Karnataka Assembly Session: ಇಂದಿನಿಂದ ವಿಧಾನಮಂಡಲದ ‘ಬಿಸಿ ಕಲಾಪ’

Kannadaprabha News   | Asianet News
Published : Mar 07, 2022, 06:35 AM IST
Karnataka Assembly Session: ಇಂದಿನಿಂದ ವಿಧಾನಮಂಡಲದ ‘ಬಿಸಿ ಕಲಾಪ’

ಸಾರಾಂಶ

ಎರಡು ದಿನಗಳ ಬಿಡುವಿನ ಬಳಿಕ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಪುನಾರಂಭವಾಗಲಿದ್ದು, ಬಜೆಟ್‌ ಮೇಲಿನ ಚರ್ಚೆ ನಡೆಯಲಿದೆ.

ಬೆಂಗಳೂರು (ಮಾ.7): ಎರಡು ದಿನಗಳ ಬಿಡುವಿನ ಬಳಿಕ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ (Legislature Session) ಪುನಾರಂಭವಾಗಲಿದ್ದು, ಬಜೆಟ್‌ (Budget) ಮೇಲಿನ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ ಮಂಡಿಸಿದ 2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಚರ್ಚೆ ಆರಂಭವಾಗಲಿದ್ದು, ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳಾದ ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ (JDS) ಸಜ್ಜಾಗಿವೆ.

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಜೆಡಿಎಸ್‌ ಇನ್ನೂ ಮೀನಮೇಷ ಎಣಿಸಿದರೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಮಾತ್ರ ಅಷ್ಟುಸುಲಭವಾಗಿ ಅವಕಾಶ ಕಳೆದುಕೊಳ್ಳುವುದಿಲ್ಲ. ಕೆಲದಿನಗಳ ಹಿಂದಷ್ಟೇ ನಡೆದಿದ್ದ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಅವರ ರಾಷ್ಟ್ರಧ್ವಜ ಕುರಿತ ಹೇಳಿಕೆಯನ್ನು ಮುಂದಿಟ್ಟುಕೊಂಡು ಆಹೋರಾತ್ರಿ ಹೋರಾಟ ನಡೆಸಿದ್ದ ಪ್ರತಿಪಕ್ಷ ಈಗ ಬಜೆಟ್‌ ಮೇಲಿನ ಚರ್ಚೆಯನ್ನೇ ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ವಾಕ್ಸಮರ ನಡೆಸುವುದು ನಿಚ್ಚಳವಾಗಿದೆ.

ಹಿಂದಿನ ಅಧಿವೇಶನದ ಬೆನ್ನಲ್ಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ಪಕ್ಷ ಅರ್ಧಕ್ಕೆ ನಿಲ್ಲಿಸಿದ್ದ ಪಾದಯಾತ್ರೆಯನ್ನು ಪೂರ್ಣಗೊಳಿಸಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಐದು ಸಾವಿರ ಕೋಟಿ ರು.ಗಳನ್ನು ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನೂ ಕಾಂಗ್ರೆಸ್‌ ನಾಯಕರು ಮುಂದಿಟ್ಟಿದ್ದರು. ಹೀಗಾಗಿಯೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಒಂದು ಸಾವಿರ ಕೋಟಿ ರು. ಅನುದಾನ ನೀಡುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೂ, ಈ ಹಣ ಸಾಕಾಗುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಅಧಿವೇಶನದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚಿದೆ.

Karnataka Assembly Session: ಜಂಟಿ ಅಧಿವೇಶನ ಉದ್ದೇಶಿಸಿ ಥಾವರ್‌ಚಂದ್‌ ಗೆಹಲೋತ್‌ ಭಾಷಣ!

ಈ ಅಧಿವೇಶನದ ಮಧ್ಯದಲ್ಲೇ ಅಂದರೆ, ಮಾ.10ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಹೊರಬೀಳಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಇನ್ನು ಒಂದು ವರ್ಷ ಇದೆ. ಆ ದೃಷ್ಟಿಯಲ್ಲಿ ಇದು ಚುನಾವಣಾ ವರ್ಷವೇ ಸರಿ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಅಧಿವೇಶನದ ಚರ್ಚೆಯಲ್ಲೂ ಅದರ ಪರಿಣಾಮ ಕಾಣಿಸುವ ಸಂಭವವಿದೆ. ತಮ್ಮ ಚೊಚ್ಚಲ ಬಜೆಟ್‌ ಮಂಡಿಸಿದ ಬಳಿಕ ಹೆಚ್ಚು ಆತ್ಮವಿಶ್ವಾಸದಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟದ ಸದಸ್ಯರೊಂದಿಗೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ಟೀಕೆ-ಟಿಪ್ಪಣಿಗೆ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ. ಹೀಗಾಗಿ, ಅಧಿವೇಶನದ ಕಲಾಪ ರಾಜಕೀಯ ವಾಕ್ಸಮರದ ಜೊತೆಗೆ ಹೆಚ್ಚು ಸ್ವಾರಸ್ಯಕರವಾಗುವ ನಿರೀಕ್ಷೆಯಿದೆ.

ಈ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಪಾಸ್‌?: ಆಡಳಿತಾರೂಢ ಬಿಜೆಪಿಯು ವಿಧಾನಪರಿಷತ್ತಿನಲ್ಲಿ ಬಾಕಿ ಇರುವ ಮತಾಂತರ ನಿಷೇಧ ವಿಧೇಯಕವನ್ನು ಪ್ರಸಕ್ತ ಬಜೆಟ್‌ ಅಧಿವೇಶನದಲ್ಲೇ ಮಂಡಿಸಿ ಅಂಗೀಕಾರ ಪಡೆಯುವ ಬಗ್ಗೆ ಚಿಂತನೆ ನಡೆಸಿದೆ. ಬೆಳಗಾವಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದರೂ ವಿಧಾನಪರಿಷತ್ತಿನಲ್ಲಿ ಕನಿಷ್ಠ ಮಂಡನೆಗೂ ಅವಕಾಶ ಸಿಗಲಿಲ್ಲ. ಕೊನೆಯ ದಿನ ಕಲಾಪದ ಅಜೆಂಡಾದಲ್ಲಿ ಇರದಿದ್ದರೂ ಮಂಡನೆಗೆ ಪ್ರಯತ್ನಿಸಿದ್ದರಿಂದ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. 

ರಾಜ್ಯ ವಿಧಾನಮಂಡಲ ಕಲಾಪ ಇಂದಿನಿಂದ: ಗೋಹತ್ಯೆ ನಿಷೇಧ ಸೇರಿ 11 ವಿಧೇಯಕ ಮಂಡನೆ!

ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರೂ ವಿಧಾನಪರಿಷತ್‌ ಕಲಾಪವನ್ನು ಮುಂದುವರೆಸುವ ಬಗ್ಗೆ ಹೈಡ್ರಾಮಾನೇ ನಡೆಯಿತು. ಈ ಹಂತದಲ್ಲಿ ನಡೆದ ಬೆಳವಣಿಗೆಗಳಿಂದ ತೀವ್ರ ಬೇಸರಗೊಂಡ ಸಭಾಪತಿ ಬಸವರಾಜ ಹೊರಟ್ಟಿಅವರು ರಾಜೀನಾಮೆಗೂ ಇಂಗಿತ ವ್ಯಕ್ತಪಡಿಸಿದ್ದರು. ಆ ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿಗೆ ವಿಧಾನಪರಿಷತ್ತಿನಲ್ಲಿ ಬಹುಮತದ ಕೊರತೆಯೂ ಇತ್ತು. ಪರಿಷತ್‌ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದರೂ ನೂತನ ಸದಸ್ಯರು ಪ್ರಮಾಣ ಸ್ವೀಕರಿಸಿರಲಿಲ್ಲ. ಅಂತಿಮವಾಗಿ ಮಂಡನೆಯೇ ಬೇಡ ಎಂಬ ನಿಲವಿಗೆ ಬಂದಿತ್ತು.

ಅದಾದ ಬಳಿಕ ಕಳೆದ ಫೆಬ್ರವರಿಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಬಿಜೆಪಿ ನಿರ್ಧರಿಸಿದರೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ರಾಷ್ಟ್ರಧ್ವಜ ಕುರಿತ ಹೇಳಿಕೆ ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್‌ ಅಹೋರಾತ್ರಿ ಧರಣಿ ನಡೆಸಿದ್ದರಿಂದ ಕೊನೆಗೆ ಅಧಿವೇಶನವನ್ನೇ ಮುಂದೂಡಬೇಕಾಯಿತು. ಇದೀಗ ಬಜೆಟ್‌ ಅಧಿವೇಶನವಾಗಿದ್ದರಿಂದ ಹೆಚ್ಚು ಸಮಯಾವಕಾಶವೂ ಇದೆ. ಪರಿಷತ್ತಿನಲ್ಲಿ ಸಂಖ್ಯಾಬಲವೂ ಇದೆ. ಹೀಗಾಗಿ, ಈ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳುವ ಬಗ್ಗೆ ಸರ್ಕಾರದಲ್ಲಿ ಒಲವು ವ್ಯಕ್ತವಾಗಿದೆ. ಬಹುತೇಕ ಅಧಿವೇಶನದ ಕೊನೆಯ ವಾರದಲ್ಲಿ ಮಂಡಿಸುವ ಸಂಭವವಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ
ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು