ಕೊಡಗಿನಲ್ಲಿ ಸಚಿವ ಭೋಸರಾಜ್ ಅವರು ಆರ್. ಅಶೋಕ್ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. ಹನಿಟ್ರ್ಯಾಪ್ ವಿಷಯದಲ್ಲಿ ಅಶೋಕ್ ಮತ್ತು ವಿಜಯೇಂದ್ರ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ, ಹಾಗೂ ಡಿಕೆಶಿ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.25): ಸಿಎಂ ಸೀಟಿಗಾಗಿ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳುವ ಆರ್. ಅಶೋಕ್ ಅವರು ‘ಮಂಪರು ಪರೀಕ್ಷೆಗೆ ಒಳಪಡಿಸಲಿ’ ಎಂದು ಹೇಳಿರುವ ಸಚಿವ ರಾಜಣ್ಣ ಅವರ ಮಾತಿನ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಯಾಕೆ ಮಾತನಾಡುವುದಿಲ್ಲ. ಈ ಕುರಿತು ಶಾಸಕ ಮುನಿರತ್ನ ಅವರು ಮಾತನಾಡಿದರು ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಮಡಿಕೇರಿಯಲ್ಲಿ ಆರ್ ಅಶೋಕ್ ಅವರನ್ನು ಸಚಿವ ಭೋಸರಾಜ್ ಪ್ರಶ್ನಿಸಿದರು.
ಆರ್ ಅಶೋಕ್, ವಿಜಯೇಂದ್ರ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಸಿದ್ದರಾಮಯ್ಯನವರ ಟಾರ್ಗೆಟ್ ಮಾಡಿ ಮಾತನಾಡುವುದೇ ಅವರ ಕೆಲಸ. ಅದು ಬಿಟ್ಟರೆ, ಪ್ರಬುದ್ಧರಾಗಿ ಮಾತನಾಡುವುದಿಲ್ಲ. ವಿರೋಧ ಪಕ್ಷದ ನಾಯಕರಾಗಿ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾತನಾಡುವುದಿಲ್ಲ. ಅಷ್ಟೇ ಏಕೆ ಯಾವಾಗ, ಎಲ್ಲಿ, ಏನು ಮಾತನಾಡಬೇಕೆಂಬ ಅರಿವೂ ಇಲ್ಲ. ದಿನನಿತ್ಯ ಸಿದ್ದರಾಮಯ್ಯನವರ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಅಷ್ಟೇ. ಅವರಿಬ್ಬರೂ ಪರಿಪೂರ್ಣ ರಾಜಕೀಯ ನಾಯಕರಾಗಿ ಮಾತನಾಡುವುದಿಲ್ಲ ಎಂದು ಆರ್ ಅಶೋಕ್ ಮತ್ತು ವಿಜಯೇಂದ್ರ ವಿರುದ್ಧ ಬೋಸರಾಜ್ ಕಿಡಿಕಾರಿದರು
ಹನಿಟ್ರ್ಯಾಪ್ ಸಿದ್ದರಾಮಯ್ಯರಿಂದ ಬಯಲಿಗೆ?
ಹನಿ ಟ್ಯ್ರಾಪ್ ವಿಷಯ ಸಿದ್ದರಾಮಯ್ಯರಿಂದಲೇ ಬಯಲಿಗೆ ಬಂದಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಭೋಸರಾಜ್, ನಾನು ಎರಡು ಸದನಗಳಲ್ಲಿ ಭಾಗವಹಿಸುತ್ತಿದ್ದೇನೆ. ಆ ವಿಷಯ ಪ್ರಸ್ತಾಪಿಸಿದ್ದು ಸಚಿವ ರಾಜಣ್ಣ ಎಂದಿದ್ದಾರೆ. ಬೇಕಾದರೆ ಅದು ರೆಕಾರ್ಡ್ ನಲ್ಲಿ ಇದೆ. ರಾಜಣ್ಣ ಅವರು ಯಾವ ಪಾರ್ಟಿಯವರು ಮಾಡಿದ್ದಾರೆ ಅಂತ ಹೇಳಿಲ್ಲ. ಹನಿ ಟ್ಯ್ರಾಪ್ ನಲ್ಲಿ ಎಲ್ಲಾ ಪಕ್ಷದವರು ಸೇರಿ 48 ಜನರಿದ್ದಾರೆ. ನನ್ನ ಹತ್ತಿರ ಯಾವುದೇ ದಾಖಲೆ ಇಲ್ಲ, ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದಿದ್ದಾರೆ. ಯಾರೊಬ್ಬರನ್ನೂ ಗುರಿಯಾಗಿಸಿ ಯಾರ ಮೇಲೂ ಆರೋಪ ಮಾಡಿಲ್ಲ. ಜನರಲ್ ಆಗಿ ಮಾತನಾಡಿದ್ದಾರೆ ಅಷ್ಟೇ ಎಂದರು ಮುಂದುವರಿದು, ಯಾರೇ ಮಾಡಿದ್ದರೂ ತನಿಖೆ ಮಾಡಿಸುವುದಾಗಿ ಸಿಎಂ ಹಾಗೂ ಗೃಹ ಸಚಿವರು ಹೇಳಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರು ತಪ್ಪಿತಸ್ಥರು ಇರುತ್ತಾರೋ ಅವರ ಮೇಲೆ ಕಠಿಣ ಕ್ರಮ ಆಗುತ್ತದೆ ಎಂದರು.
ಇದನ್ನೂ ಓದಿ: 'ನಮ್ಮ ಮನೆಗೆ ಸಿಸಿಟಿವಿ ಇದೆ, ಸರ್ಕಾರಿ ನಿವಾಸಕ್ಕೆ ಇಲ್ಲ..' ಎಂದ ರಾಜಣ್ಣ, ಸರ್ಕಾರ ಏಕೆ ಅಳವಡಿಸಿಲ್ಲ? ಇಲ್ಲೇ ಏನೋ ಸಮಸ್ಯೆ ಇದೆ?
ಇನ್ನು ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ ಎನ್ನುವುದು ಸುಳ್ಳು. ಬಿಜೆಪಿಯವರು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ತಿರುಚಿದ್ದಾರೆ ಎಂದರು.
ಬಿಜೆಪಿಯವರ ಆರೋಪಕ್ಕೆ ಡಿಕೆ ಶಿವಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಐಸಿಸಿ ಕೂಡ ಅದನ್ನೇ ಪ್ರತಿಪಾದಿಸುತ್ತದೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನ ಹಿರಿಯ ನಾಯಕರು. ಹೀಗಿರುವಾಗ ಸಂವಿಧಾನ ವಿರುದ್ಧವಾಗಿ ಮಾತನಾಡಲು ಸಾಧ್ಯವೇ ಇಲ್ಲ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಸಚಿವ ಸಂಪುಟ ಬದಲಾವಣೆ ವಿಚಾರ ಪ್ರಸ್ತಾಪಿಸಿದಾಗ 'ಯಾರು ಹೇಳಿದ್ದಾರೆ?' ಎಂದು ಗರಂ ಆದ ಸಚಿವರು, ಇಂತಹ ಯಾವುದೇ ಪ್ರಸ್ತಾಪಗಳೇ ಆಗಿಲ್ಲ. ಇದೆಲ್ಲಾ ಸುಳ್ಳು ಎಂದರು.
ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಇವೆ. ಇದಕ್ಕಾಗಿ ಪಕ್ಷ ಸಂಘಟಿಸಲು ಸೂಚನೆ ಆಗಿದೆ. ನಂತರ ಎಐಸಿಸಿ ಕಮಿಟಿ ಸಭೆ ಇದ್ದು, ಅಲ್ಲಿಗೆ ಎಲ್ಲರೂ ಭಾಗವಹಿಸಬೇಕಾಗಿದೆ. ಆಡಳಿತವನ್ನು ಇನ್ನೊಂದಷ್ಟು ಚುರುಕುಗೊಳಿಸಬೇಕಾಗಿದೆ. ಇಂತಹ ವಿಷಯಗಳನ್ನು ಚರ್ಚೆಗೆ ಬಂದಿವೆ ವಿನಃ ಅದು ಬಿಟ್ಟರೆ ಸಚಿವ ಸಂಪುಟ ಬದಲಾವಣೆ ವಿಷಯವೇ ಪ್ರಸ್ತಾಪವಾಗಿಲ್ಲ ಎಂದರು.