Latest Videos

ಆನೆ ಸಾವು ತಡೆಯಲು ಏನು ಕ್ರಮಕೈಗೊಂಡಿದ್ದೀರಿ: ಕೇಂದ್ರ ಮತ್ತು ರಾಜ್ಯಕ್ಕೆ ಕರ್ನಾಟಕ ಹೈಕೋರ್ಟ್‌ ನೊಟೀಸ್

By Kannadaprabha NewsFirst Published Jun 16, 2024, 11:30 AM IST
Highlights

ವನ್ಯಜೀವಿಗಳು ಸಾವನ್ನಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರ ಬಗ್ಗೆ ಸ್ವಯಂಪ್ರೇರಿತ  ಪಿಐಎಲ್‌  ದಾಖಲಿಸಿಕೊಂಡಿರುವ ಹೈಕೋರ್ಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರು (ಜೂ.16): ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಹಾಗೂ ಅಸ್ವಾಭಾವಿಕ ಕಾರಣಗಳಿಂದ ಆನೆ ಸೇರಿದಂತೆ ವನ್ಯಜೀವಿಗಳು ಸಾವನ್ನಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಿಕೊಂಡಿರುವ ಹೈಕೋರ್ಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಪತ್ರಿಕೆಯೊಂದರದಲ್ಲಿ ಪ್ರಕಟವಾದ ವರದಿಯ ಆಧರಿಸಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿಕೊಂಡಿತು. ಅರ್ಜಿಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ನೋಟಿಸ್ ಜಾರಿ ಮಾಡಿತು.

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಓಡಾಡಿದ ಆನೆ, ಆತಂಕದಲ್ಲಿ ಜನತೆ..!

ಅಲ್ಲದೆ, ಆನೆ ಸೇರಿ ವನ್ಯಜೀವಿಗಳ ಅಸ್ವಾಭಾವಿಕ ಸಾವುಗಳನ್ನು ತಡೆಯುವುದು ಮತ್ತು ಅವುಗಳಿಗೆ ರಕ್ಷಣೆಯನ್ನು ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳೇನು? ಇತ್ತೀಚೆಗೆ ಬೆಳಕಿಗೆ ಬಂದ ಆನೆಗಳ ಸತತ ಸಾವುಗಳನ್ನು ತಡೆಯುವುದಕ್ಕೆ ಕೈಗೊಂಡಿರುವ ಕ್ರಮಗಳೇನು? ಈ ರೀತಿಯ ಘಟನೆಗಳನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿಕೊಂಡಿರುವ ಕಾರ್ಯವಿಧಾನಗಳು ಯಾವುವು? ಈ ರೀತಿಯ ಸಾವುಗಳಿಗೆ ಯಾವ ರೀತಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗುತ್ತದೆ? ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಉತ್ತರ ನೀಡಬೇಕು ಎಂದು ಪ್ರತಿವಾದಿ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಜು.1ಕ್ಕೆ ಮುಂದೂಡಿತು.

ದಸರಾ ಉತ್ಸವದ ಮತ್ತೊಂದು ಆನೆ ಅಶ್ವತ್ಥಾಮ ಸಾವು; ಸೋಲಾರ್ ತಂತಿಬೇಲಿ ತಗುಲಿ ಪ್ರಾಣಬಿಟ್ಟ ಗಜ

ಅಶ್ವತ್ಥಾಮ ಎಂಬ ಆನೆ ಮೈಸೂರಿನಲ್ಲಿ ಸಾವಿಗೀಡಾಗಿದೆ. ಚಿಕ್ಕಮಗಳೂರಿನಲ್ಲಿ ಮತ್ತೊಂದು ಆನೆ ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ಸಾವಿಗೀಡಾಗಿವೆ. ರಾಜ್ಯದ ವನ್ಯಜೀವಿ ಧಾಮಗಳು ಸೇರಿದಂತೆ ಅನೇಕ ಭಾಗಗಳಲ್ಲಿ ಆನೆಗಳು ಸೇರಿದಂತೆ ಇತರೆ ವನ್ಯಜೀವಿಗಳು ವಿದ್ಯುತ್ ಸ್ವರ್ಶ ಅಥವಾ ಅಸ್ವಾಭಾವಿಕ ರೀತಿಯಲ್ಲಿ ಸಾವನ್ನಪ್ಪುತ್ತಿರುವೆ. ಇದು ಅತ್ಯಂತ ಗಂಭೀರ ಮತ್ತು ಆತಂಕದ ವಿಚಾರ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದರಿಂದಲೇ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ ಎಂಬುದಾಗಿ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖವಾಗಿದೆ. ವನ್ಯಜೀವಿಧಾಮ ಮತ್ತು ರಕ್ಷಿತಾರಣ್ಯಗಳು ಮಾತ್ರವಲ್ಲದೆ ಇತರೆ ಭಾಗಗಳಲ್ಲಿಯೂ ಆನೆಗಳು ಸೇರಿದಂತೆ ವನ್ಯಜೀವಿಗಳ ರಕ್ಷಣೆ ಮಾಡಬೇಕಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಕಾಳಜಿ ವ್ಯಕ್ತಪಡಿಸಿದೆ.

ನೀರು ಕುಡಿಯಲು ಬಂದ ಆನೆ ಈಜಾಡಿ ಮತ್ತೆ ಕಾಡಿಗೆ ವಾಪಸ್‌
ಹನೂರು: ನೀರು ಕುಡಿಯಲು ಬಂದ ಗಜರಾಜ ಈಜಾಡಿ ಮತ್ತೆ ಕಾಡಿಗೆ ತೆರಳಿದ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀರೆಪಾತಿ ಕೆರೆಗೆ ಗುರುವಾರ ಸಂಜೆ ಸುಮಾರು 6.30 ಗಂಟೆಗೆ ನೀರು ಅರಸಿ ಬಂದ ಆನೆ ಕೀರೆಪಾತಿ ಕೆರೆಯಲ್ಲಿ ಈಜಾಡಿ ನಂತರ ಮರಳಿ ಕಾಡಿಗೆ ತೆರಳಿದೆ. ಮಲೆ ಮಾದೇಶ್ವರ ವನ್ಯಜೀವಿ ವಲಯ ಅರಣ್ಯ ಪ್ರದೇಶದಿಂದ ಕಾಡಾನೆ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀರೆ ಪಾತಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆ ತುಂಬಿರುವುದರಿಂದ ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರು ಸಿಗದಿದ್ದಾಗ ಆನೆ ನೀರು ಅರಸಿ ಬಂದು ಗ್ರಾಮದ ಕೆರೆಯಲ್ಲಿ ನೀರು ಕುಡಿದು ಸ್ವಚ್ಛಂದವಾಗಿ ಈಜಾಡಿ ವಿಹಾರ ಮಾಡಿ ಮತ್ತೆ ಅರಣ್ಯಕ್ಕೆ ತೆರಳಿದ ಚಿತ್ರಣವನ್ನು ಸಾರ್ವಜನಿಕರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.

click me!