ಕೈ ಬರಹದ ಪೊಲೀಸ್‌ ದಾಖಲೆ ಇನ್ನು ಸ್ವೀಕರಿಸಲ್ಲ: ಹೈಕೋರ್ಟ್‌

By Govindaraj SFirst Published Nov 8, 2022, 2:45 AM IST
Highlights

ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳ ಸ್ವೀಕಾರ, ನಿರ್ವಹಣೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂತೆ ಪೊಲೀಸ್‌ ತನಿಖಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಅಗತ್ಯ ವ್ಯವಸ್ಥೆ ಮಾಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು (ನ.08): ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳ ಸ್ವೀಕಾರ, ನಿರ್ವಹಣೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂತೆ ಪೊಲೀಸ್‌ ತನಿಖಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಅಗತ್ಯ ವ್ಯವಸ್ಥೆ ಮಾಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ಆರು ವರ್ಷಗಳ ಹಿಂದೆ ನಡೆದಿದ್ದ ಅಪರಾಧ ಪ್ರಕರಣವೊಂದರಲ್ಲಿ ಬಾಗಲಕೋಟೆ ಪೊಲೀಸರು ವಿದ್ಯುನ್ಮಾನ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ವಿಫಲರಾಗಿರುವುದು ಮತ್ತು ಪೊಲೀಸ್‌ ಸಿಬ್ಬಂದಿ ಅಸ್ಪಷ್ಟ ಕೈಬರಹದಲ್ಲಿ ತನಿಖಾ ವರದಿ/ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದನ್ನು ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದವ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. 

ಇಂದಿನ ಡಿಜಿಟಲ್‌ ಯುಗದಲ್ಲೂ ಪೊಲೀಸರು ಕೈಬರಹದಲ್ಲಿಯೇ ತನಿಖಾ ದಾಖಲೆ ಸಲ್ಲಿಸುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಯಾವುದೇ ಕೈಬರಹದ ದಾಖಲೆಯನ್ನು ನ್ಯಾಯಾಲಯವು ಸ್ವೀಕರಿಸಬಾರದು. ಪೊಲೀಸರು ಇನ್ನು ಮುಂದೆ ಡಿಜಿಟಲ್‌ ರೂಪದಲ್ಲಿ ಕೋರ್ಟ್‌ಗಳಿಗೆ ದಾಖಲೆಗಳನ್ನು ಸಲ್ಲಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ತನಿಖಾ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಕಾರ್ಯಪಡೆಯನ್ನು ಸ್ಥಾಪಿಸಬೇಕು. ಅದಕ್ಕಾಗಿ ಪೊಲೀಸ್‌ ಇಲಾಖೆಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಮುಖ್ಯಸ್ಥರು, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ನಿರ್ದೇಶಕರ ನಾಮನಿರ್ದೇಶಿತರನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂದು ರಾಜ್ಯ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. 

ಗೂಗಲ್‌ ರಿವ್ಯೂ ಕಾನೂನುಬದ್ಧ ಸಾಕ್ಷ್ಯ ಅಲ್ಲ: ಹೈಕೋರ್ಟ್‌

ಪೊಲೀಸ್‌ ಇಲಾಖೆ 2008ರಿಂದಲೇ ಮಾಹಿತಿ ತಂತ್ರಜ್ಞಾನ ಬಳಕೆ ಆರಂಭಿಸಿದೆ. ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ಅಪರಾಧ ದಾಖಲೆಗಳ ಬ್ಯೂರೋ, ಅಪರಾಧ ಮತ್ತು ಅಪರಾಧಿಗಳ ನಿಗಾ ವ್ಯವಸ್ಥೆಯ (ಸಿಸಿಟಿಎನ್‌ಎಸ್‌) ನಿರ್ದೇಶಕರು ತನಿಖಾ ಸಾಮಗ್ರಿಗಳ ಡಿಜಿಟಲೀಕರಣದ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ತನಿಖೆಗಳಲ್ಲಿ ವಿವಿಧ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ನಮೂದುಗಳನ್ನು ಡಿಜಿಟಲ್‌ ರೂಪದಲ್ಲಿ ಮಾಡಬೇಕು, ತನಿಖಾಧಿಕಾರಿಗಳು ಮತ್ತು ಇತರ ವ್ಯಕ್ತಿಗಳು ಡಿಜಿಟಲ್‌ ಸಹಿ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪಾಲಿಕೆ ಚುನಾವಣೆ ಅರ್ಜಿ: ಡಿಸೆಂಬರ್‌ಗೆ ವಿಚಾರಣೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಕುರಿತಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ಗೆ ಮುಂದೂಡಿದೆ. ನ್ಯಾ.ಅಬ್ದುಲ್‌ ನಜೀರ್‌ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಶುಕ್ರವಾರ ವಿಚಾರಣೆ ನಡೆಯಿತು. ನವೆಂಬರ್‌ ಅಂತ್ಯದೊಳಗೆ ವಾರ್ಡ್‌ ಮೀಸಲಾತಿ ಅಂತಿಮಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಡಿಸೆಂಬರ್‌ಗೆ ವಿಚಾರಣೆ ಮುಂದೂಡಿದೆ.

Mandya: ಹೈಕೋರ್ಟ್‌ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ

ವಾರ್ಡ್‌ ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ವಿಳಂಬವಾಗುತ್ತಿದೆ ಅಂತ ಮಾಜಿ ಕಾರ್ಪೋರೇಟರ್‌ ಎಂ.ಶಿವರಾಜು ಸಲ್ಲಿಸಿರುವ ಅರ್ಜಿ ಮೇಲೆ ವಿಚಾರಣೆ ನಡೆಯಿತು. ಜುಲೈ ತಿಂಗಳಲ್ಲಿ ಒಂದು ವಾರ ಕಾಲಾವಕಾಶದಲ್ಲಿ ವಾರ್ಡ್‌ ಮೀಸಲಾತಿ ಪಟ್ಟಿಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಅದರಂತೆ ವಾರ್ಡ್‌ ಮೀಸಲಾತಿ ಆದೇಶ ಹೊರಬಿದ್ದ ಬಳಿಕ ಸರ್ಕಾರದ ಮೀಸಲಾತಿ ಕ್ರಮವನ್ನು ಪ್ರಶ್ನಿಸಿ 7 ಅರ್ಜಿಗಳು ಕರ್ನಾಟಕ ಹೈಕೋರ್ಟಿಗೆ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳನ್ನು ವಿಚಾರಣೆ ನಡೆಸಿ, ನವೆಂಬರ್‌ ಅಂತ್ಯದೊಳಗೆ ಮೀಸಲಾತಿ ಅಂತಿಮಗೊಳಿಸುವಂತೆ ಹೈಕೋರ್ಟ್‌ ಸೂಚಿಸಿತ್ತು.

click me!