ಸಿನಿಮಾ ಟಿಕೆಟ್‌ಗೆ ₹200 ಮಿತಿ ಇಲ್ಲ, ಆದರೆ.. ಹೈಕೋರ್ಟ್‌ ಷರತ್ತೇನು?

Published : Oct 01, 2025, 10:40 AM IST
Karnataka High Court

ಸಾರಾಂಶ

ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ 200 ರು. ಗರಿಷ್ಠ ದರ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಏಕಸದಸ್ಯ ಪೀಠ ನೀಡಿರುವ ತಡೆಯನ್ನು ತೆರವುಗೊಳಿಸಲು ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಬೆಂಗಳೂರು (ಅ.01): ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ 200 ರು. ಗರಿಷ್ಠ ದರ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಏಕಸದಸ್ಯ ಪೀಠ ನೀಡಿರುವ ತಡೆಯನ್ನು ತೆರವುಗೊಳಿಸಲು ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ. ಆದರೆ ಎಲ್ಲ ಭಾಷೆಯ ಚಲನಚಿತ್ರಗಳ ಪ್ರೇಕ್ಷಕರಿಂದ ಡಿಜಿಟಲ್‌ ಮತ್ತು ನಗದಿನ ರೂಪದಲ್ಲಿ ಸಂಗ್ರಹಿಸುವ ಹಣದ ಲೆಕ್ಕವನ್ನು ಪ್ರತಿ ತಿಂಗಳ 15ರಂದು ಮಲ್ಟಿಪ್ಲೆಕ್ಸ್‌ಗಳಿಗೆ ಪರವಾನಗಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾಗೆ ನಿರ್ದೇಶಿಸಿದೆ.

ಜೊತೆಗೆ ಪ್ರತಿವಾದಿಗಳು ಪ್ರಕರಣದಲ್ಲಿ ಯಶಸ್ವಿಯಾದರೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಟಿಕೆಟ್‌ ಮೇಲೆ ಸಂಗ್ರಹಿಸಿದ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಒಂದೊಮ್ಮೆ ಸರ್ಕಾರದ ನಿಯಮವನ್ನು ಹೈಕೋರ್ಟ್‌ ಎತ್ತಿ ಹಿಡಿದರೆ, ಆ ಹಣವನ್ನು ಸರ್ಕಾರ ಸಾರ್ವಜನಿಕ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಆದೇಶಿಸಿದೆ. ಚಿತ್ರಮಂದಿರಗಳಲ್ಲಿ 200 ರು. ಟಿಕೆಟ್‌ ದರ ನಿಗದಿಪಡಿಸಲು ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮಗಳು 2025 ಅಡಿ ನಿಯಮ 55(6)ಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಸೆ.23ರಂದು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಇನ್ನಿತರ ಸಂಸ್ಥೆಗಳು ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಮಂಗಳವಾರ ನಡೆಯಿತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು ಕ್ರೆಡಿಟ್‌, ಡೆಬಿಟ್‌ ಕಾರ್ಡ್‌, ಯುಪಿಐ ಹಾಗೂ ಬ್ಯಾಂಕ್‌ ಖಾತೆ ಮೂಲಕ ಟಿಕೆಟ್‌ ಬುಕ್‌ ಮಾಡಿದವರ ಪಟ್ಟಿಯನ್ನು ಎಲ್ಲ ಮಲ್ಟಿಪ್ಲೆಕ್ಸ್‌ಗಳೂ ನಿರ್ವಹಿಸಬೇಕು. ಆ ಕುರಿತ ಲೆಕ್ಕವನ್ನು ಎಲ್ಲ ಮಲ್ಟಿಪ್ಲೆಕ್ಸ್‌ಗಳಿಂದ ಪಡೆದು ಮಲ್ಟಿಪ್ಲೆಕ್ಸ್‌ಗಳಿಗೆ ಹಾಗೂ ತನಗೆ ಪರವಾನಗಿ ನೀಡಿರುವ ಪ್ರಾಧಿಕಾರಕ್ಕೆ ನಿಯಮಿತವಾಗಿ ಪ್ರತಿ ತಿಂಗಳ 15ರಂದು ಸಲ್ಲಿಸಬೇಕು ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿದೆ.

ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾಗೆ ಯಾವುದಾದರೂ ಮಲ್ಟಿಪ್ಲೆಕ್ಸ್‌ ಲೆಕ್ಕದ ಮಾಹಿತಿ ಒದಗಿಸದಿದ್ದರೆ, ಈ ಮಧ್ಯಂತರ ಆದೇಶವು ಅವರಿಗೆ ಅನ್ವಯಿಸುವುದಿಲ್ಲ. ನಗದಿನ ಮೂಲಕ ಟಿಕೆಟ್‌ ಖರೀದಿಸಿರುವವರ ವಿಚಾರವನ್ನು ಈ ನ್ಯಾಯಾಲಯವು ಮೇಲ್ಮನವಿಯನ್ನು ಮೆರಿಟ್‌ ಮೇಲೆ ಪರಿಗಣಿಸಿದಾಗ ನಿರ್ಧರಿಸಲಾಗುವುದು ಎಂದು ಆದೇಶಿಸಿದೆ. ಸರ್ಕಾರ ಈ ಆದೇಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್ಸ್‌ ಆಫ್‌ ಇಂಡಿಯಾವು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಮತ್ತು ಸಿನಿಮಾ ಆರಂಭಕ್ಕೂ ಮುನ್ನ ನ್ಯಾಯಾಲಯದ ಈ ಆದೇಶವನ್ನು ಪ್ರದರ್ಶಿಸಬೇಕು ಎಂದು ಸೂಚಿಸಿರುವ ಪೀಠ, ಮೇಲ್ಮನವಿಯ ವಿಚಾರಣೆಯನ್ನು ನ.25ಕ್ಕೆ ಮುಂದೂಡಿದೆ.

ಮೇಲ್ಮನವಿಯ ವಿಚಾರಣೆ ವೇಳೆ ವಾಣಿಜ್ಯ ಮಂಡಳಿ ಪರ ವಕೀಲರು, ಸಿನಿಮಾ ಟಿಕೆಟ್‌ ದರ ಕಡಿಮೆ ಇದ್ದರೆ ಹೆಚ್ಚು ಜನರು ಸಿನಿಮಾಗೆ ಬರುತ್ತಾರೆ. ಆಗ ಸಿನಿಮಾ ಯಶಸ್ಸು ಕಾಣುತ್ತದೆ ಎಂಬುದು ವಾಣಿಜ್ಯ ಮಂಡಳಿಯ ಅನುಭವವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜನರ ಕಲ್ಯಾಣಕ್ಕಾಗಿ ಸಿನಿಮಾ ಟಿಕೆಟ್‌ ದರಕ್ಕೆ ಮಿತಿ ವಿಧಿಸಲು ಸರ್ಕಾರ ಮುಂದಾಗಿದೆ. ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವವರೆಗೆ ಸರ್ಕಾರದ ತಿದ್ದುಪಡಿ ನಿಯಮಗಳಿಗೆ ನ್ಯಾಯಾಲಯ ತಡೆ ನೀಡಲಾಗದು ಎಂದು ವಿವರಿಸಿದರು. ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ ಪರ ವಕೀಲರು, ಈ ಹಿಂದೆ ರಾಜ್ಯ ಸರ್ಕಾರವು ಇಂತಹದ್ದೇ ಆದೇಶ ಮಾಡಿ, ಆನಂತರ ಅದನ್ನು ಹಿಂಪಡೆದಿತ್ತು. ಸದ್ಯ ನ್ಯಾಯಾಲಯದ ಆಶಯದಂತೆ ಲೆಕ್ಕ ಪತ್ರ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಪ್ರಕರಣದ ಹಿನ್ನೆಲೆ

ಸರ್ಕಾರದ ನಿಯಮಗಳನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ ಹಾಗೂ ಮತ್ತಿತರರ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು. ಸೆ.23ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠವು ಸರ್ಕಾರದ ತಿದ್ದುಪಡಿ ನಿಯಮಗಳಿಗೆ ಮುಂದಿನ ಆದೇಶದವರೆಗೆ ತಡೆ ನೀಡಿತ್ತು. ಹಾಗೆಯೇ, ಅರ್ಜಿದಾರರು ಈ ಅರ್ಜಿಯ ಕಾನೂನು ಹೋರಾಟದಲ್ಲಿ ಯಶಸ್ಸು ಕಂಡರೆ, ಪ್ರತಿ ಟಿಕೆಟ್‌ ಮೇಲೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಸಂಗ್ರಹಿಸಿದ ಹಣವು ಶಾಶ್ವತವಾಗಿ ತಮ್ಮ ಬಳಿಯೇ ಉಳಿಸಿಕೊಳ್ಳಲಿವೆ. ರಾಜ್ಯ ಸರ್ಕಾರ ಯಶ ಕಂಡರೆ, ಹೆಚ್ಚುವರಿ ಸಂಗ್ರಹಿಸಿರುವ ಹಣ ಸರ್ಕಾರಕ್ಕೆ ಬೊಕ್ಕಸಕ್ಕೆ ಹೊಗಲಿದೆ ಎಂದು ತಿಳಿಸಿ ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶನ್ನು ಮಾರ್ಪಡಿಸಿ ಲೆಕ್ಕ ಪತ್ರಗಳನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾಗೆ ನಿರ್ದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!