* ಸರ್ಕಾರ ಪರಿಶೀಲಿಸುವ ಅಗತ್ಯವಿದೆ ಎಂದ ಹೈಕೋರ್ಟ್
* ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ
* ಸರ್ಕಾರ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು
ಬೆಂಗಳೂರು(ಮೇ.16): ಮರಣ ಪ್ರಮಾಣ ಪತ್ರ ಇಲ್ಲದೆ ಕೊರೋನಾ ಸೋಂಕಿತರ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು, ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ, ಸೋಂಕಿತರ ಶವಸಂಸ್ಕಾರಕ್ಕೆಂದೇ ಇರುವ ಶಿಷ್ಟಾಚಾರಗಳ ಪಾಲನೆಯಾಗುವುದು ಕಷ್ಟ. ಇದರಿಂದ, ಸೋಂಕು ಹರಡುವ ಸಾಧ್ಯತೆ ಇದೆ. ಜನರು ಸ್ವಂತ ಜಮೀನುಗಳಲ್ಲಿ ಶವಸಂಸ್ಕಾರ ಮಾಡುತ್ತಾ ಹೋದರೆ ಮತ್ತಷ್ಟು ಗಂಭಿರ ಸಮಸ್ಯೆಗಳು ಎದುರಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ವಾದ ಆಲಿಸಿದ ನ್ಯಾಯಪೀಠ, ಇದು ಗಂಭೀರ ವಿಚಾರವಾಗಿದೆ. ಈ ಕುರಿತು ಸರ್ಕಾರ ಪರಿಶೀಲಿಸುವ ಅಗತ್ಯವಿದೆ ಎಂದಿತು.
ಕೋವಿಡ್ ಟೆಸ್ಟ್ ವರದಿ ಒಂದೇ ದಿನದಲ್ಲಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಮರಣ ಪ್ರಮಾಣಪತ್ರವಿಲ್ಲದೆ ಶವಸಂಸ್ಕಾರ ಮಾಡುವುದರಿಂದ ಗಂಭೀರ ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ಮೃತರ ಕುಟುಂಬಗಳಿಗೆ ಯಾವುದೇ ಸೌಲಭ್ಯ ಪಡೆಯಲು ಮರಣ ಪ್ರಮಾಣಪತ್ರದ ಅವಶ್ಯಕತೆ ಇರುತ್ತದೆ. ಮೇಲಾಗಿ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ಸಾವನ್ನು ದಾಖಲಿಸಿ ಪ್ರಮಾಣಪತ್ರ ವಿತರಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಸರ್ಕಾರ ಈ ಕುರಿತು ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು ಎಂದು ತಿಳಿಸಿ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು. ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona