ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!

Published : Jul 14, 2026, 09:47 AM ISTUpdated : Jul 14, 2026, 10:52 AM IST
Summer Heat

ಸಾರಾಂಶ

ನೈರುತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕರ್ನಾಟಕದಲ್ಲಿ ಮಳೆಗಾಲದಲ್ಲಿಯೇ ಬೇಸಿಗೆಯಂತಹ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯ ಕೊರತೆಯಿಂದ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.

ಬೆಂಗಳೂರು: ಜೂನ್, ಜುಲೈ ತಿಂಗಳು ಬಂತೆಂದರೆ ಸಾಮಾನ್ಯವಾಗಿ ವರುಣನ ಆರ್ಭಟ ಜೋರಾಗಿರುತ್ತದೆ. ಅಲ್ಲಲ್ಲಿ ಅವಾಂತರಗಳು ಆಗುತ್ತಿರುತ್ತವೆ. ಆದರೆ ಈ ಬಾರಿ ರಾಜ್ಯದಲ್ಲಿ ಮಳೆಗಾಲ ಚಿತ್ರಣವೇ ಉಲ್ಟಾ ಆದಂತಾಗಿದೆ. ಮಳೆಗಾಲದಲ್ಲಿ ಜನರು ಬೇಸಿಗೆಯ ಬಿಸಿಲಿನ ಬೇಗೆಯನ್ನು ಅನುಭವಿಸುವಂತಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲಗೊಂಡಿರುವುದರಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಗಣನೀಯವಾಗಿ ಕುಸಿತವಾಗಿದ್ದು, ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗಿದೆ. ಜನರು ಸೆಕೆ ವಾತಾವರಣಕ್ಕೆ ಹೈರಾಣಾಗಿದ್ದಾರೆ

ಬೇಸಿಗೆಯಂತಾದ ಮಳೆಗಾಲ: ಕಂಗಾಲಾದ ಬೆಂಗಳೂರಿಗರು

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಳೆಗಾಲದ ಈ ಸಮಯದಲ್ಲಿ ತೀವ್ರ ತಂಪಾದ ವಾತಾವರಣ ಇರುತ್ತಿತ್ತು. ವಾಡಿಕೆಯಂತೆ ಇಲ್ಲಿನ ಗರಿಷ್ಠ ಉಷ್ಣಾಂಶ 28.3 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಬೇಕಿತ್ತು. ಆದರೆ ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 32.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಅಂದರೆ, ವಾಡಿಕೆಗಿಂತ 4.1 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗಿದ್ದು, ಬೆಂಗಳೂರಿಗರು ಬಿಸಿಲ ಬೇಗೆಗೆ ಬೆಂದು ಹೋಗುತ್ತಿದ್ದಾರೆ.

5 ವರ್ಷಗಳ ಬಳಿಕ ನಗರದಲ್ಲಿ ಜುಲೈ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. 2021ರ ಜುಲೈನಲ್ಲಿ ಗರಿಷ್ಠ ತಾಪಮಾನ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪುನಃ ಪ್ರಸಕ್ತ ಜುಲೈನಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಇನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.4 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಕಳೆದ 17 ದಿನಗಳಿಂದ ನಗರದಲ್ಲಿ ಮಳೆಯಾಗಿಲ್ಲ. ಮೋಡಗಳು ಇಲ್ಲದ ಕಾರಣ ಕಳೆದ 1 ವಾರದಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಜು.17ರವರೆಗೂ ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಹಾಗೂ ಬೆಂಗಳೂರಿನ ಹೆಚ್‌ಎಎಲ್ (HAL) ವಿಮಾನ ನಿಲ್ದಾಣ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ವ್ಯಾಪ್ತಿಯಲ್ಲೂ ತಾಪಮಾನದಲ್ಲಿ ಬರೋಬ್ಬರಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಕಂಡುಬಂದಿದೆ.

ರಾಯಚೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲು

ಇನ್ನು ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲಿನ ತಾಪಕ್ಕೆ ತುತ್ತಾಗಿರುವುದು ರಾಯಚೂರು ಜಿಲ್ಲೆ. ಈ ಅವಧಿಯಲ್ಲಿ ರಾಯಚೂರಿನಲ್ಲಿ ಸಾಮಾನ್ಯವಾಗಿ 33.1 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶ ಇರಬೇಕಿತ್ತು. ಆದರೆ ಈಗ ಅಲ್ಲಿ ಬರೋಬ್ಬರಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದರೆ ವಾಡಿಕೆಗಿಂತ 5.3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದ್ದು, ಜಿಲ್ಲೆಯ ಜನತೆ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.

ಒಣ ಹವೆ ಮುಂದುವರಿಕೆ: ಹವಾಮಾನ ಇಲಾಖೆ ಮಾಹಿತಿ

ನೈರುತ್ಯ ಮಾನ್ಸೂನ್ (Southwest Monsoon) ತೀವ್ರವಾಗಿ ದುರ್ಬಲಗೊಂಡಿರುವುದೇ ಈ ಹಠಾತ್ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಕೊರತೆಯಿಂದಾಗಿ ಈಗಿರುವ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ವಿಶೇಷವಾಗಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಮುಂಬರುವ ದಿನಗಳಲ್ಲೂ ಮಳೆ ಚುರುಕಾಗದಿದ್ದರೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎಯಿಂದ ಮಹತ್ವದ ಸೂಚನೆ
'ಭಾರತ್ ಜೋಡೋ' ಸಂಘ ಸ್ಥಾಪನೆ, ಸದಸ್ಯತ್ವ ನೋಂದಣಿ ಹೇಗೆ? ವಾರ್ಷಿಕ ₹10 ಲಕ್ಷ ಅನುದಾನ