ಯೂಟ್ಯೂಬರ್‌ಗಳು ಇಲ್ಲಿಗೆ ನಿಲ್ಲಿಸಿ, ಇಲ್ಲವಾದರೆ ಕಠಿಣ ಕ್ರಮ ಎದುರಿಸಿ: ಗೃಹ ಸಚಿವ ಪರಮೇಶ್ವರ್‌ ಎಚ್ಚರಿಕೆ

Published : Aug 18, 2025, 08:12 PM IST
Parameshwar YouTubers Action

ಸಾರಾಂಶ

ರಾಜ್ಯದಲ್ಲಿ ವ್ಯಕ್ತಿ, ಸಂಸ್ಥೆ, ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ. ಗೌಪ್ಯತೆ ಉಲ್ಲಂಘಿಸಿ ವರದಿ ಮಾಡುವುದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ಆ.18): ರಾಜ್ಯದಲ್ಲಿ ವ್ಯಕ್ತಿ, ಸಂಸ್ಥೆ, ಧಾರ್ಮಿಕ ಕೇಂದ್ರಗಳು, ರಾಜ್ಯ ಸರ್ಕಾರ ಸೇರಿದಂತೆ ಕೆಲವರ ವಿರುದ್ಧ ಯೂಟೂಬರ್ಸ್‌ಗಳು ಸಾಕ್ಷಿಗಳಿಲ್ಲದೇ ಅಪಪ್ರಚಾರದ ವಿಡಿಯೋ ಮಾಡುತ್ತಿದ್ದಾರೆ ಎಂಬ ದೂರುಗಳು ವಿಪಕ್ಷ ನಾಯಕರಿಂದ ಕೇಳಿಬಂದವು. ಇದರ ಬೆನ್ನಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಯೂಟೂಬರ್ಸ್‌ಗಳು ಇಲ್ಲಿಗೆ ಎಲ್ಲಾ ಬಂದ್ ಮಾಡಿ. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಯೂಟ್ಯೂಬರ್‌ಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರದ ಬಗ್ಗೆ ಗೌಪ್ಯತೆ ಉಲ್ಲಂಘಿಸಿ ವರದಿ ಮಾಡುವುದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೀತಿಯ ಅನಿಯಂತ್ರಿತ ಯೂಟ್ಯೂಬ್ ವರದಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ತಮ್ಮ ಇಲಾಖೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ನಂತರವೂ ಕೆಲವು ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದಾಗ, ಗೃಹ ಸಚಿವರು ತಮ್ಮ ಉತ್ತರವನ್ನು ಸಮರ್ಥಿಸಿಕೊಂಡರು. 'ನಾನು ಜವಾಬ್ದಾರಿಯುತವಾಗಿ ಉತ್ತರಿಸಿದ್ದೇನೆ. ಇದು ನಿರಸ ಉತ್ತರ ಎಂದು ಕೆಲವರು ಹೇಳಿದ್ದೀರಿ. ಅರಗ ಜ್ಞಾನೇಂದ್ರ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು, ಸುರೇಶ್ ಅವರು ಕಾನೂನು ಸಚಿವರಾಗಿದ್ದರು. ಅವರಿಗೆ ಆಂತರಿಕ ನಿಯಮಗಳ ಬಗ್ಗೆ ಅರಿವಿದೆ. ನಿಮಗೆ ಲಕ್ಷ್ಮಣ ರೇಖೆಯ ಅರಿವಿದೆ ಎಂದು ನಾನು ಅಂದುಕೊಂಡಿದ್ದೆ' ಎಂದು ಖಾರವಾಗಿಯೇ ತಿರುಗೇಟು ನೀಡಿದರು.

ಇದೇ ವೇಳೆ, ಗೌಪ್ಯತೆಯ ಮಹತ್ವವನ್ನು ಒತ್ತಿಹೇಳಿದ ಅವರು, 'ನಾವು ಗೌಪ್ಯತೆಯ ಬಗ್ಗೆ ಪ್ರಮಾಣ ಮಾಡಿರುತ್ತೇವೆ. ಜನ ಅಥವಾ ನೀವು ಏನೇನೋ ಆಪೇಕ್ಷೆ ಪಡಬಹುದು, ಆದರೆ ನೀವು ನಿರೀಕ್ಷೆ ಮಾಡಿದಂತೆ ನಾನು ಎಲ್ಲವನ್ನೂ ಹೇಳಲಾಗುವುದಿಲ್ಲ. ಸರ್ಕಾರದಿಂದ ರಚನೆ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಗ್ಗೆ ಮಾತನಾಡಿದ ಅವರು, 'ನೀವು ಎಸ್‌ಐಟಿಯನ್ನು ಸ್ವಾಗತಿಸಿದ್ದೀರಿ. ಅದರಲ್ಲಿ ಯಾವುದೇ ನ್ಯೂನತೆಗಳಿದ್ದರೆ ಸರಿಪಡಿಸಲು ನಾವು ಸಿದ್ಧರಿದ್ದೇವೆ. ಸತ್ಯವನ್ನು ಹೊರತರಲು ಇದು ಸಹಾಯವಾಗುತ್ತದೆ. ತನಿಖೆಯ ಸಮಯದ ಬಗ್ಗೆ, ಅದು ಮೂರು, ಆರು ತಿಂಗಳಾಗವಹುದು ಅಥವಾ ಒಂದು ತಿಂಗಳಲ್ಲೂ ವರದಿ ಬರಬಹುದು. ನಾವು ಆದಷ್ಟು ಬೇಗ ವರದಿ ನೀಡಲು ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಅಂತಿಮವಾಗಿ, ಯೂಟ್ಯೂಬರ್‌ಗಳ ವಿಷಯದ ಬಗ್ಗೆ ಮತಾನಡಿದ ಅವರು, ರಾಜ್ಯದಲ್ಲಿ ವ್ಯಕ್ತಿ, ಸಂಸ್ಥೆ ಮತ್ತು ಸರ್ಕಾರದ ಬಗ್ಗೆ ಅನಿಯಂತ್ರಿತವಾಗಿ ವರದಿಗಳನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಯೂಟ್ಯೂಬರ್‌ಗಳು ಇದನ್ನು ಇಲ್ಲಿಗೆ ನಿಲ್ಲಿಸಬೇಕು, ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ನಾನು ಹಿಂದೂ ಅಲ್ವಾ? ನನ್ನ ಹೆಸರು ಪರಮೇಶ್ವರ:

ನಾನು ಹಿಂದು ಅಲ್ವಾ.? ನನ್ನ ಹೆಸರು ಏನು? ನನ್ನ ಹೆಸರು ಪರಮೇಶ್ವರ. ರಾಜ್ಯದಲ್ಲಿ ಸಂಯಮ ಮತ್ತು ಸಂಘರ್ಷದ ಹಾದಿ ಇದೆ. ನಾನು ಸಂಯಮ ಹಾದಿ ಹಿಡಿದ್ದೇನೆ. ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದೇವೆ. ಆತ್ಮಸಾಕ್ಷಿಯಿಂದ ಎಸ್‌ಐಟಿ ಮಾಡಿದ್ದೇವೆ. ಆತ್ಮಸಾಕ್ಷಿಯಿಂದ ನಾವು ತನಿಖೆ ಮಾಡಿ ಕ್ರಮ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.

ಗೃಹ ಸಚಿವರ ಉತ್ತರಕ್ಕೆ ಸಿಟ್ಟಿನಿಂದಲೇ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಯೂಟ್ಯೂಬರ್‌ಗಳ ಮೇಲೆ ಇಲ್ಲಿ ತನಕ ಕ್ರಮ ಆಗಿದೆಯಾ? ನೀವು ಕ್ರಮ ಮಾಡುವುದು ಬಿಟ್ಟು ವಿನಂತಿ ಮಾಡುತ್ತೀರಿ. ಯಾರನ್ನು ಬಂಧಿಸಿದ್ದೀರಿ? ನಿಮ್ಮ ವಿನಂತಿ ಯಾರು ಕೇಳುತ್ತಾರೆ? ರಾಜ್ಯ ಸರ್ಕಾರದ ಗೃಹ ಸಚಿವರಾಗಿ ನೀವು ಖಡಕ್ ಸಂದೇಶ ನೀಡೋದು ಬಿಟ್ಟು ವಿನಂತಿ ಮಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌