ಬೆಂಗಳೂರು ಸೇರಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೋಮವಾರ ಕೆಲಕಾಲ ಉತ್ತಮ ಮಳೆಯಾಗಿದ್ದು, ಸಿಡಿಲಿಗೆ ಮಹಿಳೆ ಸೇರಿ ಮೂವರು ಬಲಿಯಾಗಿದ್ದಾರೆ.
ಬೆಂಗಳೂರು (ಮೇ.30) : ಬೆಂಗಳೂರು ಸೇರಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೋಮವಾರ ಕೆಲಕಾಲ ಉತ್ತಮ ಮಳೆಯಾಗಿದ್ದು, ಸಿಡಿಲಿಗೆ ಮಹಿಳೆ ಸೇರಿ ಮೂವರು ಬಲಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಶ್ಯಾಳ ಗ್ರಾಮದ ದ್ಯಾಮಣ್ಣ ಸೆರೆಕಾರ್(20), ಬಳ್ಳಾರಿ ತಾಲೂಕಿನ ಕುಂಟನಹಾಳು ಗ್ರಾಮದ ಹೊರ ವಲಯದಲ್ಲಿ ರೈತ ಪಂಪಣ್ಣ (43), ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ‘ಬಿ’ ಬಡಾವಣೆಯ ಲಕ್ಷ್ಮಿಬಾಯಿ ಸಿಡಿಲಿಗೆ ಬಲಿಯಾದವರು.
ಜನಜೀವನ ಅಸ್ತವ್ಯಸ್ತ: ಬಳ್ಳಾರಿ, ವಿಜಯಪುರ, ಬೆಂಗಳೂರಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾದರೆ, ದಾವಣಗೆರೆ, ಮಂಡ್ಯ, ಶಿವಮೊಗ್ಗ, ರಾಮನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೆಲಕಾಲ ಭಾರೀ ಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ದಾವಣಗೆರೆಯ ಮಾಯಕೊಂಡ, ಕೊಡಗನೂರು ಮತ್ತಿತರ ಕಡೆ ಭಾರೀ ಗಾಳಿ-ಮಳೆಗೆ ಅಡಕೆ ಸೇರಿ ವಿವಿಧ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದು ಭಾರೀ ಹಾನಿಯಾಗಿದೆ.
ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ
ಇನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಕೆಆರ್‌ಎಸ್ ಬೃಂದಾವನದಲ್ಲಿ 10ಕ್ಕೂ ಹೆಚ್ಚು ಮರಗಳು ಬುಡ ಸಮೇತ ಧರೆಗುರುಳಿವೆ. ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಚೆಟ್ಟಳ್ಳಿ ವ್ಯಾಪ್ತಿಯಲ್ಲೂ ಗಾಳಿಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ರಾಮನಗರದಲ್ಲಿ ಸುಮಾರು ಎರಡು ಗಂಟೆ ಕಾಲ ಸುರಿದ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸಿಡಿಲು ಬಡಿದು 30 ಕುರಿಗಳು ಸಾವು
ದೇವರಹಿಪ್ಪರಗಿ: ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು 30 ಕುರಿಗಳು ಸಾವನ್ನಪ್ಪಿವೆ. ಕುರಿಗಳು ಗ್ರಾಮದ ಮಹಾಂತಪ್ಪ ಚೌಡಕಿ ಹಾಗೂ ಶಂಕ್ರಪ್ಪ ವಾಲಿಕಾರ ಅವರಿಗೆ ಸೇರಿದ್ದಾಗಿವೆ. ಕುರಿ ಮೇಯಿಸಲು ತೆರಳಿದ್ದಾಗ ಭಾರಿ ಮಳೆ ಸುರಿದ ಪರಿಣಾಮ ಎಲ್ಲಾ ಕುರಿಗಳನ್ನು ಮರದ ಕೆಳಗೆ ನಿಲ್ಲಿಸಿದ್ದರು. ಸಂಜೆ 5 ಗಂಟೆಗೆ ಸಿಡಿಲು ಬಡಿದು 30 ಕುರಿ ಸಾವನ್ನಪ್ಪಿವೆ. ಕುರಿ ಹಿಂದೆ ಇದ್ದ ಅವರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಈ ಕುರಿತು ಕಲಕೇರಿ ಪೊಲೀಸ… ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ರೈತ ಸಾವು
ನಿಡಗುಂದಿ: ಸಿಡಿಲು ಬಡಿದು ರೈತನೊಬ್ಬ ಸಾವಿಗೀಡಾಗಿ, ಮತ್ತಿಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಶ್ಯಾಳ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಕಿರಶ್ಯಾಳ ಗ್ರಾಮದ ದ್ಯಾಮಣ್ಣ ಸೆರೆಕಾರ್ (20) ಸಿಡಿಲಿಗೆ ಬಲಿಯಾದ ಯುವ ರೈತ.
ರೈತನ ಕೈ ಹಿಡಿಯುತ್ತಾ ರೋಹಿಣಿ ಮಳೆ?: ಭೂಮಿ ಹದಗೊಳಿಸಿ ಸಜ್ಜುಗೊಳಿಸಿದ ಅನ್ನದಾತ
ಸೋಮವಾರ ಸಂಜೆ ಮಳೆ ಬರುತ್ತಿದ್ದಂತೆ ಜಮೀನಿÜನಲ್ಲಿ ಒಣಹಾಕಿದ್ದ ಈರುಳ್ಳಿಗೆ ಪ್ಲಾಸ್ಟಿಕ್ ಹೊದಿಸಲು ಹೋದಾಗ ರೈತ ದ್ಯಾಮಣ್ಣನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾನೆ. ಇದೇ ವೇಳೆ ದ್ಯಾಮಣ್ಣನ ಜೊತೆಗಿದ್ದ ರೈತರಾದ ಬಸಪ್ಪ ಹಾಗೂ ಹೊನ್ನಪ್ಪ ಸಿಡಿಲಿನ ಝಳಕ್ಕೆ ಪ್ರಜ್ಞಾಹೀನರಾಗಿ ನೆಲಕ್ಕೆ ಬಿದ್ದಿದ್ದರು. ತಕ್ಷಣ ಅವರಿಬ್ಬರÜನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ಪಿಎಸ್‌ಐ ಎಸ್.ಎಚ್.ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.