‘ಕೊರೋನಾಜನಕ’ ಸ್ಥಿತಿಗೆ ರಾಜ್ಯದ ಆಸ್ಪತ್ರೆಗಳು ಸಿದ್ಧ| ಕೋವಿಡ್ ಆಸ್ಪತ್ರೆಗಳಲ್ಲಿ ಶೇ.98 ರಷ್ಟುಹಾಸಿಗೆಗಳು ಲಭ್ಯ| ಕೇಂದ್ರ ಹೇಳಿದಂತೆ ಪರೀಕ್ಷೆ ನಡೆಸದೆ ಡಿಸ್ಚಾಜ್‌ರ್ ಇಲ್ಲ
ಶ್ರೀಕಾಂತ್.ಎನ್.ಗೌಡಸಂದ್ರ
ಬೆಂಗಳೂರು(ಮೇ.11): ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದರೂ ಇತರೆ ರಾಜ್ಯಗಳ ಮಾದರಿಯಲ್ಲಿ ಸದ್ಯಕ್ಕೆ ಹಾಸಿಗೆಗಳ ಅಭಾವ ಸೃಷ್ಟಿಯಾಗಲಿಕ್ಕಿಲ್ಲ.
ಪ್ರಸ್ತುತ 14,150 ಹಾಸಿಗೆಗಳ ವ್ಯವಸ್ಥೆಯಿದ್ದು, ಶೇ.2ರಷ್ಟುಮಾತ್ರ ಭರ್ತಿಯಾಗಿವೆ. ಉಳಿದ ಶೇ.98ರಷ್ಟುಹಾಸಿಗೆಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಮೇ 9ರ ವೇಳೆಗೆ ಮಹಾರಾಷ್ಟ್ರದಲ್ಲಿ ಬರೋಬ್ಬರಿ 20,228 ಪ್ರಕರಣಗಳು ವರದಿಯಾಗಿವೆ. ಈ ರೀತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ರಾಜ್ಯಗಳಲ್ಲಿನ ಕೊರೋನಾ ಆಸ್ಪತ್ರೆಗಳಲ್ಲಿ ಹಾಸಿಗೆಗಳ ತೀವ್ರ ಕೊರತೆ ಉಂಟಾಗಿದೆ. ಹೀಗಾಗಿ ಲಕ್ಷಣಗಳು ಇಲ್ಲದಿದ್ದರೆ ಕೊರೋನಾ ಸೋಂಕಿತರನ್ನು 10 ದಿನದಲ್ಲೇ ಪರೀಕ್ಷೆ ನಡೆಸದೆಯೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ಹಲವು ನಿಷ್ಠುರ ಕ್ರಮಗಳ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನ 54 ಜನರಿಗೆ ಕೊರೋನಾ!
ರಾಜ್ಯದಲ್ಲೂ ಇಂತಹ ‘ಕೊರೋನಾಜನಕ ಸ್ಥಿತಿ’ ಉಂಟಾಗಲಿದೆಯೇ ಎಂಬ ಆತಂಕದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಪರಿಶೀಲನೆ ನಡೆಸಿದಾಗ ಸದ್ಯಕ್ಕೆ ರಾಜ್ಯಕ್ಕೆ ಇಂತಹ ಆತಂಕ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ 2,462 ಹಾಸಿಗೆಗಳ ವ್ಯವಸ್ಥೆ ಮಾಡಿದ್ದು, ರಾಜ್ಯದಲ್ಲಿ ಒಟ್ಟು 14,150 ಹಾಸಿಗೆ ವ್ಯವಸ್ಥೆ ಇದೆ. ಭಾನುವಾರದ ವೇಳೆಗೆ ರಾಜ್ಯದಲ್ಲಿ 848 ಪ್ರಕರಣ ವರದಿಯಾಗಿದ್ದು, 422 ಮಂದಿ ಗುಣಮುಖರಾಗಿ, 31 ಮಂದಿ ಮೃತಪಟ್ಟಿದ್ದಾರೆ. ಉಳಿದ 394 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಿಗದಿತ ಆಸ್ಪತ್ರೆಗಳಲ್ಲಿ 1,080 ಮಂದಿ ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕವಾಗಿಡಲಾಗಿದೆ. ಹೀಗಾಗಿ 14,150 ಹಾಸಿಗೆಗಳಲ್ಲಿ 1,474 ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ವೈದ್ಯಕೀಯ ಸೌಲಭ್ಯಗಳಲ್ಲಿ ಕ್ವಾರಂಟೈನ್ ಆಗಿರುವವರನ್ನು ಸೇರಿಸಿ ಶೇ.2ರಷ್ಟುಮಾತ್ರ ಹಾಸಿಗೆ ಬಳಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತವಾಗಿ ತಿಳಿಸಿದೆ.
ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್, ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್!
ಜಿಲ್ಲಾವಾರು ಹಾಸಿಗೆ ಬಳಕೆ ವಿವರ
ಮೇ 8ರ ವರದಿ ಪ್ರಕಾರ ಜಿಲ್ಲಾವಾರು ಬೆಂಗಳೂರು ನಗರದಲ್ಲಿ 2462 ಹಾಸಿಗೆಗಳ ಪೈಕಿ ಶೇ.3, ಮೈಸೂರಿನಲ್ಲಿ 1,204 ಹಾಸಿಗೆಗಳ ಪೈಕಿ ಶೇ.1 ಮಾತ್ರ ಭರ್ತಿಯಾಗಿವೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 60 ಹಾಸಿಗೆಗಳ ಪೈಕಿ (ಶೇ.0), ದಾವಣಗೆರೆ 614 (ಶೇ.8), ಕಲಬುರಗಿ 970 (ಶೇ.3), ಬೆಳಗಾವಿ 633 (ಶೇ.7), ಬಾಗಲಕೋಟೆ 537 (ಶೇ.6), ವಿಜಯಪುರ 365 (ಶೇ.5), ಮಂಡ್ಯ 403 (ಶೇ.4), ದಕ್ಷಿಣ ಕನ್ನಡ 946 (ಶೇ.1), ಉತ್ತರ ಕನ್ನಡ 645(ಶೇ.2), ಬೀದರ್ 541 (ಶೇ.2), ಚಿಕ್ಕಬಳ್ಳಾಪುರ 331 (ಶೇ.2), ಧಾರವಾಡ 653 (ಶೇ.1), ತುಮಕೂರು 755 (ಶೇ.1), ಚಿತ್ರದುರ್ಗ 407 (ಶೇ.1), ಬಳ್ಳಾರಿ 1,022 (ಶೇ.1), ಗದಗ 273 (ಶೇ.1), ಹಾವೇರಿ 448 (ಶೇ.1ಕ್ಕಿಂತ ಕಡಿಮೆ), ಉಡುಪಿ 389 (ಶೇ.0), ಕೊಡಗು 392 (ಶೇ.0) ಭರ್ತಿಯಾಗಿವೆ.