತ್ತಿ ಹೇಳುತ್ತದೆ. ದೂರ ಹೋಗಿ ಉನ್ನತ ಶಿಕ್ಷಣ ಪಡೆಯುವ ಶಕ್ತಿ ಜಿಲ್ಲೆಯ ವಿದ್ಯಾರ್ಥಿಗಳಿಗಿಲ್ಲ. ಹೀಗಾಗಿ, ಸ್ಥಳೀಯವಾಗಿಯೇ ಕೊಪ್ಪಳ ವಿವಿ ಪ್ರಾರಂಭವಾಗಿದ್ದು, ದೊಡ್ಡ ಆಶಾಭಾವನೆ ಮೂಡಿಸಿದೆ. ಅಂಥದ್ದರಲ್ಲಿ ಇದೀಗ ಈ ವಿವಿ ರದ್ದು ಮಾಡುವುದು ಸರಿಯಲ್ಲ ಎನ್ನುವುದು ಸ್ಥಳೀಯ ಶಿಕ್ಷಣ ಪ್ರೇಮಿಗಳ ಆಗ್ರಹ.
ಕೊಪ್ಪಳ ವಿವಿಯನ್ನು ಮುಚ್ಚಲು ಬಿಡುವ ಪ್ರಶ್ನೆಯೇ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹಿಂದುಳಿದ ಕೊಪ್ಪಳದಲ್ಲಿ ವಿಶೇಷ ಆದ್ಯತೆ ಮೇಲೆ ವಿವಿ ಮುಂದುವರಿಸುವಂತೆ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ.
-ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ
ಪಂಚಾಯ್ತಿ ತೆರಿಗೆಗೂ ಮಂಗಳೂರು ವಿವಿಯಲ್ಲಿ ದುಡ್ಡಿಲ್ಲ: ಮೂಲನಿಧಿ ಸೇರಿದಂತೆ ಎಲ್ಲವೂ ಖಾಲಿ!
ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಕೊಪ್ಪಳ ವಿವಿ ಮುಚ್ಚಲು ಬಿಡುವುದಿಲ್ಲ. ವಿವಿ ಉಳಿವಿಗಾಗಿ ಎಂಥ ಹೋರಾಟಕ್ಕೂ ಸಿದ್ಧ.
-ಅಲ್ಲಮಪ್ರಭು ಬೆಟ್ಟದೂರು, ಹೋರಾಟಗಾರರು