ಮದುವೆಯಾಗೋದಾಗಿ ಮೋಸ: ಮಗ ಮಾಡಿದ ತಪ್ಪಿಗೆ ಪೋಷಕರ ಮೇಲೆ ಮದುವೆ ವಂಚನೆ ಕೇಸ್ ಅನ್ವಯಿಸಲ್ಲ-ಹೈಕೋರ್ಟ್

Sathish Kumar KH   | Kannada Prabha
Published : Jul 27, 2026, 08:14 AM IST
karnataka High Court

ಸಾರಾಂಶ

ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಪ್ರಕರಣದಲ್ಲಿ, ಯುವಕನ ಪೋಷಕರು ಮತ್ತು ಸಹೋದರಿ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಆದರೆ, ಯುವತಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿ ಯುವಕನ ವಿರುದ್ಧದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವರದಿ - ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.27): ಯುವತಿಗೆ ಮದುವೆ ಭರವಸೆ ನೀಡಿ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಪ್ರಕರಣದಲ್ಲಿ ಯುವಕನೊಂದಿಗೆ ಆತನ ಪೋಷಕರು ಹಾಗೂ ಒಡಹುಟ್ಟಿದವರನ್ನು ಆರೋಪಿಗಳಾಗಿ ಸೇರಿಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. 

ಯುವತಿಯೊಬ್ಬಳಿಗೆ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ನಂತರ ವಂಚಿಸಿದ ಹಾಗೂ ಒಪ್ಪಿಗೆಯಿಲ್ಲದೆ ಆಕೆಗೆ ಗರ್ಭಪಾತ ಮಾಡಿಸಿದ, ಜೀವ ಬೆದರಿಕೆ ಹಾಕಿದ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪ‌ ಕುರಿತು ದಾಖಲಾಗಿರುವ ಎಫ್ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಯುವಕನ ತಂದೆ, ತಾಯಿ ಮತ್ತು ಸಹೋದರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಪ್ರಕರಣ ರದ್ದು ಕೋರಿ ಯುವಕ (ಮೊದಲನೆ ಆರೋಪಿ) ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ.

ಯುವಕನ ಪೋಷಕರ ಹಾಗೂ ಸಹೋದರಿಯ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರ ಪೀಠ, ಅವರ ವಿರುದ್ಧದ ಎಫ್ಐಆರ್ ರದ್ದುಪಡಿಸಿ, ಯುವಕನ ವಿರುದ್ಧದ ಪ್ರಕರಣ ಬಾಕಿ ಉಳಿಸಿಕೊಂಡಿದ್ದು, ವಿಚಾರಣೆ ಮುಂದೂಡಿದೆ.

ಯುವತಿ ನೀಡಿದ ದೂರಿನ ಸಾರಾಂಶ

ಯುವತಿಯ ದೂರಿನ ಅಂಶಗಳು ಪ್ರಕರಣದ ಮೊದಲನೇ ಆರೋಪಿಯ (ಯುವಕನ) ಜತೆಗೆ ದೂರುದಾರೆ ಬೆಳೆಸಿದ ಪ್ರೇಮ ಪ್ರಕರಣದ ಹಾಗೂ ಸಂಬಂಧದ ನಿರೂಪಣೆಯಾಗಿದೆಯೇ ಹೊರತು ಯುವಕನ ಪೋಷಕರು ಮತ್ತು ಸಹೋದರಿ ವಿರುದ್ಧದ ಯಾವುದೇ ಅಪರಾಧಕ್ಕೆ ಸಂಬಂಧಿಸಿಲ್ಲ. ‘ನಾವು ಬ್ರಾಹ್ಮಣರಾಗಿದ್ದು, ದೂರುದಾರೆ ಬೇರೆ ಜಾತಿಗೆ ಸೇರಿದ್ದಾರೆ. ಆಕೆಯೊಂದಿಗೆ ವಿವಾಹ ಸಮೀಕರಣವಾಗುವುದಿಲ್ಲ ಎಂಬುದಾಗಿ ಯುವಕನ ಪೋಷಕರು/ಸಹೋದರಿ ಹೇಳಿದ್ದಾರೆ ‘ ಎಂಬುದು ದೂರುದಾರೆಯ ಆರೋಪ. ಇದು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಸೆಕ್ಷನ್ 351(2) ಅಡಿಯ ಜೀವ ಬೆದರಿಕೆ ಅಥವಾ ಹಿಂದೆ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) 1862 ಸೆಕ್ಷನ್ 504 (ಉದ್ದೇಶಪೂರ್ವವಾಗಿ ಅವಮಾನಿಸಿದ ಅಥವಾ ಕೆರಳಿಸಿದ) ಹಾಗೂ 506ರ (ಜೀವ ಬೆದರಿಕೆ ಹಾಕಿದ) ಅಪರಾಧದ ಅಂಶಗಳಿಗೆ ಅನ್ವಯ ಆಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ

ಮೊದಲ ಬಾರಿಗೆ 2024ರ ಜು.1ರಿಂದ ಪರಿಚಯಿಸಲಾಗಿರುವ ಬಿಎನ್‌ಎಸ್ 2023ರ ಸೆಕ್ಷನ್ 69 ಅಡಿ ಯುವತಿಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಅಪರಾಧ ಯುವಕನ ವಿರುದ್ಧ ಪರಿಗಣಿಸಲಾಗುತ್ತದೆ. ಆ ಅಪರಾಧವನ್ನು ಯುವಕನ ಪೋಷಕರು ಹಾಗೂ ಸಹೋದರಿಗೆ ಅನ್ವಯಿಸಲಾಗದು.‌ ಆ ಸಂಬಂಧ ಅವರ ವಿರುದ್ಧ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಹಾಗಾಗಿ, ಅವರಿಗೆ ಸಂಬಂಧಿಸಿ ಎಫ್ಐಆರ್ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ವಿವರಿಸಿದೆ.

ಪ್ರಕರಣದ ವಿವರ

ಪ್ರಕರಣದ ಮೊದಲನೇ ಆರೋಪಿ ಯುವಕ ಹಾಗೂ ದೂರುದಾರೆಯ ನಡುವಿನ ಪ್ರೇಮ ಸಂಬಂಧ ಸುಮಾರು ಒಂದೂವರೆ ವರ್ಷ ನಡೆದಿತ್ತು. ನಂತರ ಬಿರುಕು ಕಾಣಿಸಿಕೊಂಡಿದ್ದು, ದೂರುದಾರೆಯು 2025ರ ಆ.2ರಂದು ಯುವಕ, ಅವರ ಪೋಷಕರು ಮತ್ತು ಸಹೋದರಿ ಮೇಲೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ವಿವಿಧ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣ ಬೆಂಗಳೂರಿನ 29ನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ ತಮ್ಮ ವಿರುದ್ಧ ದೂರು ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಯುವಕ, ಅವರ ಪೋಷಕರ ಹಾಗೂ ಸಹೋದರಿ ಹೈಕೋರ್ಟ್ ಗೆ ಪ್ರತ್ಯೇಕ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಪೋಷಕರ ಮೇಲಿನ ಆರೋಪ

ಯುವಕನ ವಂಚನೆಯಲ್ಲಿ ಪೋಷಕರು ಹಾಗೂ ಸಹೋದರಿ ಭಾಗಿಯಾಗಿದ್ದಾರೆ. ಅವನ ಸುಳ್ಳು ಮದುವೆ ಭರವಸೆಗಳು ತಿಳಿದ ನಂತರವೂ ಪರಿಸ್ಥಿತಿ ಸರಿಪಡಿಸಲು ಏನೂ ಮಾಡಲಿಲ್ಲ. ಅವರ ಬೆಂಬಲ ಮತ್ತು ಪ್ರೋತ್ಸಾಹದಿಂದ ಯುವಕ ನನಗೆ ಶೋಷಣೆ ಮತ್ತು ನಿಂದನೆ ಮುಂದುವರಿಸಲು ಅನುವು ಮಾಡಿಕೊಟ್ಟಿದೆ. ಅವರು ಬ್ರಾಹ್ಮಣರಾಗಿರುವುದರಿಂದ ಮಗನೊಂದಿಗೆ ಸಹವಾಸ ಮಾಡುವುದನ್ನು ನಿಲ್ಲಿಸುವಂತೆ ನನಗೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋದರು ಎಂದು ಯುವಕನ ಪೋಷಕರು, ಸಹೋದರಿಯ ಮೇಲೆ ದೂರುದಾರೆ ಆರೋಪಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live; ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್‌ಗೆ ಡಿಕೆ, ಬಿಕೆ, ಸಿದ್ದು ಇಂದು ದೆಹಲಿಗೆ, ನಾಡಿದ್ದು ಹೊಸ ಸಚಿವರ ಪ್ರಮಾಣ?
ರಾಜ್ಯ ಸಂಪುಟ ವಿಸ್ತರಣೆ: ಡಿಕೆ, ಬಿಕೆ, ಸಿದ್ದು ದೆಹಲಿಗೆ ದಾಂಗುಡಿ; ಪ್ರಾತಿನಿದ್ಯ ಸಿಕ್ಕ ಜಿಲ್ಲೆ, ಸಮುದಾಯ ಔಟ್!