
ಬಾಗಲಕೋಟೆ, (ಅ.26): ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿ ಬಿದ್ದಿದ್ದ ವಿದ್ಯುತ್ ತಂತಿ ತಲುಗಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬಾಗಲಕೋಟೆಯ ನವನಗರದ 49ನೇ ಸೆಕ್ಟರ್‌ನಲ್ಲಿ ದುರಂತ ನಡೆದಿದೆ.
ಸುಮಾರು ದಿನಗಳಿಂದ ನೆಲಕ್ಕೆ ಅಂಟಿಕೊಂಡಿದ್ದ ವಿದ್ಯುತ್ ತಂತಿ ತುಳಿದು ಈ ದುರಂತ ಸಂಭವಿಸಿದೆ. ಸ್ಥಳೀಯರು ಹಲವು ಬಾರಿ ತಂತಿ ತೆಗೆದುಹಾಕುವಂತೆ ಮನವಿ ಮಾಡಿದ್ದರೂ ಹೆಸ್ಕಾಂ ಸಿಬ್ಬಂದಿ ಕಡೆಗಣಿಸಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ಬದಿಯ ವಿದ್ಯುತ್ ದೀಪಗಳ ಸ್ವಿಚ್ ಮತ್ತು ಬಟನ್‌ಗಳಿರುವ ಬೋರ್ಡ್‌ನ ಪಕ್ಕದಲ್ಲೇ ವಿದ್ಯುತ್ ತಂತಿ ಬಿದ್ದಿತ್ತು. ರಾಜಸ್ಥಾನ ಮೂಲದ ಆ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಂತಿ ತುಳಿದಿದ್ದಾನೆ. ಕೂಡಲೇ ವಿದ್ಯುತ್ ಆಘಾತಕ್ಕೊಳಗಾಗಿ ನಡುಗಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಘಟನೆಯನ್ನು ವಿಡಿಯೋ ಮಾಡಿದ್ದು, ನೆಲದಲ್ಲಿ ನರಳಾಡುತ್ತಾ, ನಡುಗುತ್ತಾ ಜೀವ ಬಿಟ್ಟ ದೃಶ್ಯ ದಾರುಣವಾಗಿದೆ. ಸ್ಥಳೀಯರು ಬದುಕಿಸಲು ಪ್ರಯತ್ನಿಸಿದರು. ಕಟ್ಟಿಗೆ ತಂದು ತಂತಿಯನ್ನು ದೂರ ಮಾಡಲು ಯತ್ನಿಸಿದರಾದರೂ, ನರಳುತ್ತಾ ಜೀವ ಬಿಟ್ಟ ವ್ಯಕ್ತಿಯನ್ನು ರಕ್ಷಿಸಲಾಗಲಿಲ್ಲ. ನಂತರ ಅಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿದ್ದರು.
ಸಾರ್ವಜನಿಕರು ಹಲವು ದಿನಗಳಿಂದ ತಂತಿ ತೆಗೆದುಹಾಕಿ ಎಂದು ಮನವಿ ಮಾಡಿದ್ದರೂ ಹೆಸ್ಕಾಂ ಸಿಬ್ಬಂದಿ ಕ್ಯಾರೆ ಎನ್ನದೇ ಇದ್ದರು. ಈ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯ ಹೆಸರು, ಇತರ ವಿವರಗಳು ಇನ್ನೂ ಗೊತ್ತಾಗಿಲ್ಲ. ಹೆಸ್ಕಾಂ ವಿರುದ್ಧ ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ