ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಲಲಿತ ಪ್ರಬಂಧ ಪ್ರಶಸ್ತಿಗೆ ಹುಬ್ಬಳ್ಳಿಯ ಎಂ.ಡಿ. ಗೋಗೇರಿ ಬರೆದ ‘ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕವನ್ನು ಆಯ್ಕೆ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರು (ಜೂ.21): ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಲಲಿತ ಪ್ರಬಂಧ ಪ್ರಶಸ್ತಿಗೆ ಹುಬ್ಬಳ್ಳಿಯ ಎಂ.ಡಿ. ಗೋಗೇರಿ ಬರೆದ ‘ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕವನ್ನು ಆಯ್ಕೆ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿದೆ. ಕೊಡಗಿನ ಸಾಹಿತಿ ಭಾರದ್ವಾಜ ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಕನ್ನಡ ಸಾಹಿತ್ಯ ಅಕಾಡೆಮಿ 2013ನೇ ಸಾಲಿನ ಲಲಿತ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಹೊಸದಾಗಿ ಪುಸಕ್ತ ಆಯ್ಕೆ ಮಾಡಬೇಕು. ಅದಕ್ಕಾಗಿ ಅಕಾಡೆಮಿಯ ಬೈಲಾ 9 3 (ಉ) 12ನೇ ಷರತ್ತು ಅನ್ವಯ ಉಪ ಸಮಿತಿಯನ್ನು ಪುನರ್ ರಚಿಸಬೇಕು. ಆ ಉಪ ಸಮಿತಿಯು ಭಾರದ್ವಾಜ ಮತ್ತು ಗೋಗೇರಿ ಅವರ ಪುಸ್ತಕಗಳನ್ನು ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಈ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಅಕ್ರಮ ಲೌಡ್‌ಸ್ಪೀಕರ್ ವಿರುದ್ಧ ಅಭಿಯಾನ ನಡೆಸಿ: ಹೈಕೋರ್ಟ್
ಪ್ರಕರಣದ ವಿವರ: ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನಲ್ಲಿ ಲಲಿತಾ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿತ್ತು. ಕೊಡಗಿನ ಸಾಹಿತಿ ಭಾರದ್ವಾಜ ಅವರ ‘ಕೌತುಕವಲ್ಲದ ಕ್ಷಣಗಳು’ ಮತ್ತು ಗೋಗೇರಿ ಅವರ ‘ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕಗಳು ಪ್ರಶಸ್ತಿಗೆ ಸ್ಪರ್ಧಿಸಿದ್ದವು. ಈ ಎರಡೂ ಪುಸ್ತಕಗಳಿಗೆ ತಲಾ 56 ಅಂಕಗಳು ಬಂದಿದ್ದವು. ಅದರಂತೆ ಪುಸ್ತಕಗಳನ್ನು ಅಕಾಡೆಮಿ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಉಪ ಸಮಿತಿಗೆ ಪುಸ್ತಕ ಕಳುಹಿಸಿಕೊಡಲಾಗಿತ್ತು.
ಉಪ ಸಮಿತಿಯು ಮೌಲ್ಯಮಾಪನ ಮಾಡಿ ಶಿಫಾರಸು ಮಾಡುವ ಪುಸ್ತಕಕ್ಕೆ ಪ್ರಶಸ್ತಿಗೆ ನೀಡಲಾಗುತ್ತದೆ. ಅದರಂತೆ ಉಪ ಸಮಿತಿಯು ಗೋಗೇರಿ ಅವರ ‘ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅದನ್ನು ಭಾರದ್ವಾಜ ಹೈಕೋರ್ಚ್‌ನಲ್ಲಿ ಪ್ರಶ್ನಿಸಿ, ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಮಿತಿ ನಿಯಮ ಪಾಲಿಸಿಲ್ಲ ಎಂದು ಆಕ್ಷೇಪಿಸಿದ್ದರು.
ಬಿಷಪ್ ವಿರುದ್ಧ ಪೋಕ್ಸೋ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ!
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಿಯಮ ಪ್ರಕಾರ ಉಪ ಸಮಿತಿಯು ಸಭೆ ಸೇರಿ ಚರ್ಚಿಸಿ ಪುಸ್ತಕವನ್ನು ಪ್ರಶಸ್ತಿಗೆ ಶಿಫಾರಸು ಮಾಡಬೇಕು. ಅದಕ್ಕೆ ಸಭೆಯ ನಡಾವಳಿ ಮತ್ತು ಆಯ್ಕೆಗೆ ಸಕಾರಣ ನಮೂದಿಸಬೇಕು. ಈ ಪ್ರಕರಣದಲ್ಲಿ ಉಪ ಸಮಿತಿಯು ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಸಭೆ ನಡೆಸಿ ಅದರ ನಡಾವಳಿ ನಮೂದಿಸಿರುವ ಬಗ್ಗೆ ಯಾವೊಂದು ದಾಖಲೆಯಿಂದ ಸ್ಪಷ್ಟವಾಗುತ್ತಿಲ್ಲ. ಉಪ ಸಮಿತಿ ತನ್ನ ಅಭಿಪ್ರಾಯವನ್ನು ದಾಖಲಿಸದಿದ್ದರೂ ಸಭೆಯ ನಡಾವಳಿಯನ್ನಾದರೂ ನಮೂದಿಸಬೇಕು. ನಡಾವಳಿ ದಾಖಲಿಸದ್ದರಿಂದ ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಉಪ ಸಮಿತಿ ಸಭೆ ನಡೆಸಿಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.