
ಬೆಂಗಳೂರು (ಜೂ.5): ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಕಾಣದ ದುರಂತವೊಂದು ನಿನ್ನೆ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದಿದೆ. ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಯುವಕರು ದುರ್ಮರಣಕ್ಕೀಡಾಗಿದ್ದಾರೆ, ಜೊತೆಗೆ 56 ಜನರು ಗಾಯಗೊಂಡಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮೃತರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಘಟನೆ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು. ಕಾಲ್ತುಳಿತದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈ ಘಟನೆಯಿಂದ ನಮಗೆ ತೀವ್ರ ನೋವಾಗಿದೆ. ಈ ದುರ್ಘಟನೆ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಯಾರೇ ತಪ್ಪಿತಸ್ಥರಾಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಲ್ತುಳಿತದಲ್ಲಿ ಗಾಯಗೊಂಡ 56 ಜನರ ಪೈಕಿ 46 ಜನರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 10 ಜನರು ವೈದೇಹಿ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಗಾಯಾಳುಗಳಿಗೆ ಯಾವುದೇ ಗಂಭೀರ ಗಾಯಗಳಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 35,000 ಜನರಿಗೆ ಸೀಮಿತವಾಗಿದ್ದರೂ, ಸುಮಾರು 3 ಲಕ್ಷ ಜನರು ಸಂಭ್ರಮಾಚರಣೆಗೆ ಜಮಾಯಿಸಿದ್ದರು. ಮೆಟ್ರೋ ಮಾಹಿತಿಯ ಪ್ರಕಾರ, ರಾತ್ರಿ 8 ರಿಂದ 9 ಗಂಟೆಯವರೆಗೆ 8 ಲಕ್ಷಕ್ಕೂ ಅಧಿಕ ಜನರು ಓಡಾಡಿದ್ದಾರೆ. ಈ ಜನಸಂದಣಿಯ ನಿರ್ವಹಣೆಯಲ್ಲಿ ವಿಫಲವಾದ ಕಾರಣ ಈ ದುರಂತ ಸಂಭವಿಸಿದೆ ಎಂದು ಗೃಹ ಸಚಿವರು ಒಪ್ಪಿಕೊಂಡರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ತೇವೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ರೂಪಿಸುತ್ತೇವೆ. ದೊಡ್ಡ ಸಮಾರಂಭಗಳಿಗೆ ಪೊಲೀಸ್ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮ ಪಾಲಿಸದಿರುವುದೇ ಇಂಥ ದುರಂತಗಳಿಗೆ ಕಾರಣವಾಗಿದೆ.
ಗೃಹ ಸಚಿವರಿಂದ ಸ್ಥಳ ಪರಿಶೀಲನೆ:
ಗೃಹ ಸಚಿವ ಡಾ. ಪರಮೇಶ್ವರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಪುಣ್ಯಕ್ಕೆ ವಿಧಾನಸೌಧದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದರು.
ಮೃತರೆಲ್ಲರೂ ಯುವಕರಾಗಿದ್ದು, ಮೃತ ವ್ಯಕ್ತಿಯ ತಂದೆಯೊಬ್ಬರು ತಮ್ಮ ಒಬ್ಬನೇ ಒಬ್ಬ ಮಗ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ, ನಾವು ಬೇಡ ಎಂದರೂ ಮಗ ತೆರಳಿ ಶವವಾಗಿ ಮನೆಗೆ ಬಂದಿದ್ದಾನೆ ಎಂದು ಎಂದು ದುಃಖದಿಂದ ತಿಳಿಸಿದರು.
ಸಾರ್ವಜನಿಕರು ಮತ್ತು ಕೆಲವು ರಾಜಕೀಯ ನಾಯಕರು ಈ ಘಟನೆಗೆ ಸರಕಾರದ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದ್ದಾರೆ. ಇದು ಸರಕಾರಿ ಪ್ರಾಯೋಜಿತ ಕೊಲೆ ಎಂದು ಕೆಲವರು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ