
ಬೆಂಗಳೂರು (ಜೂ.5): ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ತಂಡದ ವಿಜಯೋತ್ಸವ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಬಲಿಯಾಗಿ, 42 ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯಿಸಿದ್ದು, ನಿನ್ನೆ ಆಗಿರುವ ಘಟನೆ ಆಗಬಾರದಿತ್ತು. ಆಗಿಹೋಗಿದೆ ಎಂದರು.
17 ವರ್ಷಗಳಿಂದ ಕಾಯುತ್ತಿದ್ದ ಸಂಭ್ರಮಕ್ಕಾಗಿ ಜನರು ಇಷ್ತು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ನಮ್ಮ ಕಡೆಯಿಂದ ತಯಾರಿ ಇನ್ನೂ ಉತ್ತಮವಾಗಿ ಆಗಬೇಕಿತ್ತು ಎನ್ನುವ ಮೂಲಕ ಪೂರ್ಣ ತಯಾರಿ ಇಲ್ಲದೇ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದು ಖರ್ಗೆಯವರು ಒಪ್ಪಿಕೊಂಡರು.
ಈ ಘಟನೆಯಲ್ಲಿ 11 ಜನರು ಬಲಿಯಾಗಿದ್ದಾರೆ. ಸಂತ್ರಸ್ತ ಕುಟುಂಬಗಳ ಜೊತೆಗೆ ನಾವಿದ್ದೇವೆ. ಸಮಯಾವಕಾಶ ಕಡಿಮೆ ಇದ್ದರೂ, ಜವಾಬ್ದಾರಿಯಿಂದ ನಾವು ಜಾರಿಕೊಳ್ಳುವುದಿಲ್ಲ. ಸರ್ಕಾರವಾಗಿ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡ ಈ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಖರ್ಗೆ ತಿಳಿಸಿದರು.
ಬಿಜೆಪಿಯ ಆರೋಪಗಳಿಗೆ ತಿರುಗೇಟು
ನಾವು ಕೇಂದ್ರ ಸರ್ಕಾರದಂತೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ. ಬಿಜೆಪಿಯವರು ಓಪನ್ ಬಸ್‌ನಲ್ಲಿ ಪರೇಡ್ ಮಾಡಬೇಕಿತ್ತು ಎಂದು ಪೋಸ್ಟ್ ಮಾಡಿ, ನಂತರ ಡಿಲೀಟ್ ಮಾಡಿದ್ದು ಯಾಕೆ? ಎಲ್ಲದರಲ್ಲೂ ರಾಜಕೀಯ ಮಾಡುವುದು ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಅವರ ಆರೋಪಗಳಿಗೆ ಗಮನ ಕೊಡುವ ಅಗತ್ಯ ಇಲ್ಲ' ಎಂದರು.
ಲೋಪ ಒಪ್ಪಿಕೊಂಡ ಖರ್ಗೆ:
ನಮ್ಮ ಕಡೆಯಿಂದ ಲೋಪವಾಗಿರುವುದು ಸತ್ಯ. ಆದರೆ, ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಅವರು ಈ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದು ಖರ್ಗೆ ಕಿಡಿಕಾರಿದರು. ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸಿ, ಘಟನೆಯಿಂದ ಕಲಿತ ಪಾಠದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ