
ಬೆಂಗಳೂರು (ಅ.01): ಹಿರಿಯ ರಂಗ ನಿರ್ದೇಶಕ, ಕಲಾವಿದ ಯಶವಂತ ಸರದೇಶಪಾಂಡೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ನಡೆಯಿತು. ಪತ್ನಿ ಮಾಲತಿ ಸರದೇಶಪಾಂಡೆ, ಪುತ್ರಿ ಕಲ್ಪಶ್ರೀ, ಯಶವಂತ ಸರದೇಶಪಾಂಡೆ ಅವರ ಸಹೋದರರು, ಹಲವು ಮಂದಿ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರು ಕಣ್ಣೀರ ವಿದಾಯ ಹೇಳಿದರು.
ಪುತ್ರಿ ಕಲ್ಪಶ್ರೀ ಮತ್ತು ಯಶವಂತ ಸರದೇಶಪಾಂಡೆ ಅವರ ತಮ್ಮಂದಿರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಸರದೇಶಪಾಂಡೆ ಅವರ ಕೊನೆಯ ಸೋದರ ಗೋಪಾಲ್ ಅವರು ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸರದೇಶಪಾಂಡೆ ಅವರು ಪಂಚಭೂತಗಳಲ್ಲಿ ಲೀನವಾದರು. ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಯಶವಂತ ಸರದೇಶಪಾಂಡೆ ನಿಧನರಾಗಿದ್ದರು. ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12.45ರವರೆಗೆ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗಮಂದಿರದ ಬಳಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಈ ವೇಳೆ ಚಲನಚಿತ್ರ ನಟರು, ರಂಗಭೂಮಿ ಕಲಾವಿದರೂ ಆದ ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಂ, ಶ್ರೀನಿವಾಸ ಜಿ. ಕಪ್ಪಣ್ಣ, ಮಂಡ್ಯ ರಮೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ದನಂಜಯ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಸೇರಿದಂತೆ ವಿವಿಧ ರಂಗಗಳ ಗಣ್ಯರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಸುಮಾರು 2.15ರ ಹೊತ್ತಿಗೆ ಟಿ.ಆರ್. ಮಿಲ್‌ನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಯಶವಂತ ಸರದೇಶಪಾಂಡೆ ಅವರು ‘ರಾಶಿಚಕ್ರ’, ‘ಆಲ್ ದಿ ಬೆಸ್ಟ್’ನಂತಹ ನಾಟಕಗಳಲ್ಲಿನ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಪತ್ನಿ ಮಾಲತಿ ಸರದೇಶಪಾಂಡೆ ಕೂಡ ರಂಗಕಲಾವಿದೆಯಾಗಿದ್ದಾರೆ.
ಯಶವಂತ ಸರದೇಶಪಾಂಡೆ ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಶ್ರೀಧರ್ ಮತ್ತು ಕಲ್ಪನಾ ದಂಪತಿ ಪುತ್ರನಾಗಿ 1965ರ ಜೂನ್ 13ರಂದು ಜನಿಸಿದ ಅವರು, ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಮತ್ತು ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಓದಿದವರು. ಕಿರ್ಲೋಸ್ಕರ್‌ನಲ್ಲಿ ಶಿಷ್ಯವೃತ್ತಿ ಮತ್ತು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಡೀಸೆಲ್ ಮೆಕ್ಯಾನಿಕ್ ಕೋರ್ಸ್ ಪೂರ್ಣಗೊಳಿಸಿದ ನಂತರ, ರಂಗಭೂಮಿಯತ್ತ ಆಸಕ್ತರಾದರು. 1985-86 ರಲ್ಲಿ ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಪಡೆದರು. ಬಳಿಕ ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನಕ್ಕಾಗಿ ನಾಟಕಗಳು ಮತ್ತು ಟೆಲಿ ನಾಟಕಗಳನ್ನು ನಿರ್ದೇಶಿಸಿದರು.
ರಂಗಭೂಮಿ ತಂತ್ರಗಳನ್ನು ಕಲಿಯಲು ಭಾರತದಾದ್ಯಂತ ಪ್ರವಾಸ ಮಾಡಿದರು. ನಂತರ ಸರದೇಶಪಾಂಡೆ ಅವರು ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರಿದರು. ಅಲ್ಲಿ ರಂಗಭೂಮಿ ಕಲಾವಿದೆ ಮಾಲತಿ ಅವರ ಪರಿಚಯವಾಗಿ, 1991ರಲ್ಲಿ ವಿವಾಹವಾದರು. 1996ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದರು. ಅತಿಥಿ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ ಸೇರಿ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಅವರು, ಕಮಲ್ ಹಾಸನ್ ಅವರಿಂದ ಉತ್ತರ ಕರ್ನಾಟಕದ ಆಡುಭಾಷೆ ಆಡಿಸಿದ್ದರು.
ಚಿತ್ರದ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದರು. ಮಕ್ಕಳ ಚಲನಚಿತ್ರ ನಿರ್ಮಿಸಿ, ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಗಳಿಸಿದ್ದರು. 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸನ್‌ಫೀಸ್ಟ್-ಉದಯ ಪ್ರಶಸ್ತಿ 2006, 2003ರಲ್ಲಿ ಆರ್ಯಭಟ ಪ್ರಶಸ್ತಿ, 2005ರಲ್ಲಿ ಮಯೂರ್ ಪ್ರಶಸ್ತಿ, 2008ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008ರಲ್ಲಿ ರಂಗಧ್ರುವ ಪ್ರಶಸ್ತಿ , 2008ರಲ್ಲಿ ಗ್ಲೋಬಲ್‌ಮ್ಯಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕನ್ನಡ, ಹಿಂದಿ, ಮರಾಠಿಯ ಕೆಲ ಚಿತ್ರಗಳಲ್ಲೂ ಯಶವಂತ ಸರದೇಶಪಾಂಡೆ ಕೆಲಸ ಮಾಡಿದ್ದರು. ಅವರ ಬಹುತೇಕ ನಾಟಕಗಳು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ