
ಬೆಂಗಳೂರು (ಏ.30): ರಾಜ್ಯ ಸರ್ಕಾರ ಇತ್ತೀಚೆಗೆ ಡೀಸೆಲ್ ತೆರಿಗೆ, ವಿದ್ಯುತ್ ದರ ಹಾಗೂ ಹಾಲಿನ ಬೆಲೆಗಳನ್ನು ಹೆಚ್ಚಿಸಿದ ಬೆನ್ನಲ್ಲೇ, ಈಗ ಮದ್ಯದ ಮೇಲೂ 4ನೇ ಬಾರಿಗೆ ದರ ಏರಿಕೆ ಮಾಡಲು ಮುಂದಾಗಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಘೋಷಿಸಿದ್ದರೂ, ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಸಂಜೆ ಮದ್ಯ ಅಬಕಾರಿ ಇಲಾಖೆ ಬಿಡುಗಡೆ ಮಾಡಿದೆ.
ಡೀಸೆಲ್, ವಿದ್ಯುತ್, ಹಾಲು ಬೆಲೆ ಏರಿಕೆಯ ನಂತರ ಈಗ ಕರ್ನಾಟಕ ಸರ್ಕಾರವು ಮದ್ಯದ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಈ ಕುರಿತು ಸರಕಾರಿ ಅಧಿಸೂಚನೆ ಮಂಗಳವಾರ ಸಂಜೆ ಅಬಕಾರಿ ಇಲಾಖೆ (Excise Department) ವತಿಯಿಂದ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಆದರೆ ಅಧಿಸೂಚನೆಯು ಈಗ ಅಧಿಕೃತವಾಗಿ ಹೊರಬಿದ್ದಿದ್ದು, ರಾಜ್ಯದ ಎಲ್ಲ ಬಾರ್‌ಗಳನ್ನು ಬ್ಯಾಂಕ್ ಎಟಿಎಂ ಮಾಡಿಕೊಂಡಿರುವ ಸರ್ಕಾರ ಇದೀಗ ಮದ್ಯದ ಮಾರಾಟದಿಂದ 40,000 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ಹೆಚ್ಚಳದ ಪ್ರಮುಖ ಅಂಶಗಳು:
ರಾಜ್ಯದಲ್ಲಿ ಅತಿಹೆಚ್ಚಿನ ಜನರು ಸೇವಿಸುವ ಹಾಗೂ ಮದ್ಯಮ ವರ್ಗದ ಬೆಲೆಯನ್ನು ಹೊಂದಿರುವ ಮದ್ಯಗಳ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ (Brandy, Whisky, Rum, Gin) ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟರ್‌ಗೆ ₹10 ರಿಂದ ₹15 ರವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಇನ್ನು ಬಿಯರ್ ದರವನ್ನು ಎಲ್ಲಾ ವರ್ಗಗಳಲ್ಲಿ 10% ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಮಧ್ಯಮ ವರ್ಷದ ಮದ್ಯಕ್ಕೂ ತುಸು ಪ್ರಮಾಣದಲ್ಲಿ ದರ ಏರಿಕೆ ಆಗಲಿದೆ. ಆದರೆ, ಹೈ ಎಂಡ್ (ಅಥವಾ ಪ್ರೀಮಿಯಂ ಬ್ರ್ಯಾಂಡ್) ಮದ್ಯಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ವೈನ್, ಫಣ್ಣಿ ಸೇರಿದಂತೆ ಕೆಲವು ಮದ್ಯಗಳನ್ನು ದರ ಏರಿಕೆಯಿಂದ ಹೊರಗಿಡಲಾಗಿದೆ.
ಈ ನಿರ್ಧಾರಕ್ಕೆ ಕಾರಣವೇನು?
ಮದ್ಯ ನಿಯಂತ್ರಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದಂತೆ: ರಾಜ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಮದ್ಯ ಮಾರಾಟದಿಂದ ₹40,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಲಾಗಿದೆ. ಹತ್ತಿರದ ರಾಜ್ಯಗಳೊಂದಿಗೆ ಮದ್ಯದ ಬೆಲೆಯನ್ನು ಸಮಪಾಲು ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ರಾಜ್ಯದ ಗಡಿಭಾಗಗಳಲ್ಲಿ ಅಗ್ಗದ ಮದ್ಯದ ಮಾರಾಟ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ನೆರೆಹೊರೆ ರಾಜ್ಯಗಳಿಗೆ ಸರಿಸಮನಾದ ಬೆಲೆಯನ್ನು ನಿಗದಿ ಮಾಡಲು ಮುಂದಾಗಿದೆ. ಕರ್ನಾಟಕದಲ್ಲಿ ತಯಾರಾದ ಮದ್ಯಕ್ಕೆ ಬೇರೆಯ ರಾಜ್ಯಗಳಲ್ಲಿ ಪ್ರವೇಶವಿಲ್ಲ. ಆದರೆ ಆ ರಾಜ್ಯಗಳ ಮದ್ಯ ಬಾಟಲಿಗಳು ಕರ್ನಾಟಕಕ್ಕೆ ಬರಲು ಅನುಮತಿ ಇದೆ. ಇದರ ವಿರುದ್ಧ ಸಮತೋಲನಕ್ಕಾಗಿ ದರ ಏರಿಕೆ ಅನಿವಾರ್ಯವ ಆಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಇನ್ನು ರಾಜ್ಯದ ಮದ್ಯ ಸೇವನೆ ಮಾಡುವ ಜನರಿಗೆ ಆರ್ಥಿಕ ಹೊರೆ ಆಗಬಹುದಾದರೂ ಸರ್ಕಾರಕ್ಕೆ ಇದು ಆದಾಯದ ಉತ್ತಮ ಮೂಲ ಎಂಬ ಉದ್ದೇಶವನ್ನು ಹೊಂದಿದೆ. ಹೀಗಾಗಿ, ರಾಜ್ಯ ಸರ್ಕಾರ ಪದೇ ಪದೆ ಮದ್ಯದ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದೆ. ಇನ್ನು ಮದ್ಯ ದರವನ್ನು ವಿರೋಧ ಮಾಡಿ, ಬೆಲೆ ತಗ್ಗಿಸುವಂತೆ ಮನವಿ ಮಾಡಿದರೂ ಸರ್ಕಾರ ಮಾತ್ರ ಕ್ಯಾರೇ ಎನ್ನುವುದಿಲ್ಲ. ಜೊತೆಗೆ, ನಿಮಗೆ ಬೆಲೆ ದುಬಾರಿ ಎನಿಸಿದರೆ ಮದ್ಯ ಸೇವನೆ ಬಿಟ್ಟುಬಿಡಿ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಲೇಬಲ್ ಹಾಕಿದೆಯಲ್ಲವೇ ಎಂಬ ಸಿದ್ಧ ಉತ್ತರವನ್ನೂ ಕೊಡಬಹುದು.
ಇನ್ನು ಈ ಹೊಸ ದರ ಏರಿಕೆ ಅಧಿಸೂಚನೆ ಬಿಡುಗಡೆಯಾದ ದಿನದಿಂದ ಆರಂಭವಾಗಿ ನಾಗರಿಕರಿಗೆ 7 ದಿನಗಳ ಅವಧಿ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂಧನ, ಹಾಲು, ವಿದ್ಯುತ್, ಬಸ್, ಮೆಟ್ರೋ ಪ್ರಯಾಣ ದರ, ಪ್ರಮಾಣ ಪತ್ರಗಳ ಸೇವಾ ಶುಲ್ಕ ಸೇರಿ ಒಟ್ಟಾರೆಯಾಗಿ 45ಕ್ಕೂ ಅಧಿಕ ವಸ್ತುಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಇದೀಗ ಪುನಃ 4ನೇ ಬಾರಿಗೆ ಮದ್ಯದ ದರ ಏರಿಕೆ ಮಾಡಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ