ಹಿಜಾಬ್ ತೀರ್ಪು: 'ಕಪಾಳಮೋಕ್ಷ' ಎಂದ ರೇಣುಕಾಚಾರ್ಯಗೆ ತಿವಿದ ಸಿದ್ದರಾಮಯ್ಯ!

Published : Mar 15, 2022, 01:14 PM IST
ಹಿಜಾಬ್ ತೀರ್ಪು: 'ಕಪಾಳಮೋಕ್ಷ' ಎಂದ ರೇಣುಕಾಚಾರ್ಯಗೆ ತಿವಿದ ಸಿದ್ದರಾಮಯ್ಯ!

ಸಾರಾಂಶ

* ಹಿಜಾಬ್ ವಿವಾದ ಪ್ರಕರಣದಲ್ಲಿ ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್‌ * ಹಿಜಾಬ್, ಕೇಸರಿ ಶಾಲು ಯಾವುದಕ್ಕೂ ತರಗತಿಯಲ್ಲಿ ಅವಕಾಶ ಇಲ್ಲ * ಸಮವಸ್ತ್ರ ಧರಿಸಿಯೇ ತರಗತಿಗಳಿಗೆ ಪ್ರವೇಶಿಸಲು ಕೋರ್ಟ್‌ ಆದೇಶ

ಬೆಂಗಳೂರು(ಮಾ.15): ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಹಿಜಾಬ್ ವಿವಾದ ಪ್ರಕರಣದ ತೀರ್ಪು ಹೈಕೋರ್ಟ್ ಪ್ರಕಟಿಸಿದೆ. ರಾಜ್ಯ ಸರ್ಕಾರ ಸಮವಸ್ತ್ರ ಧರಿಸಿ ತರಗತಿಗಳಿಗೆ ಬರಬೇಕೆಂಬ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್‌ ವಿದ್ಯಾರ್ಥಿಗಳಿಗೆ ಹಿಜಾಬ್ ಅಥವಾ ಕೇಸರಿ ಶಾಲು ಧರಿಸದೆ ತರಗತಿಗಳಿಗೆ ಹಾಜರಾಗುವಂತೆ ಆದೇಶಿಸಿದೆ. ಹೀಗಿರುವಾಗ ಈ ತೀರ್ಪಿನ ಸಂಬಂಧ ರಾಜಕೀಯ ನಾಯಕರು ಭಿನ್ನ ವಿಭಿನ್ನವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ ವಿವರ.

ಸಿಎಂ ಬಸವರಾಜ್ ಬೊಮ್ಮಾಯಿ:

ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು. ಎಲ್ಲ ಧರ್ಮಗಳ ಮುಖಂಡರು ಶಾಂತಿ ಕಾಪಾಡಬೇಕು. ಮಕ್ಕಳಿಗೆ ಎಲ್ಲಕ್ಕಿಂತ ವಿದ್ಯೆಯೇ ಮುಖ್ಯ, ವಿದ್ಯೆಗಿಂತ ಬೇರೆ ಇಲ್ಲ. ಮುಂದಿನ ಎಲ್ಲ ಪರೀಕ್ಷೆಗಳಿಗೂ ಕಡ್ಡಾಯವಾಗಿ ಹಾಜರಾಗಿ. ಎಲ್ಲ ವಿದ್ಯಾರ್ಥಿನಿಯರೂ ಹೈಕೋರ್ಟ್ ಆದೇಶ ಪಾಲಿಸಬೇಕು. ಹಿಜಾಬ್ ವಿವಾದ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳುವ ಸಾಹಸ ತೋರಬಾರದು ಎಂದು ಮನವಿ ಮಾಡಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ

ಹೈಕೋರ್ಟ್ ತೀರ್ಮಾನ ಬಂದಿದೆ. ಇದರ ಬಗ್ಗೆ  ವ್ಯಾಖ್ಯಾನ ಮಾಡಲು ಹೋಗಲ್ಲ. ಹಿಜಾಬ್ ಧರಿಸೋದ್ರಿಂದ ಯಾರಿಗೂ ತೊಂದರೆ ಇಲ್ವಲ್ಲಾ ಅಂತಾ ನಾವೂ ಹೇಳಿದ್ದೆವು. ಇವತ್ತು ಹೈಕೋರ್ಟ್ ತೀರ್ಮಾನ ಬಂದಿದೆ. ಅದನ್ನು ಎಲ್ಲರೂ ಸ್ವಾಗತಿಸಬೇಕು. ಇದರಲ್ಲಿ ಕಾಂಗ್ರೆಸ್ ನವರಿಗೆ ಕಪಾಳಮೋಕ್ಷ, ಮತ್ತೊಂದು ಮೋಕ್ಷ ಅನ್ನೋದು ಏನೂ ಇಲ್ಲ ಯಾರಿಗೂ ನಷ್ಟ ಕೂಡ ಆಗಲ್ಲ. ಹಾಕಿಕೊಳ್ಳಲಿ ಬಿಡಿ ಅಂತ ಹೇಳಿದ್ದೆವು. ಅವರು ಹಿಜಾಬ್ ಜೊತೆಗೆ ಯೂನಿಫಾರಮ್ ಕೂಡ ಹಾಕೋದಾಗಿ ಹೇಳಿದ್ರು. ಕೋರ್ಟ್ ಆದೇಶ, ಕೋರ್ಟ್ ಆದೇಶ ಅಷ್ಟೇ ಎಂದು ಹೇಳಿದ್ದಾರೆ. ಈ ಮೂಲಕ ರೇಣುಕಾಚಾರ್ಯ ಹೇಳಿಕೆಗೆ ಸಿದ್ದರಾಮಯ್ಯ  ಟಾಂಗ್ ನೀಡಿದ್ದಾರೆ.  

ಅಷ್ಟಕ್ಕೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದೇನು?

ಕೆಲವು ದೇಶದ್ರೋಹಿ ಸಂಘಟನೆಗಳು ರಾಜ್ಯದಲ್ಲಿ ಶಾಂತಿ ಕದಡಲು  ಪ್ರಯತ್ನ ಮಾಡಿದ್ದವು. ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವಂತೆ ಮಾಡಲು ಹೊರಟಿದ್ದರು. ಕಾಂಗ್ರೆಸ್ ಮುಖಂಡರಿಗೂ ಕಪಾಳಮೋಕ್ಷ ಆಗಿದೆ. ಅವರೂ ಈ ರೀತಿ ಪ್ರಯತ್ನ ಮಾಡಿದ್ದರು. ಮತಬ್ಯಾಂಕ್ ಗಾಗಿ ಇಂತಹಾ ಕೆಲಸ ಮಾಡಲು ಮುಂದಾಗಿದ್ದರು. ಸಂಭ್ರಮಾಚರಣೆಗಳು ಮತ್ತಿತರ ಕೆಲಸ ಮಾಡಬಾರದು. ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕು. ಎಲ್ಲರೂ ನಮ್ಮ ಮಕ್ಕಳು, ಶಿಕ್ಷಣ ವಂಚಿತರಾದರೆ ಅಡ್ಡದಾರಿ ಹಿಡಿಯುತ್ತಾರೆ. ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತೆ. ಹಾಗಾಗಬಾರದು ಎಂದು ರೇಣುಕಾಚಾರ್ಯ ಹೇಳಿದ್ದರು. 

ಸುಪ್ರೀಂ ಮೆಟ್ಟಿಲೇರುತ್ತೇವೆ, ತನ್ವೀರ್ ಸೇಠ್

ತೀರ್ಪು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ ಗೆ ಹೋಗಲು ತೀರ್ಮಾನಿಸಿದ್ದೇವೆ. ಧರ್ಮ ರಕ್ಷಣೆ ಎಂಬುವುದು ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದಿದ್ದರೂ, ವಿದ್ಯಾರ್ಥಿ ದೆಸೆಯಿಲ್ಲಿ ಇದೆನ್ನು ತಂದಿದ್ದು ತಪ್ಪು. ದೇಶವನ್ನು ಪ್ರಗತಿ ಪರವಾಗಿ ಬೆಳಸಬೇಕಾದ ನಾವು, ಮಕ್ಕಳಲ್ಲಿ ತಾರತಮ್ಯ ತಂದು ಐಕತ್ಯತೆಗೆ ದಕ್ಕೆ ತರುತ್ತಿದ್ದೇವೆ. ಹೀಗಾಗಿ ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಾಕ್ತೀವಿ. ಸಂಪ್ರದಾಯಗಳು ಯಾವ ಯಾವಾಗ ಬಂತು ಅಂತ ಹೇಳೋಕೆ ಆಗೋದಿಲ್ಲ. ನಿರಂತರ ವಾಗಿ ತ್ರೀಬಲ್ ತಲಾಖ್, ಮತಾಂತರ ಕಾಯಿದೆ,ಗೋ ಹತ್ಯೆ ನಿಷೇಧ ಇರಬಹುದು ಇವೆಲ್ಲ ಕಸಬು ಮತ್ತು ಜನಾಂಗದವರನ್ನ  ಮಾಡುವವರನ್ನ ಟಾರ್ಗೆಟ್ ಮಾಡಲಾಗ್ತಿದೆ. ಈಗ ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಅಲ್ಲಿ ಏನ್ ಬರುತ್ತೋ ನೋಡೋಣ ಎಂದಿದ್ದಾರೆ.

ಸಿಎಂ ಇಬ್ರಾಹಿಂ

ಸುಪ್ರೀಂ ಕೋರ್ಟ್‌ಗೆ ಹೋಗಲು ಸಮಾಜದ ಮುಖಂಡರು ನಿರ್ಧಾರ ತಗೆದುಕೊಳ್ಳುತ್ತಿದ್ದಾರೆ‌.. ಮನವಿ ಮಾಡ್ತೀನಿ, ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಶಕ್ತವಾಗಿದ್ದೇವೆ. ಭಾರತದ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ಗೆ ಒಬ್ಬೊಬ್ಬರೆ ಲಾಯರ್ ಹೋಗಬೇಡಿ. ಎಲ್ಲಾ ಒಟ್ಟಿಗೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ, ಹೈಕೋರ್ಟ್ ತೀರ್ಪು ನಾವು ಒಪ್ಪೋದಿಲ್ಲ. ಇದರ ವಿರುದ್ಧ ನಾವು ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ. ಸುಪ್ರೀಂ ಕೋರ್ಟ್‌ಗೆ ಹೋಗಬೇಡಿ ಅಂತ ಹೈಕೋರ್ಟ್ ಹೇಳಿಲ್ಲ ಎಂದಿದ್ದಾರೆ. 

ಎಸ್ ಆರ್ ವಿಶ್ವನಾಥ್

ಕಳೆದ ಹಲವಾರು ದಿನಗಳಿಂದ ರಾಜ್ಯ ಸೇರಿದಂತೆ ದೇಶದಾದ್ಯಂತ ಕುತೂಹಲ ಕೆರಳಿಸಿದ ಪ್ರಕರಣ ಇದು. ಹೈಕೋರ್ಟ್ ಒಳ್ಳೆಯ ತೀರ್ಪು ಕೊಟ್ಟಿದೆ, ಎಲ್ಲರೂ ಸಮಾನರು. ಹಿಜಾಬ್,ಕೇಸರಿ ಸೇರಿದಂತೆ ಯಾವುದೂ ಧರಿಸುವಂತಿಲ್ಲ ಎಂಬ ತೀರ್ಪು ಬಂದಿದೆ. ಸರ್ಕಾರದ ನಿರ್ಧಾರ ಏಕ ಪಕ್ಷೀಯ ಅಂತಾ ಕೆಲವರು ಹೇಳ್ತಿದ್ರು. ಅದು ತಪ್ಪು ಅಂತಾ ಈಗ ಗೊತ್ತಾಗಿದೆ ಎಂದಿದ್ದಾರೆ. 

ಬಸನಗೌಡ ಪಾಟೀಲ್ ಯತ್ನಾಳ್

ಹೈಕೋರ್ಟ್ ತೀರ್ಪು ಸ್ವಾಗತ ಮಾಡುತ್ತೇವೆ. ತುಷ್ಟಿಗುಣ ವ್ಯವಸ್ಥೆ ಇದೆ. ಮೂಲಭೂತವಾದಿಗಳು ದೇಶ ಒಡೆಯಲು ಇಸ್ಲಾಂ ಹೆಸರಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸಿದ್ದಾರೆ. ಖಾದರ್, ಜಮೀರ್ ಹೇಳಿಕೆಗಳಿಗೆ ಬೆಲೆ ಇಲ್ಲ, ಅವರು ಎಲ್ಲಿ ಹೋಗ್ತಾರೆ ಹೋಗಲಿ. ನ್ಯಾಯಾಲಯ ಸಂವಿಧಾನಾತ್ಮಕ ವ್ಯವಸ್ಥೆ ಎತ್ತಿ ಹಿಡಿದಿದೆ ಎಂದಿದ್ದಾರೆ ಯತ್ನಾಳ್.

ಹಿಜಾಬ್ ಬಗ್ಗೆ ಸರ್ಕಾರದ ನಿಲುವನ್ನು ಕೋರ್ಟ್ ಎತ್ತಿ ಹಿಡಿದಿದೆ: ಸಚಿವ ಸುನಿಲ್ ಕುಮಾರ್

ಹಿಜಾಬ್ ಬಗ್ಗೆ ಸರ್ಕಾರದ ನಿಲುವನ್ನು ಕೋರ್ಟ್ ಎತ್ತಿ ಹಿಡಿದಿದೆ. ನಾನು ಸ್ವಾಗತಿಸುತ್ತೇನೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂಬುದು ನಮ್ಮ ಆಶಯ. ಧಾರ್ಮಿಕ ಚಟುವಟಿಕೆಗಳು ಏನೇ ಇದ್ದರೂ ಶಾಲಾ ಕಾಲೇಜಿನ ಹೊರಗೆ ಇರಬೇಕು. ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ದಿಕ್ಕುತಪ್ಪಿಸಿ ವಾತಾವರಣ ಕಲುಷಿತ ಮಾಡಲು ಪ್ರಯತ್ನ ಮಾಡಿದ್ರು. ಅಂತಹವರಿಗೆ ಹಿನ್ನಡೆ ಆಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು  ಕೊಡಬೇಕು ಎಂದಿದ್ದಾರೆ ಸಚಿವ ಸುನಿಲ್ ಕುಮಾರ್.

ಶಿಕ್ಷಣ ಸಚಿವ ನಾಗೇಶ್ ಹೇಳಿದ್ದೇನು?

ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ.  ಈ ನೆಲ, ನೆಲದ ಕಾನೂನು ಅಂತಿಮ ಎಂದು ಪ್ರಾಥಮಿಕ ‌ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ. 

ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂದಿರುಗಿ

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಮಾಳವಿಕಾ ಅವಿನಾಶ್ ಖೇಲ್ ಖತಂ, ನಾಟಕ್ ಬಂದ್! ಶಾಲೆಗೆ ಹಿಂದಿರುಗಿ, ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು  ಹೈಕೋರ್ಟ್‌ ಹೇಳಿದೆ. ನಿರ್ಬಂಧವನ್ನು ಸಂವಿಧಾನದಿಂದ ಅನುಮತಿಸಲಾದ ಸಮಂಜಸವಾದ ನಿರ್ಬಂಧಗಳಿಂದ ಆವರಿಸಲ್ಪಟ್ಟಿದೆ. ದೋಷಾರೋಪಣೆಯ ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿದೆ. ಎಲ್ಲಾ ರಿಟ್‍ಗಳನ್ನು ವಜಾಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೌಡಿಯೊಂದಿಗೆ ಬರ್ತಡೇ ಪಾರ್ಟಿ ಮಾಡಿಕೊಂಡ ಪಿಎಸ್‌ಐ ನಾಗರಾಜ್; ಸಸ್ಪೆಂಡ್ ನೋಟೀಸ್ ಕಳಿಸಿದ ಕಮೀಷನರ್!
Karnataka Hate Speech Bill 2025: ವಿರೋಧಿಗಳ ಹತ್ತಿಕ್ಕಲು ಸರ್ಕಾರಕ್ಕೆ ದ್ವೇಷ ಮಸೂದೆ ಮುಕ್ತ ಪರವಾನಗಿ!