ಕೆರೆ ನುಂಗಣ್ಣರ ಹಾಗೆ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ!

By Suvarna NewsFirst Published Feb 4, 2020, 6:04 PM IST
Highlights

ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಗರಂ/ ಖಾಸಗಿ ರಸ್ತೆ, ಕಟ್ಟಡ ತೆರವಿಗೆ ಗಡುವು/ ಅಧಿಕಾರಿಗಳು ಕೊಟ್ಟ ಸಬೂಬಿನಿಂದ ತೃಪ್ತರಾಗದ ಲೋಕಾಯುಕ್ತ/ ಕೆರೆ ಸಂರಕ್ಷಣೆಗೆ ನಮ್ಮ ಬೆಂಗಳೂರು ಫೌಂಡೇಶನ್ ನಿರಂತರ ಹೋರಾಟ

ಬೆಂಗಳೂರು(ಫೆ. 04)  ನಗರದ ಸಿಂಗಾಪುರ ಕೆರೆ, ಅಬ್ಬಿಗೆರೆ ಕೆರೆ ಹಾಗೂ ಕಗ್ಗದಾಸಪುರ ಕೆರೆ ಒತ್ತುವರಿ ತೆರವು ಕುರಿತು ಆದೇಶ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ್‌ ಶೆಟ್ಟಿಗರಂ ಆಗಿದ್ದಾರೆ.

ನಮ್ಮ ‘ಬೆಂಗಳೂರು ಪ್ರತಿಷ್ಠಾನ’ ನಗರದ ಕೆರೆಗಳ ಒತ್ತುವರಿ ಆಗಿರುವ ಬಗ್ಗೆ ನೀಡಿರುವ ದೂರಿನ ವಿಚಾರಣೆಯನ್ನು ನಡೆಸುತ್ತಿರುವ ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಅಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಬ್ಬಿಗೆರೆ ಮತ್ತು ಸಿಂಗಾಪುರ ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಖಾಸಗಿ ರಸ್ತೆಯನ್ನು ಮೂರು ತಿಂಗಳಲ್ಲಿ ತೆರವುಗೊಳಿಸಬೇಕು ಎಂದು ನಿರ್ದೇಶಿಸಿದರು.

8 ವಾರ ಗಡುವು: ಅಬ್ಬಿಗೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿರುವ ಪ್ರದೇಶವನ್ನು ಎಂಟು ವಾರಗಳಲ್ಲಿ ತೆರವುಗೊಳಿಸಬೇಕು ಎಂದು ಗಡುವು ನೀಡಿದರು. ಇದೇ ವೇಳೆ ಈ ಸಂಬಂಧ ಉತ್ತರ ನೀಡಿದ ಬಿಬಿಎಂಪಿ ಅಧಿಕಾರಿಗಳು, ಕೆರೆಗಳ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕೊಪ್ಪಳದ ಕೆರೆ ನೋಡಿ ರಾಕಿಂಗ್ ಸ್ಟಾರ್  ಯಶ್ ಹೇಳಿದ ಅದೊಂದು ಮಾತು

ಕಗ್ಗದಾಸಪುರ ಕೆರೆಯ ಅಕ್ರಮ ಒತ್ತುವರಿಯನ್ನು ಸಹ ತೆರವುಗೊಳಿಸಿಲ್ಲ. ಮುಂದಿನ ಮೂರು ತಿಂಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಆದೇಶಿಸಿದರು. ಅಲ್ಲದೇ, ಸಂಬಂಧಪಟ್ಟ ತಹಸೀಲ್ದಾರ್‌ಗೆ ಶೋಕಾಸ್‌ ನೊಟೀಸ್‌ ಜಾರಿ ಮಾಡಿದರು. ಗುಬ್ಬಲಾಲ ಕೆರೆ ಒತ್ತುವರಿ ಕುರಿತು ಸಮೀಕ್ಷೆ ನಡೆಸಲು ಇದೇ ವೇಳೆ ಸೂಚಿಸಿದರು.

ನಮ್ಮ ಬೆಂಗಳೂರು ಫೌಂಡೇಶನ್ ನಿರಂತರ ಹೋರಾಟ: ಬೆಂಗಳೂರಿನಲ್ಲಿ ಸಾವಿನ ಅಂಚಿಗೆ ತಲುಪಿರುವ ಕೆರೆ ರಕ್ಷಣೆಗೆ 'ನಮ್ಮ ಬೆಂಗಳೂರು ಫೌಂಡೇಶನ್' ನಿರಂತರ ಹೋರಾಟ ಮಾಡಿಕೊಂಡು ಬಂದಿದೆ.  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ 'ಯುನೈಟೆಡ್ ಬೆಂಗಳೂರು' ಅಭಿಯಾನವನ್ನು 2017ರಲ್ಲಿಯೇ ಆರಂಭ ಮಾಡಲಾಗಿದೆ. 2017ರ ಆಗಸ್ಟ್ 3ರಂದು ನಮ್ಮ ಬೆಂಗಳೂರು ಫೌಂಡೇಶಬ್ ಅಬ್ಬಿಗೆರೆ, ಸಿಂಗಾಪುರ ಕೆರೆ, ಕಗ್ಗದಾಸಪುರ ಕೆರೆ ಸೇರಿದಂತೆ 23 ಕೆರೆಗಳ ಉಳಿವಿಗೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿತ್ತು.

ಲೋಕಾಯುಕ್ತರು ನೀಡಿದ ಆದೇಶಗಳನ್ನು ಪಾಲನೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ.  ಬೆಂಗಳೂರಿಗರ ಹಿತವನ್ನು ಅಧಿಕಾರಿಗಳೆ ಬಲಿ ಕೊಡುತ್ತಿದ್ದಾರೆ. ಸರ್ಕಾರ ಇಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ನಮ್ಮ ಬೆಂಗಳೂರು ಫೌಂಡೇಶನ್ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

 

click me!