* ಮುಂಬೈ, ದೆಹಲಿ ಸೇರಿ ಹಲವೆಡೆ ಲಾಕ್‌ಡೌನ್ ಫಲ ನೀಡಿದೆ
* ಲಸಿಕೆಗೆ ಜನ ಮುಗಿಬಿದ್ದಿದ್ದೇ ಕೊರತೆಗೆ ಕಾರಣ
* ಸರ್ಕಾರ ಪ್ರತಿಯೊಬ್ಬರೂ ಲಸಿಕೆ ನೀಡಲಿದೆ, ತಾಳ್ಮೆ ಕಳೆದುಕೊಳ್ಳಬಾರದು
ಬೆಂಗಳೂರು(ಮೇ.16): ಮುಂಬೈ, ದೆಹಲಿ ಸೇರಿದಂತೆ ಲಾಕ್‌ಡೌನ್ ಎಲ್ಲ ಕಡೆಯೂ ಫಲ ನೀಡಿದ್ದು, ರಾಜ್ಯದಲ್ಲಿಯೂ ಸಹ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಕೊರೋನಾ ಹರಡದಿರಲು ಅವಶ್ಯಕತೆ ಇದೆ ಎನಿಸಿದರೆ ಮೇ 24 ರ ನಂತರವೂ ಲಾಕ್‌ಡೌನ್ ಮುಂದುವರಿಸುವುದು ಸೂಕ್ತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಕೊರೋನಾ ಸೋಂಕಿನ 2ನೇ ಅಲೆ ತೀವ್ರವಾದ ನಂತರ ಜನ ಲಸಿಕೆ ಪಡೆಯಲು ಮುಗಿಬಿದ್ದದ್ದೇ ಲಸಿಕೆ ವಿತರಣೆಯಲ್ಲಿ ಕೊರತೆ ಉಂಟಾಗಲು ಕಾರಣ ಎಂದು ಅವರು ಹೇಳಿದ್ದಾರೆ.
undefined
ಸಚಿವರು, ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಮುಂದಾದಾಗ ಕೇವಲ ಶೇ.40ರಷ್ಚು ಜನ ಮಾತ್ರ ಲಸಿಕೆ ಪಡೆಯಲು ಮುಂದಾದರು. ಆದರೆ, ಎರಡನೇ ಅಲೆ ತೀವ್ರವಾದಾಗ 18ರಿಂದ ಎಲ್ಲ ವಯಸ್ಸಿನವರು ಏಕಾಏಕಿ ಮುಗಿಬಿದ್ದ ಕಾರಣ ಎಲ್ಲರಿಗೂ ಲಸಿಕೆ ಹಾಕಲು ಆಗಲಿಲ್ಲ. ಸರ್ಕಾರ ಪ್ರತಿಯೊಬ್ಬರೂ ಲಸಿಕೆ ನೀಡಲಿದೆ, ತಾಳ್ಮೆ ಕಳೆದುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಕೊರೋನಾ ಆರೈಕೆ ಕೇಂದ್ರದಲ್ಲಿ ಆಮ್ಲಜನಕ ವ್ಯವಸ್ಥೆಯುಳ್ಳ 90 ಬೆಡ್ ಹಾಗೂ 100 ಕಾನ್ಸಂಟ್ರೇಟರ್ ಒಳಗೊಂಡ ಕೇಂದ್ರ ಆರಂಭಿಸುವ ಜೊತೆಗೆ 100 ಮೊಬೈಲ್ ವ್ಯಾನ್‌ಗಳ ಮೂಲಕ ಮನೆಮನೆಗೆ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದ ಸಚಿವ ಡಿ.ವಿ. ಸದಾನಂದಗೌಡ, ಕೇವಲ ಸರ್ಕಾರವನ್ನು ಅವಲಂಬಿಸದೆ ಸ್ಥಳೀಯವಾಗಿ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.
ಜಿಲ್ಲೆಗಳಲ್ಲಿ ಕೊರೋನಾ ಸೋಂಕು, ಸಾವು ತೀವ್ರ ಹೆಚ್ಚಳ..!
ಅಬಕಾರಿ ಸಚಿವ ಕೆ. ಗೋಪಾಲಯ್ಯ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಮಾಜಿ ಉಪ ಮೇಯರ್ ಎಸ್. ಹರೀಶ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಕ್ಷೇತ್ರದ ಸಚಿವರಿಂದ ಉತ್ತಮ ಕೆಲಸ
ತಮ್ಮ ಲೋಕಸಭಾ ಕ್ಷೇತ್ರವಾದ ಬೆಂಗಳೂರು ಉತ್ತರದಲ್ಲಿ ನಾಲ್ವರು ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು ಮತ್ತು ಕೆ. ಗೋಪಾಲಯ್ಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಯಶವಂತಪುರದಲ್ಲಿ ಆಯುರ್ವೇದ ಆಸ್ಪತ್ರೆಯನ್ನು ಕೊರೋನಾ ಕೇಂದ್ರವಾಗಿ ಮಾರ್ಪಡಿಸಲಾಗುವುದು ಮತ್ತು ಐಟಿಐ ಕಾಲೇಜಿನಲ್ಲಿ 100 ಹಾಸಿಗೆಗಳ ಆರೈಕೆ ಕೇಂದ್ರ ಹಾಗೂ ಎಚ್‌ಎಎಲ್‌ನಲ್ಲಿ 80 ಹಾಸಿಗೆಗಳ ಆರೈಕೆ ಕೇಂದ್ರ ಮಾಡಿದ್ದೇವೆ. ಬ್ಯಾಟರಾಯನಪುರ, ಹೆಬ್ಬಾಳ ಮತ್ತು ದಾಸರಹಳ್ಳಿ ಆಂಬ್ಯುಲೆನ್ಸ್ ಮತ್ತು ಆರೈಕೆ ಕೇಂದ್ರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona