ಬೆಂಗಳೂರು (ಜೂ.8): ಪ್ರಕರಣವೊಂದರಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಬಿಡಿಎ (Bangalore Development Authority - BDA)) ಆಯುಕ್ತ ರಾಜೇಶ್‌ಗೌಡ (bda commissioner Rajesh Gowda) ಅವರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನಾರಾಯಣಮ್ಮ ಹಾಗೂ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬಿಡಿಎ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತು.
ಬಡಾವಣೆ ರಚನೆಗಾಗಿ ನಗರದ ಕೆಂಗೇರಿಯಲ್ಲಿ ತಮಗೆ ಸೇರಿದ ಜಾಗ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡಲು ಬಿಡಿಎಗೆ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿರ್ದೇಶನ ನೀಡುವಂತೆ ಕೋರಿ ನಾರಾಯಣಮ್ಮ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ಈ ಬಗ್ಗೆ ಬಿಡಿಎಗೆ ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಎರಡು ತಿಂಗಳಲ್ಲಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಬಿಡಿಎಗೆ 2020ರ ಡಿಸೆಂಬರ್‌ನಲ್ಲಿ ನಿರ್ದೇಶಿಸಿತ್ತು.
SHIVAMOGGAದಲ್ಲಿ ಹಳೆ ದ್ವೇಷಕ್ಕೆ ಸ್ನೇಹಿತನನ್ನೇ ಮಗಿಸಲು ಸ್ಕೆಚ್!
ಅದರಂತೆ ಅರ್ಜಿದಾರರು 2021ರ ಜನವರಿಯಲ್ಲಿ ಬಿಡಿಎಗೆ ಮನವಿ ಪತ್ರ ಸಲ್ಲಿಸಿದ್ದರು. ಒಂದೂವರೆ ವರ್ಷ ಕಳೆದರೂ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಬಿಡಿಎ ಆಯುಕ್ತ ರಾಜೇಶ್ ಗೌಡ ವಿರುದ್ಧ ಹೈಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದು ಸೋಮವಾರ ವಿಚಾರಣೆಗೆ ಬಂದಿತ್ತು. ಆಯುಕ್ತ ರಾಜೇಶ್ ಗೌಡ ವಿಚಾರಣೆಗೆ ಖುದ್ದು ಹಾಜರಿದ್ದರು.
ಆಗ ರಾಜೇಶ್ ಗೌಡ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಪ್ರಕರಣದಲ್ಲಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2020ರ ಡಿಸೆಂಬರ್‌ನಲ್ಲೇ ನಿರ್ದೇಶಿಸಿತ್ತು. ಆದರೆ, ನೀವು ಅರ್ಜಿದಾರರ ಮನವಿಯನ್ನು 2022ರ ಜೂ.4ರಂದು ಪರಿಗಣಿಸಿ ತಿರಸ್ಕರಿಸಿದ್ದೀರಿ. ಈ ಹಿಂದೆ ನ್ಯಾಯಾಲಯದ ಆದೇಶವನ್ನು ಏಕೆ ಪಾಲಿಸಲಿಲ್ಲ. ನಿಮಗೇನಾದರೂ ಸಮಸ್ಯೆ ಇತ್ತೇ, ಕೋರ್ಟ್ ಆದೇಶ ಪಾಲಿಸಲು ನಿಮಗೆ ಸಮಯ ಇರಲಿಲ್ಲವೇ, ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
Panchamasali Reservation; ಬೊಮ್ಮಾಯಿ ಮುಂದೆ 3 ಆಯ್ಕೆಯಿಟ್ಟ ಜಯ ಮೃತ್ಯುಂಜ
ಕೋರ್ಟ್ ಕೇಳಿದ ಪ್ರಶ್ನೆಗೆ ಆಯುಕ್ತರು ಉತ್ತರಿಸದೇ ಇದ್ದಾಗ, ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ನಿಮ್ಮಿಂದ ನಾವು ಉತ್ತರ ಬಯಸುತ್ತಿದ್ದೇವೆ. ಯಾವ ಕಾರಣಕ್ಕೂ ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸಬೇಡಿ. ಹಾಗೊಂದು ವೇಳೆ ಲಘುವಾಗಿ ಪರಿಗಣಿಸಿದರೆ ಒಂದು ದಿನ ನೀವು ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ನಂತರ ಬಿಡಿಎ ಪರ ವಕೀಲರು, ಏಕ ಸದಸ್ಯ ನ್ಯಾಯಪೀಠ ಆದೇಶದಂತೆ ಅರ್ಜಿದಾರರ ಮನವಿ ಪರಿಶೀಲಿಸಿ ತಿರಸ್ಕರಿಸಲಾಗಿದೆ ಎಂದು ತಿಳಿಸಿ, ಆದೇಶ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಏಕ ಸದಸ್ಯ ನ್ಯಾಯಪೀಠದ ಆದೇಶದಂತೆ ಆಯುಕ್ತರು ಅರ್ಜಿದಾರರ ಮನವಿ ಪರಿಶೀಲಿಸಿ ತಿರಸ್ಕರಿಸಿದ್ದಾರೆ. ಅದನ್ನು ಅರ್ಜಿದಾರರು ಪ್ರತ್ಯೇಕವಾಗಿ ಪ್ರಶ್ನಿಸಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು. ಆ ಮೂಲಕ ಆಯುಕ್ತರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟಿತು.