
ಬೆಂಗಳೂರು (ಜೂ.12): ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನು ಪದೇ ಪದೇ ಪಾಟೀ ಸವಾಲಿಗೆ ಒಳಪಡಿಸಬಾರದು ಎಂಬ ನಿಯಮವಿದೆಯಾದರೂ, ಸಂತ್ರಸ್ತೆಗೆ 18 ವರ್ಷ ತುಂಬಿದ್ದಲ್ಲಿ ಪಾಟೀ ಸವಾಲಿಗೆ ಒಳಪಡಿಸಲು ಅಡ್ಡಿಯಿರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪೋಕ್ಸೋ ಪ್ರಕರಣವೊಂದರ ಸಂತ್ರಸ್ತೆಯನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 311ರ ಪ್ರಕಾರ ಮರು ವಿಚಾರಣೆಗೆ ಕರೆಸಿಕೊಳ್ಳಬೇಕೆಂದು ಕೋರಿ ಆರೋಪಿ ಮಹಮ್ಮದ್ ಅಲಿ ಅಕ್ಬರ್ (23) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಪೋಕ್ಸೋ ಪ್ರಕರಣಗಳ ಸಂತ್ರಸ್ತರನ್ನು ಮತ್ತೆ ಮತ್ತೆ ನ್ಯಾಯಾಲಯಗಳಿಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಬಾರದು ಎಂದು ಕಾಯ್ದೆಯ ಸೆಕ್ಷನ್ 33(5) ಹೇಳುತ್ತದೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸು 18 ವರ್ಷ ದಾಟಿರುವ ಕಾರಣ ಸೆಕ್ಷನ್ 33 (5)ರ ಕಾಠಿಣ್ಯತೆ ದುರ್ಬಲಗೊಳ್ಳುತ್ತದೆ. ಆದ್ದರಿಂದ, ಆರೋಪಿಯ ಮನವಿಯಂತೆ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಯಾವ ಕಾನೂನಿನ ಅಡಿ ಲೈಸನ್ಸ್: ಸರ್ಕಾರದ ಬಳಿ ಮಾಹಿತಿ ಕೇಳಿದ ಕೋರ್ಟ್
ಆರೋಪಿಯ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ನಿರಾಕರಿಸಿ 2022ರ ಏ.7ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಜತೆಗೆ, ಸೆಷನ್ಸ್ ಕೋರ್ಚ್ ನಿಗದಿಪಡಿಸುವ ದಿನಾಂಕದಂದು ಆರೋಪಿಯು ಸಂತ್ರಸ್ತೆಯನ್ನು ಹೆಚ್ಚುವರಿ ಪಾಟೀ ಸವಾಲಿಗೆ ಒಳಪಡಿಸಬಹುದಾಗಿದೆ. ಇದೇ ಅಂತಿಮ ಅವಕಾಶವಾಗಿದ್ದು, ಸೆಷನ್ ನ್ಯಾಯಾಲಯ ನಿಗದಿಪಡಿಸುವ ದಿನವೇ ಪಾಟೀ ಸವಾಲು ಪೂರ್ಣಗೊಳಿಸಬೇಕು. ಆರೋಪಿಯು ಸಿಆರ್‌ಪಿಸಿ ಸೆಕ್ಷನ್ 311ರ ಅಡಿಯಲ್ಲಿ ಮತ್ತೆ ಮತ್ತೆ ಅವಕಾಶ ಕೋರಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?
ಪ್ರಕರಣದ ಹಿನ್ನೆಲೆ: 2018ರ ಏಪ್ರಿಲ್ ತಿಂಗಳಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಪ್ರಾಪ್ತ ಮಗಳ ಮೇಲೆ ಮಹಮ್ಮದ್ ಅಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರುದಾರ ಮಹಿಳೆ ಆರೋಪಿಯ ಸೋದರತ್ತೆಯೇ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದು, ಸದ್ಯ ಪ್ರಕರಣ ಸೆಷನ್ಸ್ ಕೋರ್ಚ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ, ಸಂತ್ರಸ್ತೆಯನ್ನು ಹೆಚ್ಚಿನ ಪಾಟೀ ಸವಾಲಿಗೆ ಒಳಪಡಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ಆರೋಪಿ ಹೈಕೋರ್ಚ್ ಮೆಟ್ಟಿಲೇರಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ