ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ: ಹೈಕೋರ್ಟ್ ಮಹತ್ವದ ಆದೇಶ! ಏನಿದು ಪ್ರಕರಣ?

Kannadaprabha News   | Kannada Prabha
Published : Aug 02, 2025, 10:21 AM IST
karnataka highcourt

ಸಾರಾಂಶ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ ವಿಮಾ ಪರಿಹಾರ ನಿರಾಕರಿಸಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಮದ್ಯಪಾನ ಚಾಲನೆ ಪ್ರಕರಣಗಳಲ್ಲಿ ವಿಮಾ ಕಂಪನಿಗಳ ಹೊಣೆಗಾರಿಕೆಯಿಂದ ಮುಕ್ತಿ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು (ಆ.2): ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸಮಯದಲ್ಲಾಗುವ ಅಪಘಾತ ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಗೆ (ಥರ್ಡ್‌ ಪಾರ್ಟಿ) ವಿಮಾ ಕಂಪನಿಗಳಿಂದ ಪರಿಹಾರದ ಮೊತ್ತ ಪಡೆಯುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮೋಟಾರು ವಾಹನಗಳ ಕಾಯ್ದೆ-1988ಕ್ಕೆ ತಿದ್ದುಪಡಿ ಮಾಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಒಳಗಾದ ಪ್ರಕರಣದಲ್ಲಿ ನಗರದ ಪ್ರತೀಕ್‌ ಕುಮಾರ್‌ ತ್ರಿಪಾಠಿ ಎಂಬಾತನಿಗೆ 2.59 ಲಕ್ಷ ರು. ಪರಿಹಾರ ಪಾವತಿಸಲು ಆದೇಶಿಸಿದ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಓರಿಯಂಟಲ್‌ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಎಂ.ಉಮೇಶ್‌ ಅಡಿಗ ಅವರ ಪೀಠವು ಈ ಪ್ರಕರಣದಲ್ಲಿ ಮೋಟಾರು ವಾಹನ ಚಾಲಕ ಮದ್ಯಪಾನ ಮಾಡಿದ್ದ. ಹಾಗಾಗಿ, ಪರಿಹಾರ ನೀಡಬೇಕಾದ್ದು ವಾಹನದ ಮಾಲೀಕನ ಹೊಣೆಗಾರಿಕೆಯಾಗಿದೆ. ಆದರೆ ನ್ಯಾಯಾಧಿಕರಣವು ಎದುರಿಗೆ ಬಂದ ವಾಹನದ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದಿದೆ. ಹೀಗಾಗಿ ಪ್ರತೀಕ್‌ಗೆ ಪರಿಹಾರ ನೀಡಲು ವಿಮೆ ಘೋಷಿಸಿದೆ. ಆದರೆ, ಪ್ರತೀಕ್‌ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದ ಅಂಶವನ್ನು ಪರಿಗಣಿಸದೇ ವಿಮಾ ಕಂಪನಿಗೆ ಪರಿಹಾರ ಪಾವತಿಸಬೇಕು ಎಂದು ನ್ಯಾಯಾಧೀಕರಣ ಆದೇಶಿಸಿರುವುದು ಸರಿಯಲ್ಲ. ಆ ಮೊತ್ತವನ್ನು ಕಾನೂನು ಪ್ರಕಾರ ವಾಹನದ ಮಾಲೀಕರಿಂದ ವಸೂಲು ಮಾಡಿಕೊಳ್ಳಬೇಕಿದೆ ಎಂದು ಆದೇಶಿಸಿದೆ.

ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಸಾಮಾಜಿಕ ಅಪರಾಧವಾಗಿದೆ. ಪರಿಹಾರ ಪಾವತಿಗೆ ವಿಮಾ ಕಂಪನಿಯನ್ನು ಹೊಣೆ ಮಾಡಿ ಆದೇಶ ನೀಡುವುದರಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಅಪಾಯಕಾರಿ ಪ್ರವೃತ್ತಿ ಮತ್ತು ಸಾಮಾಜಿಕ ಅಪರಾಧವನ್ನು ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಪ್ರಕರಣಗಳಲ್ಲಿ ಅಪಘಾತಗಳಾದರೆ ಪರಿಹಾರ ಪಾವತಿ ಹೊಣೆಯಿಂದ ವಿಮಾ ಕಂಪನಿಯನ್ನು ಮುಕ್ತಗೊಳಿಸಲು ಮೋಟಾರು ವಾಹನ ಕಾಯ್ದೆ-1988ಕ್ಕೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು? :

ನಗರದ ಪ್ರತೀಕ್‌ ಕುಮಾರ್‌ ತ್ರಿಪಾಠಿ 2014ರಂದು ರಾತ್ರಿ ಕೋರಮಂಗಲದಿಂದ ಧೂಪನಹಳ್ಳಿಗೆ ಹೋಗುತ್ತಿದ್ದಾಗ ದೊಮ್ಮಲೂರು ಮೇಲುಸೇತುವೆ ಬಳಿ ಎದುರಿನಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆಯಿತು. ಇದಿರಂದ ಆತ ಅಪಘಾತಕ್ಕೆ ತುತ್ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುಮಾರು 5 ಲಕ್ಷ ವೈದ್ಯಕೀಯ ವೆಚ್ಚವಾಗಿತ್ತು. ಅವರು 10 ಲಕ್ಷ ರು. ಪರಿಹಾರ ಕೋರಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರತೀಕ್‌ಗೆ 2.59 ಲಕ್ಷ ರು. ಪರಿಹಾರ ನೀಡುವಂತೆ ದ್ವಿಚಕ್ರ ವಾಹನಕ್ಕೆ ವಿಮೆ ನೀಡಿದ್ದ ವಿಮಾ ಕಂಪನಿಗೆ ನ್ಯಾಯಾಧಿಕರಣ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ವಿಮಾ ಕಂಪನಿ, ವಾಹನ ಚಾಲನೆ ಮಾಡುವಾಗ ಪ್ರತೀಕ್‌ ಮದ್ಯಪಾನ ಮಾಡಿದ್ದ. ಇದರಿಂದ ವಾಹನ ಮಾಲಿಕ ಪರಿಹಾರ ಪಾವತಿಸಬೇಕಿದೆ ಎಂದು ಆಕ್ಷೇಪಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌