
ಬೆಂಗಳೂರು(ಮೇ.13):ವಿಧಾನಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕ ಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು, ಬರುವ ಜೂ.13ರಂದು ಮತದಾನ ನಡೆಯಲಿದೆ.
ಗುರುವಾರ ಚುನಾವಣಾ ಆಯೋಗ ವೇಳಾಪಟ್ಟಿಪ್ರಕಟಿಸಿದ್ದು, ಈ ತಿಂಗಳ 19ರಂದು ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. 26ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 30ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನ. 13ರಂದು ಮತದಾನ ನಡೆಯಲಿದ್ದು, 15ರಂದು ಮತ ಎಣಿಕೆ ನಡೆಯಲಿದೆ.
ಬಿಜೆಪಿ ಕೋಟೆ ಬೇಧಿಸಲು ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡ್ತಿದ್ದಾರಾ ಶರದ್ ಪವಾರ್?
ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಹನುಮಂತ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಕೆ.ಟಿ.ಶ್ರೀಕಂಠೇಗೌಡ, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸಭಾಪತಿಯೂ ಆಗಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿಯ ಅರುಣ್ ಶಹಾಪುರ ಅವರ ಅವಧಿ ಬರುವ ಜೂ.4ರಂದು ಅಂತ್ಯಗೊಳ್ಳಲಿದೆ.
ಈ ಕ್ಷೇತ್ರಗಳಿಗೆ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಹಲವು ದಿನಗಳ ಹಿಂದೆಯೇ ತಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದು, ಭರದ ಪ್ರಚಾರವನ್ನೂ ಆರಂಭಿಸಿವೆ.
ಅಭ್ಯರ್ಥಿಗಳು
ವಾಯವ್ಯ ಪದವೀಧರ ಕ್ಷೇತ್ರ- ಹನುಮಂತ ನಿರಾಣಿ (ಬಿಜೆಪಿ).
ದಕ್ಷಿಣ ಪದವೀಧರ ಕ್ಷೇತ್ರ- ಮೈ.ವಿ.ರವಿಶಂಕರ್ (ಬಿಜೆಪಿ), ಮಧು ಮಾದೇಗೌಡ (ಕಾಂಗ್ರೆಸ್), ರಾಮು (ಜೆಡಿಎಸ್).
ಪಶ್ಚಿಮ ಶಿಕ್ಷಕರ ಕ್ಷೇತ್ರ- ಬಸವರಾಜ ಹೊರಟ್ಟಿ(ಬಿಜೆಪಿ-ಘೋಷಣೆ ಬಾಕಿಯಿದೆ), ಬಸವರಾಜ ಗುರಿಕಾರ (ಕಾಂಗ್ರೆಸ್).
ವಾಯವ್ಯ ಶಿಕ್ಷಕರ ಕ್ಷೇತ್ರ- ಅರುಣ್ ಶಹಾಪುರ (ಬಿಜೆಪಿ), ಚಂದ್ರಶೇಖರ್ ಲೋಣಿ (ಜೆಡಿಎಸ್).
ಬಿಬಿಎಂಪಿ ಚುನಾವಣೆ: ಸರ್ಕಾರಕ್ಕೆ ಕಗ್ಗಂಟಾದ ಸುಪ್ರೀಂ ಆದೇಶ
4 ರಾಜ್ಯಸಭೆ ಸೀಟಿಗೆ ಜೂ.10ಕ್ಕೆ ಚುನಾವಣೆ
ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಬರುವ ಜೂ.10ರಂದು ಮತದಾನ ನಡೆಯಲಿದೆ.ಗುರುವಾರ ಚುನಾವಣಾ ಆಯೋಗದಿಂದ ವೇಳಾಪಟ್ಟಿಪ್ರಕಟಗೊಂಡಿದ್ದು, ಈ ತಿಂಗಳ 24ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಜೂ.1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 3ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. 10ರಂದು ಮತದಾನ ನಡೆದು, ಅಂದೇ ಮತ ಎಣಿಕೆ ನಡೆಯಲಿದೆ.
ಹಾಲಿ ಸದಸ್ಯರಾದ ಬಿಜೆಪಿಯ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ, ಕಾಂಗ್ರೆಸ್ಸಿನ ಜೈರಾಂ ರಮೇಶ್ ಅವರ ಅವಧಿ ಮುಂದಿನ ತಿಂಗಳು ಮುಗಿಯಲಿದೆ. ಇದಲ್ಲದೆ ಕಾಂಗ್ರೆಸ್ಸಿನ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ಒಂದು ಸ್ಥಾನ ತೆರವಾಗಿತ್ತು.
ನಾಲ್ಕನೇ ಸ್ಥಾನಕ್ಕೆ ಪೈಪೋಟಿ?
ವಿಧಾನಸಭೆಯ ಸದಸ್ಯರೇ ಮತದಾರರಾಗಿರುವುದರಿಂದ ಹಾಲಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಒಟ್ಟು ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್ಸಿಗೆ ಒಂದು ಸ್ಥಾನ ಖಾತ್ರಿಯಾಗಿದೆ.
ಆದರೆ, ನಾಲ್ಕನೇ ಸ್ಥಾನವನ್ನು ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ನಾಲ್ಕನೇ ಸ್ಥಾನಕ್ಕೆ ಎರಡು ಪಕ್ಷಗಳ ಸದಸ್ಯರ ಬೆಂಬಲ ಅತ್ಯಗತ್ಯ. ಒಬ್ಬ ಅಭ್ಯರ್ಥಿ ಗೆಲ್ಲಲು 46 ಮತಗಳನ್ನು ಪಡೆಯಬೇಕಾಗುತ್ತದೆ. 32 ಸದಸ್ಯರನ್ನು ಹೊಂದಿರುವ ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿದರೂ 14 ಮತಗಳ ಕೊರತೆ ಎದುರಾಗುತ್ತದೆ. ಹೀಗಾಗಿ, ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪರೋಕ್ಷವಾಗಿ ಹೊಂದಾಣಿಕೆ ನಡೆಯಬಹುದು ಎಂಬ ಮಾತು ಕೇಳಿಬರುತ್ತಿದೆ.
ಮತ್ತೆರಡು ಎಲೆಕ್ಷನ್‌ಗೆ ಮುಹೂರ್ತ
ರಾಜ್ಯದಲ್ಲಿ ಜೂನ್‌ಗೆ ಮತ್ತೆರಡು ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜೂ.10ರಂದು ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ನಡೆಯಲಿದೆ. ಹಾಗೆಯೇ ಜೂ.15ಕ್ಕೆ ವಿಧಾನ ಪರಿಷತ್‌ಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ತಲಾ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ತೆರವಾಗಲಿರುವ ಪರಿಷತ್‌ನ 7 ಸ್ಥಾನಗಳಿಗೆ ಜೂ 3 ರಂದು ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಒಟ್ಟಾರೆ ಜೂನ್‌ನಲ್ಲಿ ಭರ್ಜರಿ ಚುನಾವಣೆ ಚಟುವಟಿಕೆಗಳು ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ