Latest Videos

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಿಸಿದಾಕೆ ಮಹಿಳೆ ಎಂಬ ಕಾರಣಕ್ಕೆ ಜಾಮೀನು, ಜೈಲು ಮುಕ್ತಾಯ

By Kannadaprabha NewsFirst Published Jun 22, 2024, 7:34 PM IST
Highlights

ಪ್ರಿಯತಮನೊಂದಿಗೆ ಅನೈತಿಕ ಸಂಬಂಧ ಮುಂದುವರಿಕೆಗೆ ಅಡ್ಡಿಯಾಗಿದ್ದ ಕಾರಣಕ್ಕೆ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಗೆ ಜಾಮೀನು

ಬೆಂಗಳೂರು (ಜೂ.22): ಪ್ರಿಯತಮನೊಂದಿಗೆ ಅನೈತಿಕ ಸಂಬಂಧ ಮುಂದುವರಿಕೆಗೆ ಅಡ್ಡಿಯಾಗಿದ್ದ ಕಾರಣಕ್ಕೆ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯೊಬ್ಬರಿಗೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)-1973ರ ಸೆಕ್ಷನ್‌ 437(1) ಪರಿಗಣಿಸಿ ಹೈಕೋರ್ಟ್‌ ಜಾಮೀನು ನೀಡಿದೆ.

ಕೊಲೆ ಪ್ರಕರಣಕ್ಕೆ ಐಪಿಸಿ ಸೆಕ್ಷನ್‌ 302 ಅಡಿ ಗಲ್ಲು ಹಾಗೂ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಇಂತಹ ಅಪರಾಧ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಆರೋಪಿ ಮಹಿಳೆಯಾಗಿದ್ದರೆ, ಆಕೆಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಸಿಆರ್ ಪಿಸಿ ಸೆಕ್ಷನ್ 437(1)‌ ಅವಕಾಶ ನೀಡಿದೆ. ಈ ಸೆಕ್ಷನ್‌ ಪರಿಗಣಿಸಿರುವ ಹೈಕೋರ್ಟ್‌, ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿ ಕುಣಿಗಲ್‌ ನಿವಾಸಿ ಹರ್ಷಿತಾಗೆ ಜಾಮೀನು ನೀಡಿ ಆದೇಶಿಸಿದೆ.

ಹೆಸರು ತಿರುಚಿ ವೈದ್ಯಕೀಯ ವೀಸಾದಿಂದ ಭಾರತದಲ್ಲಿ ನೆಲೆಸುವ ಇರಾಕ್‌ ಪ್ರಜೆಯ ಯತ್ನಕ್ಕೆ ಕರ್ನಾಟಕ ಕೋರ್ಟ್‌ ಕೊಕ್ಕೆ!

ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಹರ್ಷಿತಾ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರೆ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌, ಅಷ್ಟೆ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂದು ನ್ಯಾಯಪೀಠ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.

Breaking: ಜುಲೈ 4ರವರೆಗೆ ನಟ ದರ್ಶನ್ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಪ್ರಕರಣದ ವಿವರ: ಅರ್ಜಿದಾರೆ ಮಂಜುನಾಥ್‌ ಎಂಬಾತನನ್ನು ಮದುವೆಯಾಗಿದ್ದರು. ಮದುವೆ ಮುನ್ನವೇ ಮತ್ತೋಬ್ಬನೊಂದಿಗೆ (ಪ್ರಕರಣದ ಮೊದಲನೆ ಆರೋಪಿ) ಸಂಬಂಧ ಹೊಂದಿದ್ದು, ಮದುವೆ ನಂತರವೂ ಮುಂದುವರೆದಿತ್ತು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಕಾರಣಕ್ಕೆ ಪತಿ ಮಂಜುನಾಥ್‌ ಕೊಲೆಗೆ ಮೊದಲನೆ ಆರೋಪಿಯೊಂದಿಗೆ ಅರ್ಜಿದಾರೆ ಪಿತೂರಿ ಹೂಡಿದ್ದರು.

ಅದರಂತೆ ಮೊದಲನೆ ಆರೋಪಿ ಮಂಜುನಾಥ್‌ ಕೊಲೆಗೆ ಇತರೆ ಐವರು ಆರೋಪಿಗೆ ಸುಪಾರಿ ನೀಡಿ, 50 ಸಾವಿರ ಪಾವತಿಸಿದ್ದರು. 2023ರ ಫೆ.3ರಂದು ಐವರು ಆರೋಪಿಗಳು ಅರ್ಜಿದಾರೆ ಮನೆಗೆ ಬಂದಾಗ ಆಕೆಯ ಬಾಗಿಲು ತೆರೆದು, ಪತಿ ಮಲಗಿರುವ ಕೋಣೆ ತೋರಿಸಿದ್ದರು. ಐವರು ಆರೋಪಿಗಳು ರಾಡ್‌ನಿಂದ ಹೊಡೆದು ಮಂಜುನಾಥ್‌ ತಲೆಗೆ ಹೊಡೆದು ಸಾಯಿಸಿ ನಂತರ ಮೃತದೇಹವನ್ನು ಸಾಗಿಸಿ ಕೆರೆಯ ಪಕ್ಕದಲ್ಲಿ ಬಿಸಾಡಿದ್ದರು ಎಂಬ ಆರೋಪವಿದೆ.

ಈ ಕುರಿತು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದ ಕುಣಿಗಲ್‌ ಠಾಣಾ ಪೊಲೀಸರು ಅರ್ಜಿದಾರೆ, ಆತನ ಪ್ರಿಯತಮ ಮತ್ತು ಇತರೆ ಐವರು ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅರ್ಜಿದಾರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರೆ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದಿಸಿ, ಅರ್ಜಿದಾರೆ ಪತಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆಕೆ ಅಮಾಯಕಳಾಗಿದ್ದಾರೆ. ಅರ್ಜಿದಾರೆಗೆ 20 ವರ್ಷವಾಗಿದ್ದು, 2023ರ ಡಿ.12ರಿಂದ ಜೈಲಿನಲ್ಲಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 438(1) ಪ್ರಕಾರ ಗಲ್ಲು ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿರುವ ಆರೋಪದಲ್ಲಿ ಜೈಲು ಸೇರಿರುವ ಮಹಿಳೆಗೆ ಜಾಮೀನು ನೀಡಲು ಅವಕಾಶವಿದೆ. ಅದರಂತೆ ಅರ್ಜಿದಾರೆರೆಗೆ ಜಾಮೀನು ನೀಡಬೇಕು ಎಂದು ಕೋರಿದರು. ಅರ್ಜಿದಾರೆ ಮೇಲಿನ ಆರೋಪಗಳ ಸ್ವರೂಪ ಮತ್ತು ಸಿಆರ್‌ಪಿಸಿ ಸೆಕ್ಷನ್‌ 437(1) ಅನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿದಾರೆಗೆ ಜಾಮೀನು ನೀಡಿದೆ.

click me!