
ಬೆಂಗಳೂರು[ಫೆ.04]: ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ ಎಂದು ಸಿಐಡಿ ಹೈಕೋರ್ಟ್‌ಗೆ ತಿಳಿಸಿದೆ.
ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಪೀಠಕ್ಕೆ ತನಿಖಾಧಿಕಾರಿಯೂ ಆದ ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಬಾಲರಾಜ್ ವರದಿ ಸಲ್ಲಿಸಿದರು.
ಅರ್ಜಿ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ ಸಿಐಡಿ ತನಿಖಾಧಿಕಾರಿ ಖುದ್ದಾಗಿ 2020ರ ಫೆ.3ರೊಳಗೆ ನೋಟಿಸ್ ಜಾರಿ ಮಾಡಬೇಕು. ಆ ಕುರಿತು ಫೆ.3ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಜ.31ರಂದು ಹೈಕೋಟ್ ನಿರ್ದೇಶಿಸಿ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತ್ತು. ಅದರಂತೆ ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಸಿಐಡಿ ತನಿಖಾಧಿಕಾರಿ ವರದಿ ಸಲ್ಲಿಸಿದರು.
ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?
ನ್ಯಾಯಾಲಯದ ಜ.31ರ ಆದೇಶದಂತೆ ಶುಕ್ರವಾರ ಬಿಡದಿ ಧ್ಯಾನಪೀಠ ಆಶ್ರಮಕ್ಕೆ ತೆರಳಿದ್ದೆವು. ಆದರೆ, ಆರೋಪಿಯಾದ ಸ್ವಾಮೀಜಿ ಅಲ್ಲಿ ಇರಲಿಲ್ಲ. ಅವರು ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿ ಇದ್ದಾರೆ. ಹೀಗಾಗಿ ಅವರ ಪರವಾಗಿ ಆಶ್ರಮದಲ್ಲಿದ್ದ ಕುಮಾರಿ ಅಚಲಾನಂದಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಆಗ ಕೋರ್ಟ್ ಮುಂದೆ ಹಾಜರಾದ ಅಚಲಾನಂದ ಪ್ರಮಾಣಪತ್ರ ಸಲ್ಲಿಸಿ, ನೋಟಿಸ್ ಪಡೆಯುವಂತೆ ಪೊಲೀಸರು ತಮಗೆ ಒತ್ತಾಯ ಮಾಡಿದರು. ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರಿಗೆ ಈ ನೋಟಿಸ್ ತಲುಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಪೊಲೀಸರು ಒತ್ತಾಯಪೂರ್ವಕವಾಗಿ ನನಗೆ ನೋಟಿಸ್ ನೀಡಿ ಹೋದರು ಎಂದು ತಿಳಿಸಿದರು.
ಅದಕ್ಕೆ ಬಾಲರಾಜ್ ವಿರುದ್ಧ ಗರಂ ಆದ ನ್ಯಾಯಪೀಠ, ನೋಟಿಸ್ ತಲುಪಿಸುವ ವಿಧಾನ ಇದೇನಾ? ಇದೇ ಮೊದಲ ಬಾರಿಗೆ ಕೋರ್ಟ್ ನೋಟಿಸ್ ತಲುಪಿಸುತ್ತಿದ್ದೀರಾ? ಈ ರೀತಿ ಮಾಡಿದರೆ ಕೋರ್ಟ್ ಆದೇಶ ಪಾಲಿಸಿದಂತಾಗುತ್ತದೆ ಎಂದು ನೀವು ಭಾವಿಸಿದ್ದೀರಾ? ಅಚಲಾನಂದಗೆ ನೋಟಿಸ್ ನೀಡಿ, ಅವರು ಸಹ ಕೋರ್ಟ್‌ಗೆ ಬರುವಂತೆ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು. ಇದರಿಂದ ಬಾಲರಾಜ್ ನ್ಯಾಯಾಲಯದ ಕ್ಷಮೆ ಕೋರಿದರು.
ನಿತ್ಯಾನಂದ ಲೀಲೆ: ಡೆಲ್ಲಿ ಪಬ್ಲಿಕ್ ಸ್ಕೂಲ್ CBSE ಮಾನ್ಯತೆ ರದ್ದು!
ನಂತರ ಲೆನಿನ್ ಪರ ವಕೀಲರು, ಆರೋಪಿ ನಿತ್ಯಾನಂದ ಸ್ವಾಮೀಜಿ ಕೊನೆಯ ಬಾರಿಗೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು 2018ರ ಜೂನ್ 5ರಂದು. ಆ ನಂತರ ಹಾಜರಾಗಿಲ್ಲ. ಅವಧಿ ಮುಗಿದ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಅವರು ಭಾರತದಲ್ಲಿ ಇಲ್ಲ. ವಿಚಾರಣೆಗೆ ಸತತವಾಗಿ ಗೈರಾಗುತ್ತಿರುವ ಕಾರಣ ಪರಿಗಣಿಸಿ ಅವರಿಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿದರು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರು, ಸದ್ಯದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿ ಹಾಜರಾತಿ ಅಗತ್ಯವಿಲ್ಲ. ಅವರಿಗೆ ಸಮನ್ಸ್ ಜಾರಿಯಾದ ನಂತರ ವಿಚಾರಣೆ ನಡೆಸುವುದು ಸೂಕ್ತ ಎಂದು ತಿಳಿಸಿದರು. ಈ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪುನ್ನು ಕಾಯ್ದಿರಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ