'ಕನ್ನಡಕ್ಕಾಗಿ ನಾವು' ಅಭಿಯಾನ ಶುರು: ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷ!

By Kannadaprabha News  |  First Published Oct 25, 2021, 6:48 AM IST

* ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷ

* ಕನ್ನಡಕ್ಕಾಗಿ ನಾವು ಅಭಿಯಾನ ಶುರು

* ಕನ್ನಡ, ಸಂಸ್ಕೃತಿ ಸಚಿವ ಸುನಿಲ್‌ ಚಾಲನೆ


ಬೆಂಗಳೂರು(ಅ.25):ಕನ್ನಡ ರಾಜ್ಯೋತ್ಸವ(kannada Rajyotsava) ಪ್ರಯುಕ್ತ ಅ.24ರಿಂದ ಅ.31ರವರೆಗೆ ಹಮ್ಮಿಕೊಂಡಿರುವ ‘ಕನ್ನಡಕ್ಕಾಗಿ ನಾವು’(Kannadakkaagi Naavu) ವಿಶೇಷ ಅಭಿಯಾನ ಹಾಗೂ ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷವಾಕ್ಯ ಅಡಿ ನಡೆಯುವ ಸರಣಿ ಕಾರ್ಯಕ್ರಮಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿ.ಸುನಿಲ್‌ ಕುಮಾರ್‌(V Sunil Kumar) ಭಾನುವಾರ ಚಾಲನೆ ನೀಡಿದ್ದಾರೆ.

ಇದೇ ವೇಳೆ, ರಾಜ್ಯದ ಜನತೆ ಎಲ್ಲೆಡೆ ಕನ್ನಡವನ್ನು(Kannada) ಬಳಕೆ ಮಾಡಬೇಕು. ಈ ಮೂಲಕ ಕನ್ನಡ ಬೆಳೆಸಬೇಕು. ಜತೆಗೆ ಅ.28ರಂದು ಬೆಳಗ್ಗೆ 11 ಗಂಟೆಯಿಂದ 11.30 ಗಂಟೆವರೆಗೆ ಲಕ್ಷಕಂಠಗಳಲ್ಲಿ ಕನ್ನಡ ಗೀತೆಗಳ ಗಾಯನ ಮಾಡಬೇಕು. ಆ ಮೂಲಕ ಪ್ರತಿಯೊಬ್ಬ ಕನ್ನಡಿಗನೂ ಕನ್ನಡಕ್ಕೆ ಗೌರವ ಕೊಡಬೇಕು. ಇದೊಂದು ದಾಖಲೆಯ ಕಾರ್ಯಕ್ರಮ ಆಗಬೇಕು ಎಂದು ಕರೆ ನೀಡಿದ್ದಾರೆ.

Tap to resize

Latest Videos

ಲಾಲ್‌ಬಾಗ್‌(lalbagh) ಉದ್ಯಾನದಲ್ಲಿನ ಕೆಂಪೇಗೌಡ ಗೋಪುರದ ಎದುರು ‘ಮಾತಾಡ್‌ ಮಾತಾಡ್‌ ಕನ್ನಡ’ ಕಿರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿರುವವರು ಗುಂಪು-ಗುಂಪಾಗಿ ಕನ್ನಡದ ಹಾಡು ಹಾಡಬೇಕು. ಕಾರ್ಖಾನೆ, ಕಚೇರಿ, ಅಪಾರ್ಟ್‌ಮೆಂಟ್‌ಗಳಲ್ಲಿರುವವರು ಹೊರಬಂದು ಲಕ್ಷ ಕಂಠಗಳ ಗಾಯನದಲ್ಲಿ ತೊಡಗಿಕೊಳ್ಳಬೇಕು. ರಾಜ್ಯದ ಹೊರಗಿನವರೂ ಸಹ ಅಭಿಯಾನದಲ್ಲಿ ಭಾಗವಹಿಸಬೇಕು. ಕನ್ನಡದ ಪ್ರೇಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವ್ಯಕ್ತಿಪಡಿಸಬೇಕು.

ಈ ವೇಳೆ ‘ಹುಟ್ಟಿದ್ದರೆ ಕನ್ನಡನಾಡಲ್ಲಿ ಹುಟ್ಟಬೇಕು’, ‘ಬಾರಿಸು ಕನ್ನಡ ದಿಂಡಿಮವ’, ‘ಜೋಗದ ಸಿರಿ’ ಬೆಳಕಿನಲ್ಲಿ ಹಾಡುಗಳನ್ನು ಹಾಡಬಹುದು. ಸಮಯ ಇದ್ದರೆ ಇನ್ನಷ್ಟುಹಾಡುಗಳನ್ನೂ ಹಾಡಬಹುದು ಎಂದು ಮನವಿ ಮಾಡಿದರು.

ಎಲ್ಲೆಡೆ ಕನ್ನಡ ಬಳಕೆ ಮಾಡಿ:

ಸಾರ್ವಜನಿಕರು ಸಾಧ್ಯವಾದಷ್ಟುಎಲ್ಲ ಕಡೆ ಕನ್ನಡ ಬಳಕೆ ಮಾಡಿ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸಬೇಕು. ಕನ್ನಡ ನಮ್ಮ ಸಂಸ್ಕೃತಿ. ಕನ್ನಡವನ್ನು ಉಳಿಸಿ ಬೆಳೆಸಲು ದೊಡ್ಡ ಪ್ರಮಾಣದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮನೆ ಮನೆಗಳಲ್ಲಿ ಹಾಗೂ ಮನ ಮನಗಳಲ್ಲಿ ಕನ್ನಡ ಬಳಸುವ ಮೂಲಕ ಕನ್ನಡದ ವಾತಾವರಣ ನಿರ್ಮಾಣ ಆಗಬೇಕು. ಕನ್ನಡ ಭಾಷೆ ಬಳಕೆ ಮಾಡುವುದಕ್ಕೆ ಕೀಳರಿಮೆ ಬೇಡ. ಇದು ನಮ್ಮ ಭಾಷೆ ಎಂಬ ಅಭಿಮಾನ ಇರಲಿ. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯನ್ನೇ ಬಳಕೆ ಮಾಡಿ ಎಂದು ಕರೆ ನೀಡಿದರು.

೬೬ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ʻಕನ್ನಡಕ್ಕಾಗಿ ನಾವುʼ ವಿಶೇಷ ಅಭಿಯಾನವನ್ನು ಕಿರು ನಾಟಕ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕುವೆಂಪು ಭಾಷಾ ಭಾರತಿಯಿಂದ ಪ್ರಕಟಿಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. pic.twitter.com/1DEmQEOqNd

— Sunil Kumar Karkala (@karkalasunil)

ಕನ್ನಡದಲ್ಲೇ ಸಹಿ ಹಾಕಬೇಕು:

ಕನ್ನಡದಲ್ಲಿ ಸಹಿ ಅಭಿಯಾನದ ವಿಚಾರವಾಗಿ ಮಾತನಾಡಿದ ಅವರು, ಸಹಿ ಹಾಗೂ ಸರ್ಕಾರಿ ಸುತ್ತೋಲೆ ಎರಡೂ ಕನ್ನಡದಲ್ಲೇ ಆಗಬೇಕು ಇದಕ್ಕೆ ನನ್ನ ಬೆಂಬಲವಿದೆ. ಜತೆಗೆ ಚರವಾಣಿ (ಮೊಬೈಲ್‌) ಸಂದೇಶಗಳನ್ನೂ ಕನ್ನಡದಲ್ಲೇ ಕಳುಹಿಸಬೇಕು. ಕನ್ನಡ ಬೆಳವಣಿಗೆಯು ಈ ಅಭಿಯಾನದ ಮೂಲಕ ಹೊಸ ರೂಪ ಪಡೆದುಕೊಂಡಿದೆ ಸ್ಪಷ್ಟಪಡಿಸುತ್ತೇನೆ. ಹಿಂದೆ ಯಾವ ರೀತಿ ಇತ್ತು ಎಂಬ ಬಗ್ಗೆ ಚರ್ಚೆ ಬೇಡ. ಮುಂದೆ ಯಾವ ರೀತಿ ಆಗಬೇಕು ಅನ್ನೋದನ್ನ ಚರ್ಚೆ ಮಾಡೋಣ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ:

ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಾಣಿಸಲಾಗುತ್ತಿದೆ. ಜತೆಗೆ ಮೆಟ್ರೋದಲ್ಲೂ ಕೂಡ ಕನ್ನಡ ಭಾಷೆ ನಿರ್ಲಕ್ಷಿಸಲಾಗುತ್ತಿದೆ ಎಂಬ ಮಾತು ಇದೆ. ಈಗಾಗಲೇ ಕೆಲವು ಕಾರ್ಯಕ್ರಮಗಳಲ್ಲಿ ವ್ಯತ್ಯಾಸಗಳು ಆಗಿವೆ. ಮತ್ತೆ ಇಂತಹ ತಪ್ಪುಗಳ ಆಗದಂತೆ ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ. ಮೆಟ್ರೋದಲ್ಲಿ ಕನ್ನಡ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ನೋಟಿಸ್‌ ಕೂಡ ಇಲಾಖೆ ವತಿಯಿಂದ ನೀಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ಭಿತ್ತಿ ಪತ್ರಗಳ ಮತ್ತು ವೀಡಿಯೋಗಳ ಅನಾವರಣ ಮಾಡಿದರು. ಕಾಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಳಾ, ಇಲಾಖೆಯ ನಿರ್ದೇಶಕ ಎಸ್‌. ರಂಗಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್‌ ಭಟ್‌, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.

ಮೇಟ್ರೋ ನಿಲ್ದಾಣದಲ್ಲಿ ಮಾತಾಡ್‌ ಮಾತಾಡ್‌ ಕನ್ನಡ’ ಸೆಲ್ಫಿ!

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಅಭಿಯಾನ ಬಿಂಬಿಸುವ ‘ಮಾತಾಡ್‌ ಮಾತಾಡ್‌ ಕನ್ನಡ’ ಹೆಸರಿನ ಸೆಲ್ಫಿ ಕೇಂದ್ರಕ್ಕೆ ಚಾಲನೆ ನೀಡಿದರು. ಸ್ವತಃ ಸೆಲ್ಫಿ ತೆಗೆದುಕೊಂಡ ಅವರು ಇದೇ ವೇಳೆ ಮೆಟ್ರೋ ನಿಲ್ದಾಣದಲ್ಲಿ ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷ ವಾಕ್ಯದ ಭಿತ್ತಿ ಪತ್ರಗಳನ್ನು ಅಂಟಿಸಿದರು.

ನೀತಿ ಸಂಹಿತೆ ಬಳಿಕ ನಾಡಗೀತೆ ಕುರಿತು ನಿರ್ಧಾರ: ಸುನಿಲ್‌

ಬೆಂಗಳೂರು: ನಾಡಗೀತೆಯ ಸಮಯ ಮಿತಿ ಹಾಗೂ ಧಾಟಿ ಬದಲಿಸುವ ಕುರಿತು ಚುನಾವಣೆ ನೀತಿಯ ಸಂಹಿತೆ ಮುಗಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಗೀತೆ ಧಾಟಿ ಕುರಿತಂತೆ ಸರ್ಕಾರ ರಚಿಸಿದ ಸಮಿತಿ ಈಗಾಗಲೇ ವರದಿಯನ್ನು ನೀಡಿದೆ. ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಮುಖ್ಯಮಂತ್ರಿಗಳು ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.

ಪರ್ವ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ

ಇದೇ ವೇಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಡಾ.ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕಕ್ಕೆ ಸಚಿವ ಸುನಿಲ್‌ ಕುಮಾರ್‌ ಚಾಲನೆ ನೀಡಿದರು. 8 ಗಂಟೆಗಳ ಅವಧಿಯ ಈ ನಾಟಕಕ್ಕೆ ಪ್ರವೇಶ ಶುಲ್ಕ 500 ರೂ.ನಿಗದಿ ಪಡಿಸಲಾಗಿತ್ತು. ನಾಟಕಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಏನಿದು ಕಾರ‍್ಯಕ್ರಮ?

- ಅ.24ರಿಂದ ಅ.31ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಕಾರ‍್ಯಕ್ರಮ

- ಅ.28ರಂದು ಲಕ್ಷ ಜನರಿಂದ ಏಕಕಾಲಕ್ಕೆ ಕನ್ನಡ ಗೀತೆ ಗಾಯನ ಕಾರ‍್ಯಕ್ರಮದ ದಾಖಲೆ

- ಅಂದು ಎಲ್ಲರೂ ಮನೆ, ಕಚೇರಿಯಿಂದ ಹೊರಬಂದು ಸಾಮೂಹಿಕವಾಗಿ ಹಾಡಲು ಮನವಿ

- ‘ಹುಟ್ಟಿದ್ದರೆ ಕನ್ನಡ ನಾಡಲ್ಲಿ’, ‘ಬಾರಿಸು ಕನ್ನಡ’, ‘ಜೋಗದ ಸಿರಿ’ ಹಾಡು ಹಾಡಬಹುದು

- ಒಂದು ವಾರ ಮನೆ, ಕಚೇರಿ ಎಲ್ಲೆಡೆ ಕನ್ನಡ ಮಾತನಾಡಿ, ಕನ್ನಡ ಬಳಕೆಗೆ ಒತ್ತು ನೀಡಬೇಕು

click me!