ಅಕ್ರಮ ಲೌಡ್‌ಸ್ಪೀಕರ್‌ ವಿರುದ್ಧ ಅಭಿಯಾನ ನಡೆಸಿ: ಹೈಕೋರ್ಟ್‌

*    ಸರ್ಕಾರಕ್ಕೆ ಹೈಕೋರ್ಟ್‌ ಆದೇಶ
*   ನಿಯಮ ಮೀರಿ ಧ್ವನಿವರ್ಧಕ ಬಳಸುವಂತಿಲ್ಲ
*   ಮಸೀದಿ, ದೇಗುಲ, ಪಬ್‌ಗಳ ಪತ್ತೆಗೆ ಸರ್ವೇ ಕಾರ್ಯ
 

Campaign against illegal loudspeaker Says Karnataka High Court grg

ಬೆಂಗಳೂರು(ಜೂ.18):  ದೇವಸ್ಥಾನ ಹಾಗೂ ಮಸೀದಿ ಸೇರಿದಂತೆ ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳ ಮತ್ತು ಪಬ್‌-ರೆಸ್ಟೋರೆಂಟ್‌ಗಳಲ್ಲಿ ನಿಯಮ ಮೀರಿ ಧ್ವನಿವರ್ಧಕ ಬಳಕೆ ತಡೆಗೆ ವಿಶೇಷ ಅಭಿಯಾನ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿನ ದೇವಸ್ಥಾನ, ಮಸೀದಿ, ಗುರುದ್ವಾರ, ಚಚ್‌ರ್‍ ಹಾಗೂ ಪಬ್‌-ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಹಾಗೂ ಶಬ್ದ ಹೊರಸೂಸುವ ಇತರೆ ಉಪಕರಣಗಳ ದುರ್ಬಳಕೆ ತಡೆಯಲು ಅಭಿಯಾನ ಕೈಗೊಳ್ಳಬೇಕು. ಪರವಾನಗಿಯಿಲ್ಲದೆ ಉಪಯೋಗಿಸುತ್ತಿರುವ ಅಥವಾ ನಿಗದಿತ ಡೆಸಿಬಲ್‌ನಲ್ಲಿ ಹೆಚ್ಚಿನ ಶಬ್ದ ಹೊರಸೂಸುತ್ತಿರುವ ಧ್ವನಿವರ್ಧಕಗಳನ್ನು ಪತ್ತೆ ಹಚ್ಚಬೇಕು. ಅದಕ್ಕಾಗಿ ಧಾರ್ಮಿಕ ಸ್ಥಳಗಳ ಸರ್ವೇ ನಡೆಸಬೇಕು ಎಂದು ನ್ಯಾಯಪೀಠ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಸೂಚಿಸಿದೆ.

ವಿಚ್ಛೇದನ ಬಳಿಕ ‘ಸ್ತ್ರೀಧನ’ ಪತಿಗೆ ಸೇರಿದ್ದಲ್ಲ: ಹೈಕೋರ್ಟ್‌!

ರಾಜ್ಯದಲ್ಲಿ ಶಬ್ದಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಬೆಂಗಳೂರು ನಗರದಲ್ಲಿ ಮಸೀದಿಗಳು ಅನಧಿಕೃತವಾಗಿ ಧ್ವನಿವರ್ಧಕ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡುತ್ತಿರುವುದನ್ನು ಆಕ್ಷೇಪಿಸಿ ಹೈಕೋರ್ಚ್‌ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿವೆ. ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

ಆದೇಶದಲ್ಲಿ ಧ್ವನಿವರ್ಧಕಗಳನ್ನು ಅನಧಿಕೃತವಾಗಿ ಉಪಯೋಗಿಸುತ್ತಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿಗೊಳಿಸಿ ಕೂಡಲೇ ತೆರವು ಮಾಡಬೇಕು. ನಿಗದಿತ ಡೆಸಿಬಲ್‌ನಲ್ಲಿಯೇ ಧ್ವನಿವರ್ಧಕಗಳು ಶಬ್ದ ಹೊರಸೂಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ. ಅಲ್ಲದೆ, ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿ ಮೂರು ವಾರದಲ್ಲಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ವಿಚಾರಣೆ ಮುಂದೂಡಿತು.
ಶಾಶ್ವತ ಪರವಾನಗಿ ನೀಡಲ್ಲ:

ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ರಾಜ್ಯದಲ್ಲಿ ಯಾವ ಕಾನೂನಿನಡಿ ಧ್ವನಿವರ್ಧಕ ಬಳಕೆಗೆ ಪರವಾನಗಿ ನೀಡಲಾಗುತ್ತಿದೆ. ಪರವಾನಗಿ ನೀಡುವ ಪ್ರಾಧಿಕಾರ ಯಾವುದು. ಎಷ್ಟುದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ. ಶಾಶ್ವತವಾಗಿ ಧ್ವನಿವರ್ಧಕ ಬಳಸಲು ಅನುಮತಿ ನೀಡಬಹುದೇ? ಎಂದು ಪ್ರಶ್ನಿಸಿತ್ತು.

ಇದಕ್ಕೆ ಸರ್ಕಾರಿ ವಕೀಲರು, ಧ್ವನಿವರ್ಧಕ ಬಳಕೆಗೆ ಶಾಶ್ವತ ಪರವಾನಗಿ ನೀಡುವುದಿಲ್ಲ. ಎರಡು ವರ್ಷದವರೆಗೆ ಪರವಾನಗಿ ನೀಡಿ, ನವೀಕರಿಸಲು ಅವಕಾಶ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಈ ಪರವಾನಗಿ ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ತಿಳಿಸಿದರು.

ಬಿಷಪ್‌ ವಿರುದ್ಧ ಪೋಕ್ಸೋ ಪ್ರಕರಣ ರದ್ದುಪಡಿಸಿ ಹೈಕೋರ್ಟ್‌ ಆದೇಶ!

ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಕೆಗೆ ಸಂಪೂರ್ಣ ನಿಷೇಧವಿದೆ. ಆದರೆ, ವಿಶೇಷ ಸಂದರ್ಭದಲ್ಲಿ ಅಂದರೆ ಸಾಂಸ್ಕೃತಿ, ಧಾರ್ಮಿಕ ಉತ್ಸವ, ಸಭೆ-ಸಮಾರಂಭ ಮತ್ತು ಹಬ್ಬ-ಹರಿದಿನಗಳಲ್ಲಿ ವರ್ಷದಲ್ಲಿ 15 ದಿನಗಳ ಮಟ್ಟಿಗೆ ಮಾತ್ರ ರಾತ್ರಿ 10ರಿಂದ ಮಧ್ಯರಾತ್ರಿ 12ರವರೆಗೆ ಧ್ವನಿವಧಕ ಬಳಕೆಗೆ ವಿಶೇಷ ಅನುಮತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಾಲಯ, ಸರ್ಕಾರ ಹೇಳಿರುವ ಸಮಯ ಹೊರತುಪಡಿಸಿ ಉಳಿದ ಅವಧಿಯಲ್ಲಿ ಧ್ವನಿವರ್ಧಕ ಬಳಿಸುವುದು ಅಕ್ರಮವಾಗುತ್ತದೆಯೇ? ಹಾಗಾದರೆ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಲ್ಲಿಸಲು ಕೈಗೊಂಡ ಕ್ರಮವೇನು? ಎಷ್ಟು ಧಾರ್ಮಿಕ ಕೇಂದ್ರಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಪ್ರಶ್ನಿಸಿತು.

ಸರ್ಕಾರಿ ವಕೀಲರು ಉತ್ತರಿಸಿ, ಅನಧಿಕೃತವಾಗಿ ಮತ್ತು ನಿಯಮಗಳನ್ನು ಪಾಲಿಸದೆ ಬಳಸುತ್ತಿರುವ ಧ್ವನಿವರ್ಧಕಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಕಾಲಕಾಲಕ್ಕೆ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ ಎಂದು ವಿವರಣೆ ನೀಡಿದರು.
 

Latest Videos
Follow Us:
Download App:
  • android
  • ios