
ಬೆಂಗಳೂರು: ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಸಲುವಾಗಿ ರಾಜ್ಯದ ಗ್ರಾಮ ಪಂಚಾಯ್ತಿಗಳು ಮತ್ತು ನಗರ ವಾರ್ಡುಗಳ ವ್ಯಾಪ್ತಿಯಲ್ಲಿ ಒಟ್ಟು 10 ಸಾವಿರ ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲು ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಮಾಡಿದೆ.
ಕಳೆದ ಸಚಿವ ಸಂಪುಟ ಸಭೆ ತೀರ್ಮಾನ ಆಧರಿಸಿ ಸರ್ಕಾರದ ಆದೇಶ ಹೊರಬಿದ್ದಿದ್ದು, ಸಂಘದ ರಚನೆ, ಸದ್ಯತ್ವ ನೋಂದಣಿ, ಖರ್ಚು ವೆಚ್ಚಗಳ ಕುರಿತು ಸಮಗ್ರ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿದೆ. ಪ್ರತಿಯೊಂದು ಸಂಘದ ಒಬ್ಬ ತರಬೇತುದಾರನಿಗೆ ವಾರ್ಷಿಕ 24 ಸಾವಿರ ರು. ಗೌರವಧನ ಸೇರಿ ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರು. ಅನುದಾನ, ಆಡಳಿತ ಮತ್ತು ಪ್ರತಿ ಘಟಕ ವೆಚ್ಚ(ಪಿಎಂಯು)ವಾಗಿ 10 ಕೋಟಿ ರು. ಒಳಗೊಂಡು ಒಟ್ಟಾರೆ 1,010 ಕೋಟಿ ರು. ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಸರಾಸರಿ 6000 ಸಂಘಗಳು, ನಗರ ವಾರ್ಡುಗಳ ವ್ಯಾಪ್ತಿಯಲ್ಲಿ ಸರಾಸರಿ 4000 ಸಂಘಗಳನ್ನು ಸ್ಥಾಪಿಸಲಾಗುವುದು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ಮತ್ತು ಜಿಬಿಎ ವ್ಯಾಪ್ತಿಯಲ್ಲಿ ಸರಾಸರಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಸೂಚಿಸಲಾಗಿದೆ.
ಯೋಜನೆಯ ಅನುಷ್ಠಾನಕ್ಕಾಗಿ ಆಡಳಿತ ಮತ್ತು ಪಿಎಂಯು ವೆಚ್ಚವನ್ನು ಪ್ರತಿ ವರ್ಷ ಅಂದಾಜು 10 ಕೋಟಿ ರು.ಗಳನ್ನು ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭರಿಸುತ್ತದೆ. ಮಹಾನಗರ ಪಾಲಿಕೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಯೋಜನೆಗೆ ತಗಲುವ ವೆಚ್ಚವನ್ನು ತಮ್ಮ ಸ್ವಂತ ಬಜೆಟ್‌ನಲ್ಲಿ ಬರಿಸಬೇಕು.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖಾಂತರ ಅನುಷ್ಠಾನ ಮಾಡಲಾಗುವುದು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಅನುಷ್ಠಾನ ಮಾಡಬೇಕು ಎಂದು ಸೂಚಿಸಲಾಗಿದೆ.
ಒಂದು ಘಟಕ ಅಥವಾ ಸಂಘ ರಚನೆಗೆ ಕನಿಷ್ಠ 100 ಯುವ ಸದಸ್ಯರಿರಬೇಕು. ಸದಸ್ಯರಾಗಲು ಕನಿಷ್ಠ 16 ವರ್ಷದಿಂದ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಂದರೆ ಯುವಕ ಯುವತಿಯರಿಗೆ ಮಾತ್ರ ಇಲ್ಲಿ ಅವಕಾಶ. ಅಪ್ಲಿಕೇಶನ್ ಹಾಕುವ ಯುವಕರು ಅದೇ ಗ್ರಾಪಂ ಅಥವಾ ವಾರ್ಡ್‌ನ ನಿವಾಸಿಯಾಗಿರಬೇಕು. ಇದನ್ನು ಆರ್ಡಿನರಿ ರೆಸಿಡೆಂಟ್ ಅಂತ ಕರೆಯುತ್ತಾರೆ. ಒಬ್ಬ ವ್ಯಕ್ತಿ ಕೇವಲ ಒಂದು ಸಂಘದಲ್ಲಿ ಮಾತ್ರ ಸದಸ್ಯನಾಗಲು ಅರ್ಹನಾಗಿರುತ್ತಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ