ಆಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಆಹ್ವಾನ ಸಿಗದಿದ್ದರೂ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೇಗೆ ಆಹ್ವಾನ ಸಿಕ್ತು? ಇಲ್ಲಿದೆ ನೋಡಿ ಮಾಹಿತಿ..
ಬೆಂಗಳೂರು (ಜ.03): ರಾಮ ಜನ್ಮಭೂಮಿ ಎಂದೇ ಇತಿಹಾಸ ಹೊಂದಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದ್ದು, ಜ.22ರಂದು ಉದ್ಘಾಟನೆಯನ್ನೂ ಮಾಡಲಾಗುತ್ತಿದೆ. ಆದರೆ, ಕೆಲವು ಪ್ರಮುಖರಿಗಷ್ಟೇ ಆಹ್ವಾನ ನೀಡಲಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳನ್ನೂ ಕಾರ್ಯಕ್ರಮದಿಂದ ದೂರವಿರಿಸಲಾಗಿದೆ. ಅದಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೊರತಾಗಿಲ್ಲ. ಹೀಗಿರುವಾಗ ಸಿಎಂಗೆ ಆಹ್ವಾನ ಸಿಗದ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವೆ ಲಕ್ಚ್ಮೀ ಹೆಬ್ಬಾಳ್ಕರ್ ಅವರಿಗೆ ಹೇಗೆ ಅಹ್ವಾನ ಸಿಕ್ಕಿದೆ ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಹೌದು, ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಕ್ಷತಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಇಂದು ನಮ್ಮ ಮನೆಗೆ ಆಗಮಿಸಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ನೀಡಿದ್ದೇನೆ, ಆಹ್ವಾನ ನೀಡಿಲ್ಲ: ಶಾಸಕ ಲಕ್ಷ್ಮಣ ಸವದಿ
ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಟೀಕೆ ಮಾಡುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಮ ಮಂದಿರ ಉದ್ಘಾಟನೆಗೆ ಅಹ್ವಾನವನ್ನು ನಿರಾಕರಣೆ ಮಾಡಲಾಗಿದೆ. ಇನ್ನು ರಾಮಮಂದಿರ ಉದ್ಘಾಟನೆಗೆ ಹಲವು ಮಾನದಂಡಗಳನ್ನು ಅನುಸರಿಸಿದ ವಿಶ್ವ ಹಿಂದೂ ಪರಿಷತ್ ದೇಶದ ಪ್ರಮುಖ ಪಕ್ಷಗಳ ತಲಾ ಒಬ್ಬ ಮುಖಂಡರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅದರಲ್ಲಿ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಅವರಿಗೆ ಜೊತೆಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಆಹ್ವಾನಿಸಲಾಗಿದ್ದು, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿಯನ್ನೂ ಹೊರಗಿಡಲಾಗಿದೆ.
ಇನ್ನು ಕರ್ನಾಟಕದ ಜೆಡಿಎಸ್ ಪಕ್ಷದಿಂದ ಹೆಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆಪಾದನೆ ಮಾಡಲಾಗುತ್ತಿದೆ. ಆದರೆ, ನೈಜವಾಗಿ ದೇವೇಗೌಡರನ್ನು ಮಾಜಿ ಪ್ರಧಾನಿ ಎಂಬ ಪಟ್ಟಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿದ್ದು, ಜೆಡಿಎಸ್ ಪಕ್ಷದ ಮುಖಂಡರನ್ನಾಗಿ ಪರಿಗಣಿಸಿ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ.
ದೇಶದ ಗಣ್ಯಾತಿ ಗಣ್ಯರಿಗೂ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅವಕಾಶ ಸಿಕ್ಕಿಲ್ಲ. ಇನ್ನು ಬೆಳಗಾವಿಯವರೇ ಆಗಿರುವ ಲಕ್ಷ್ಮಣ ಸವದಿ ಅವರೂ ಕೂಡ ನಾವು ರಾಮಮಂದಿರ ನಿರ್ಮಾಣಕ್ಕೆ ಲಕ್ಷಗಟ್ಟಲೆ ಹಣ ದೇಣಿಗೆ ನೀಡಿದ್ದರೂ ನಮಗೆ ಆಹ್ವಾನ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೇಗೆ ರಾಮ ಮಂದಿರ ಉದ್ಘಾಟನೆಗೆ ಅವಕಾಶ ಸಿಕ್ಕಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ, ಇದಕ್ಕೆ ಅಸಲಿ ಉತ್ತರವೇ ಬೇರೆಯಾಗಿದೆ.
ಅಯೋಧ್ಯೆ ರಾಮಮಂದಿರದಲ್ಲಿ ಬ್ರಾಹ್ಮಣರಿಂದಲೇ ಮೊದಲ ಪೂಜೆ ಮಾಡಿಸ್ತೇವೆಂದ ಸೆಕ್ಯೂಲರ್ ಕಾಂಗ್ರೆಸ್ ಸಚಿವ!
ಮಂತ್ರಾಕ್ಷತೆಯನ್ನೇ ಆಹ್ವಾನವೆಂದು ಹೇಳಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್!
ಹೌದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮಗೆ ರಾಮ ಮಂದಿರ ಉದ್ಘಾಟನೆಗೆ ವಿಶ್ವ ಹಿಂದೂ ಪರಿಷತ್ ಮುಖಂಡರು ಬಂದು ಆಹ್ವಾನ ನೀಡಿದ್ದಾರೆ ಎಂದು ಬರೆದುಕೊಂಡಿರುವುದು ತಪ್ಪು ಮಾಹಿತಿ ಆಗಿದೆ, ವಿಹಿಂಪ ಮುಖಂಡರು ರಾಜ್ಯದ ಪ್ರತಿ ಮನೆಗೂ ರಾಮ ಮಂದಿರ ಉದ್ಘಾಟನೆಗೂ ಮುನ್ನ 'ಮಂತ್ರಾಕ್ಷತೆ' ಹಂಚಿಕೆ ಮಾಡಲು ಮುಂದಾಗಿದೆ. ಹೀಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೂ ತೆರಳಿದ ವಿಹಿಂಪ ಮುಖಂಡರು ಅಕ್ಷತೆಯನ್ನು ನೀಡಿದ್ದನ್ನು ತಪ್ಪಾಗಿ ಭಾವಿಸಿದ ಸಚಿವೆ ತಮಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ ಎಂದು ಬರೆದುಕೊಂಡಿದ್ದಾರೆ.