
ಬೆಂಗಳೂರು (ಸೆ.22): ಇಂದಿನಿಂದ ದೇಶಾದ್ಯಂತ ಜಿಎಸ್‌ಟಿ ಇಳಿಕೆಯ ಲಾಭ ದೇಶದ ನಾಗರೀಕರಿಗೆ ಸಿಗಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶವನ್ನು ಉದ್ದೇಶಿಸಿ ಜಿಎಸ್‌ಟಿ ಕಡಿತದಿಂದ ಉಂಟಾಗುವ ಲಾಭವನ್ನು ತಿಳಿಸಿದ್ದರು. ಸೇವಿಂಗ್ಸ್ & ಸ್ವದೇಶಿ ನಮ್ಮ ಮಂತ್ರವಾಗಿರಬೇಕು ಎಂದಿದ್ದರು. ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಎಸ್ಟಿ ಇಳಿಕೆ ಮೂಲಕ ರಾಜ್ಯಕ್ಕೆ ನಷ್ಟ ಮಾಡಿಸಿ ಕೇಂದ್ರ ಲಾಭ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ. ಜಿಎಸ್‌ಟಿ ದರ ಕಡಿತಕ್ಕೆ ನಮ್ಮ ಬೆಂಬಲವಿದೆ. ಆದರೆ, ರಾಜ್ಯಕ್ಕೆ ಆಗುವ ನಷ್ಟವನ್ನು ಸರಿದೂಗಿಸಬೇಕು ಎಂದು ಆಗ್ರಹಿಸಿದ್ದಾರೆ.
ದರ ಕಡಿತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನ್ಯಾಯ ಆಗೋ ರೀತಿಯಲ್ಲಿ ಮಾಡಿದ್ದಾರೆ. ಇದರಿಂದ ರಾಜ್ಯಗಳಿಗೆ ಒಂದುವರೆ ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ. ಈ ನಷ್ಟವನ್ನ ಭರಿಸುವಂತ ವ್ಯವಸ್ಥೆಯನ್ನ ಕೇಂದ್ರ ಮಾಡಿಕೊಡಬೇಕು. ಇಲ್ಲದೆ ಹೋದಲ್ಲಿ ರಾಜ್ಯಗಳಿಗೆ ಮುಂದೆ ಸರ್ಕಾರಗಳನ್ನ ನಡೆಸುವುದು ಕಷ್ಟ ಆಗುತ್ತೆ. ರಾಜ್ಯ ಸರ್ಕಾರಗಳು ಸ್ವಾಯತ್ತವಾಗಿ ಕೆಲಸ ಮಾಡಲು ವರಮಾನ ಭದ್ರತೆ ಇರಬೇಕು. ಇಲ್ಲ ಎಂದಾದಲ್ಲಿ ಯಾವ ರಾಜ್ಯ ಸರ್ಕಾರ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ವರಮಾನ ನಷ್ಟಕ್ಕೆ ಪರಿಹಾರ ಸೂತ್ರವನ್ನ ಮಾಡಿ, ವರಮಾನ ಭರಿಸಬೇಕು ಅನ್ನೋದು ನಮ್ಮ ಬೇಡಿಕೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ರಾಜ್ಯದ ಹಕ್ಕುಗಳನ್ನ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುರಿದಿದೆ. ಏಕಪಕ್ಷೀಯವಾಗಿ ತೀರ್ಮಾನ ಮಾಡಿ ರಾಜ್ಯಗಳಿಗೆ ಅಪಾರ ನಷ್ಟವನ್ನ ಉಂಟುಮಾಡಿದೆ. ರಾಜ್ಯಗಳ ಮೇಲೆ ಹಿಡಿತ ಸಾಧಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯವನ್ನ ನಡೆಸುವುದೇ ಕಷ್ಟ ಆಗುತ್ತೆ. ಸಣ್ಣಪುಟ್ಟ ವಿಚಾರಗಳಿಗೂ ನಾವು ಕೇಂದ್ರ ಸರ್ಕಾರದ ಮೇಲೆ ಅವಲಂಬಿಸಬೇಕಾಗುತ್ತೆ. ರಾಜ್ಯಗಳನ್ನ ಧ್ವಂಸ ಮಾಡುತ್ತಿರೋದು ಸರಿಯಲ್ಲ.ದರ ಇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಬೆಂಬಲಕೊಟ್ಟಿದ್ದೇವೆ. ಆದರೆ, ರಾಜ್ಯಗಳನ್ನ ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ.
ಕರ್ನಾಟಕಕ್ಕೆ ಎಲ್ಲಾ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ನಾವು ಕಟ್ಟುವ 1 ರೂಪಾಯಿ ತೆರಿಗೆಯಲ್ಲಿ ನಮಗೆ 14 ಪೈಸೆ ಮಾತ್ರ ಮರಳಿ ಬರುತ್ತಿದೆ. ಹಣಕಾಸು ಆಯೋಗದಿಂದ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ಬರುವ ಆದಾಯ ನಮಗೆ ಕೊಡುತ್ತಿಲ್ಲ. ಇವೆಲ್ಲಾ ನಷ್ಟಗಳ ನಡುವೆ ಕರ್ನಾಟಕಕ್ಕೆ ಜಿಎಸ್ಟಿಯಿಂದ 15 ಸಾವಿರ ಕೋಟಿ ರೂಪಾಯಿ ಪ್ರತಿವರ್ಷ ನಷ್ಟವಾಗುತ್ತೆ ಎಂದು ಹೇಳಿದ್ದಾರೆ.
ಕರ್ನಾಟಕದಿಂದ ನಾವು ಸ್ಪಷ್ಟವಾಗಿ ಹೇಳಿದ್ದೆವು. ಸೆಸ್ ಗಳಿಂದ ಬರುವ ಆದಾಯವನ್ನ ರಾಜ್ಯಗಳಿಗೆ ಆಗುತ್ತಿರುವ ನಷ್ಟವನ್ನ ಭರಿಸಲು ಉಪಯೋಗಿಸಬೇಕು. ಇದರಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ರಾಜ್ಯಗಳ ನಷ್ಟಕ್ಕೆ ಪರಿಹಾರ ಸಿಕ್ಕ ರೀತಿ ಆಗುತ್ತೆ ಅನ್ನೋ ಸಲಹೆ ನೀಡಿದ್ದೆವು. ರಾಜ್ಯ ಸರ್ಕಾರಕ್ಕೆ ಬರ್ತಿದ್ದ ಸೆಸ್ ಗಳನ್ನ ತಮ್ಮ ಮುಷ್ಠಿಗೆ ತೆಗೆದುಕೊಂಡಿದ್ದಾರೆ. ಇದರಿಂದ ಕೇಂದ್ರಕ್ಕೆ 60 ಸಾವಿರ ಕೋಟಿ ಆದಾಯ ಜಾಸ್ತಿಯಾಗಿದೆ. ರಾಜ್ಯಗಳನ್ನ ಮುಳುಗಿಸಿ ಕೇಂದ್ರ ಬದುಕುವುದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ತಿಳಿಸಿದ್ದಾರೆ.
ಹೇಗೆ ರಾಜ್ಯಗಳಿಗೆ ನಷ್ಟ ಪರಿಹಾರ ಮಾಡಿಕೊಡಬೇಕು ಅಂತ ನಾವು ಸಲಹೆ ನೀಡಿದ್ದೆವು. ನಮ್ಮ ಸಲಹೆಯನ್ನ ಲೆಕ್ಕಕ್ಕೆ ಇಟ್ಟುಕೊಳ್ಳದೇ ಬಲ್ಡೋಸಿಂಗ್ ನೇಚರ್ ನಲ್ಲಿ ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಮಕಾವಸ್ತೆ ಮೀಟಿಂಗ್ ಕರೆದು ಮೊದಲೇ ತೀರ್ಮಾನ ಮಾಡಿಕೊಂಡು ಮಾಡಿದ್ದಾರೆ. ಒಕ್ಕೂಟ ವ್ಯವಸ್ಥೆಯ ನಿರ್ಧಾರಗಳಿಗೆ ಆಶಾಯಕ್ಕೆ ಸಂಪೂರ್ಣ ವಿರುದ್ದವಾಗಿದೆ. ಈ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ಲಾಭ ಮಾಡಿಕೊಂಡು ನಷ್ಟ ಎಲ್ಲ ರಾಜ್ಯಗಳ ಮೇಲೆ ಹೊರೆಸುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. 15 ರಿಂದ 16 ಸಾವಿರ ಕೋಟಿ ನಷ್ಟ ಆದಲ್ಲಿ ರಾಜ್ಯವನ್ನು ನಡೆಸೋದು ಹೇಗೆ? ತೆರಿಗೆ ನಮ್ಮ ಸ್ವಾಯತ್ತ ಅಧಿಕಾರ. ಆದರೆ, ಜಿಎಸ್ಟಿ ಬಂದ ಮೇಲೆ ಕೇಂದ್ರ ಸರ್ಕಾರದವರು ನಮ್ಮ ಸ್ವಾಯತ್ತತೆಯನ್ನ ಕಿತ್ತುಕೊಂಡಿದ್ದಾರೆ. ರಾಜ್ಯಗಳನ್ನ ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ರಾಜ್ಯಗಳು ಮೆಜಾರಿಟಿ ಇದೆ ಅಂತ ನಮ್ಮ ರೀತಿಯ ರಾಜ್ಯಗಳ ಧ್ವನಿಗೆ ಲೆಕ್ಕ ಕೊಡುತ್ತಿಲ್ಲ ಎಂದಿದ್ದಾರೆ.
ಯಾವ ರೀತಿ ಇಳಿಕೆ ಮಾಡಬೇಕು ಅಂತ ನಾವು ಸೂತ್ರಗಳನ್ನ ಕೊಟ್ಟಿದ್ದೆವು. ಆ ರೀತಿ ಮಾಡಿದರೆ ಕೇಂದ್ರ ಸರ್ಕಾರಕ್ಕೆ ನಷ್ಟವಾಗುತ್ತಿರಲಿಲ್ಲ. ಆದರೆ, ರಾಜ್ಯಗಳಿಗೆ ನಷ್ಟ ಮಾಡಿ ಕೇಂದ್ರ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ. ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಿರುವ ಹಣವನ್ನೇ ಅವರು ಇನ್ನು ಕೊಟ್ಟಿಲ್ಲ. ಕೇಂದ್ರ ಸರ್ಕಾರ ಈ ನಷ್ಟವನ್ನ ಸರಿದೂಗಿಸಿಕೊಡಬೇಕು. ಕೇಂದ್ರದ ಮುಂದೆ ಭಿಕ್ಷಾಪಾತ್ರ ಹಿಡಿದು ಕೂರಬಾರದು ಎಂದರೆ, ಸ್ವಾಯತ್ತತೆಗೆ ಸಂವಿಧಾನದ ಪ್ರಕಾರ ಅರ್ಥ ಇರಬೇಕು ಎಂದರೆ ನಷ್ಟವನ್ನ ಕೇಂದ್ರ ಸರ್ಕಾರ ಸರಿದೂಗಿಸಿಕೊಡಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ