ಪತ್ರಕರ್ತರೂ ಕೋವಿಡ್ ವಾರಿಯರ್ಸ್: ಸಿಎಂ| ಉಚಿತವಾಗಿ ಲಸಿಕೆ ವಿತರಿಸಲು ನಿರ್ಧಾರ
ಬೆಂಗಳೂರು(ಮೇ.05): ಕೋವಿಡ್ ವಿರುದ್ಧ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮದವನ್ನು ‘ಫ್ರಂಟ್‌ಲೈನ್ ವರ್ಕರ್ಸ್’ ಎಂದು ಗುರುತಿಸಿ ಉಚಿತ ಲಸಿಕೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಮಾಧ್ಯಮ ಸಿಬ್ಬಂದಿಯನ್ನು ಫ್ರಂಟ್‌ಲೈನ್ ವರ್ಕರ್ಸ್ (ಕೊರೋನಾ ವಾರಿಯರ್ಸ್) ಎಂದು ಪರಿಗಣಿಸಿ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
undefined
ಕೊರೋನಾ ಮೊದಲ ಅಲೆ ಎದ್ದಾಗ ಘೋಷಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಮಾಧ್ಯಮದವರು ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ್ದರು. ಆದರೆ ಕೆಲ ತಿಂಗಳ ಹಿಂದೆ ಲಸಿಕೆ ಅಭಿಯಾನ ಆರಂಭಿಸಿದಾಗ ಅವರನ್ನು ‘ಮುಂಚೂಣಿ ಕಾರ‍್ಯಕರ್ತರು’ ಎಂದು ಪರಿಗಣಿಸಿರಲಿಲ್ಲ ಹಾಗೂ ಲಸಿಕೆ ನೀಡಿಕೆ ಆರಂಭಿಸಿರಲಿಲ್ಲ. ಹೀಗಾಗಿ ಪತ್ರಕರ್ತರನ್ನೂ ‘ಕೊರೋನಾ ಯೋಧರು’ ಎಂದು ಪರಿಗಣಿಸಿ ಎಂಬ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ಈಗ ಮನ್ನಣೆ ಲಭಿಸಿದೆ.
ನಕಾರಾತ್ಮಕ ಸುದ್ದಿ ಬೇಡ:
‘ಕೋವಿಡ್ ತಡೆಯುವ ಕಾರ್ಯದಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸರು ಮತ್ತು ಇತರೆ ಇಲಾಖೆಯ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರು ನಕಾರಾತ್ಮಕವಾಗಿ ಸುದ್ದಿಗಳನ್ನು ಬಿತ್ತರ ಮಾಡಿದರೆ, ಈ ಮುಂಚೂಣಿ ಸಿಬ್ಬಂದಿಯ ಕುಟುಂಬದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಲೋಪಗಳು ನಡೆಯುತ್ತಿರುವುದನ್ನು ಜನರ ಮುಂದಿ ಇಡುವುದು ಮಾಧ್ಯಮದವರ ವೃತ್ತಿ ಧರ್ಮ. ಆದರೆ, ಒಂದೇ ವಿಚಾರವನ್ನು ಪದೇ ಪದೇ ತೋರಿಸಿದರೆ ಆತ್ಮಸ್ಥೈರ್ಯ ಕಡಿಮೆ ಮಾಡಿದಂತಾಗುತ್ತದೆ. ಹೀಗಾಗಿ ಮಾಧ್ಯಮದವರು ಅದಷ್ಟುಅವರ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು’ ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona