
ಬೆಂಗಳೂರು (ಮೇ 2): ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠವು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಳಸಿದ್ದ ಅಶ್ಲೀಲ ಪದಗಳ ಸಂಬಂಧ ದಾಖಲಾದ ಎಫ್‌ಐಆರ್ ರದ್ದುಪಡಿಸುವ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಪ್ರಕರಣದ ಹಿನ್ನೆಲೆ: ಕಳೆದ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರು ಶಾಸನಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರು ಅಶ್ಲೀಲ ಪದ ಬಳಕೆಯನ್ನು ಖಂಡಿಸಿ ಹೋರಾಟ ಮಾಡಿದ್ದರು. ಜೊತೆಗೆ, ಸಿ.ಟಿ. ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಇದೇ ವೇಳೆ ಸಿ.ಟಿ. ರವಿ ಅವರ ಮೇಲೆ ಸ್ಥಳೀಯ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಯನ್ನೂ ಮಾಡಿದ್ದರು. ಇದಾದ ನಂತರ ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ರಾತ್ರಿಯಿಡೀ ಜೀಪಿನಲ್ಲಿ ಇಟ್ಟುಕೊಂಡು ಸುತ್ತಾಡಿಸಿದ್ದರು. ಇದಾದ ನಂತರ ಬೆಳಗ್ಗೆ ಸ್ಟೇಷನ್‌ನಲ್ಲಿ ಇಟ್ಟುಕೊಂಡಿದ್ದು, ನಂತರ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ನ್ಯಾಯಾಲಯದ ಮೂಲಕ ಅರ್ಜಿ ಸಲ್ಲಿಸಿದ್ದ ವಕೀಲರು ಜಾಮೀನು ಪಡೆದುಕೊಂಡರು. ಬೆಳಗಾವಿಯಿಂದ ಹೊರಟು ಚಿತ್ರದುರ್ಗದ ಹತ್ತಿರ ಪೊಲೀಸ್ ವಾಹನದಲ್ಲಿ ಬರುವಾಲೇ ಪೊಲೀಸರಿಗೆ ಕೋರ್ಟ್ ಜಾಮೀನಿ ಆದೇಶ ಪತ್ರವನ್ನು ನೀಡಿ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಆಗಿದ್ದರು. ಇದಾದ ನಂತರ ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಕೋರ್ಟ್ ಎಫ್‌ಐಆರ್ ರದ್ದತಿಗೆ ಅರ್ಜಿ ಸಲ್ಲಿಸಿದ್ದ ಸಿ.ಟಿ. ರವಿ ಅವರು, 'ನಾನು ಶಾಸಕರಾಗಿದ್ದರಿಂದ ನನ್ನ ಮೇಲೆ ಶಾಸನಸಭೆಯ ವಿನಾಯಿತಿ ಇದೆ. ಈ ವಿಷಯವನ್ನು ಸ್ಪೀಕರ್ ನಿರ್ಧರಿಸಬೇಕು' ಎಂದು ಹೇಳುತ್ತಾ, ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎಫ್‌ಐಆರ್ ರದ್ದತಿ ಮಾಡದಂತೆ ವಾದ ಮಂಡಿಸಿದ ವಕೀಲ ಶಿವಶಂಕರ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಪರ ವಾದ ಮಂಡಿಸಿ, 'ಶಾಸಕರಾಗಿದ್ದರೂ ಸಹ, ಮಹಿಳೆಯ ಘನತೆಗೆ ಹಾನಿ ಮಾಡುವ ಅಶ್ಲೀಲ ಪದ ಬಳಸಿದರೆ ಅದು ಶಾಸನಸಭೆಯ ವಿನಾಯಿತಿಗೆ ಒಳಪಡುವುದಿಲ್ಲ' ಎಂದು ವಾದಿಸಿದರು. ಜೊತೆಗೆ 'ಸೀತಾ ಸುರೇನ್ vs ಯೂನಿಯನ್ ಆಫ್ ಇಂಡಿಯಾ' ಪ್ರಕರಣದ ಉದಾಹರಣೆ ನೀಡಿ, ಈ ಪ್ರಕರಣಕ್ಕೆ ಸಿ.ಟಿ.ರವಿ vs ಲಕ್ಷ್ಮೀ ಹೆಬ್ಬಾಳ್ಕರ್ ಕೇಸ್ ಕೂಡ ಹೋಲಿಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಲಯದ ಅಭಿಪ್ರಾಯ:
ಈ ಬಗ್ಗೆ ಹೈಕೋರ್ಟ್, 'ಅಶ್ಲೀಲ ಪದ ಬಳಸುವುದು ಯಾವುದೇ ಭೌಮಿಕೆಯಲ್ಲಿ ಸಹನೀಯವಲ್ಲ. ಇದರಿಂದ ವ್ಯಕ್ತಿಯ ಮಾನಸಿಕ ಹಾಗೂ ಸಾಮಾಜಿಕ ಘನತೆಗೆ ಹಾನಿಯಾಗುತ್ತದೆ. ಶಾಸಕರಾಗಿದ್ದವರೂ, ಇಂತಹ ಭಾಷೆ ಬಳಸುವುದು ಕ್ರಿಮಿನಲ್ ಕಾನೂನು ವ್ಯಾಪ್ತಿಗೆ ಬರುತ್ತದೆ' ಎಂಬ ಸೂಚನೆ ನೀಡಿದೆ. ಇನ್ನು ಈ ತೀರ್ಪು ಮೂಲಕ ಸಿಐಡಿ ತನಿಖೆಗೆ ತರಲಾಗಿದ್ದ ಸ್ಟೇ ಆದೇಶವನ್ನೂ ಕೂಡ ತೆರವು ಮಾಡಲಾಗಿದೆ. ಹೀಗಾಗಿ, ಸಿಐಡಿ ಪೊಲೀಸರು ತನಿಖೆ ಮುಂದುವರೆಸಲು ಅವಕಾಶ ಸಿಕ್ಕಿದೆ. 'ಒಬ್ಬರಿಗೊಂದು ಕಾನೂನು, ಮತ್ತೊಬ್ಬರಿಗೊಂದು ಬೇರೆ ಕಾನೂನು ಅಲ್ಲ – ಎಲ್ಲರಿಗೂ ಸಮಾನ ಕಾನೂನು' ಎಂಬ ನಿದರ್ಶನವನ್ನು ಕೋರ್ಟ್ ಈ ಕೇಸಿನ ಆರೋಪಿ ಮತ್ತು ಸಂತ್ರಸ್ತರ ಪರವಾಗಿ ಬಂದವರಿಗೆ ನಿರ್ದೇಶನವನ್ನು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ