ಕಾವೇರಿ ನೀರು ಹಂಚಿಕೆ ಸಂಕಷ್ಟದ ನಡುವೆ ವರುಣನ ಕೃಪೆ, ಕಬಿನಿ, ಹಾರಂಗಿ ಭರ್ತಿ, ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

Kannadaprabha News   | Kannada Prabha
Published : Aug 02, 2026, 05:55 AM IST
Karnataka heavy rain kabini harangi dam full water level in state reservoirs today

ಸಾರಾಂಶ

ಕೇರಳದ ವಯನಾಡು ಮತ್ತು ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾದ ಪರಿಣಾಮ, ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಇದರಿಂದಾಗಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ನ್ಯಾಯಾಲಯದ ಛೀಮಾರಿ ಮತ್ತು ರೈತರ ಆಕ್ರೋಶದಿಂದ ಕರ್ನಾಟಕ ಸರ್ಕಾರ ಸದ್ಯಕ್ಕೆ ಪಾರಾಗಿದೆ.

ಎಚ್‌.ಡಿ.ಕೋಟೆ/ ಮಡಿಕೇರಿ (ಆ.2): ಬರಗಾಲದ ನಡುವೆಯೂ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನದಿ ನಿರ್ವಹಣಾ ಮಂಡಳಿ ಆದೇಶದಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರಕ್ಕೆ ಕಡೆಯ ಘಳಿಗೆಯಲ್ಲಿ ವರುಣನ ಕೃಪೆಯಾಗಿದೆ. ಕೇರಳದ ವಯನಾಡು ಮತ್ತು ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯ ಪರಿಣಾಮ ಕಬಿನಿ ಮತ್ತು ಹಾರಂಗಿ ಆಣೆಕಟ್ಟುಗಳು ತುಂಬಿದ್ದು, ತಮಿಳುನಾಡಿಗೆ ಸೂಚಿಸಿದ್ದಕ್ಕಿಂತಲೂ ಹೆಚ್ಚಿನ ನೀರು ಹರಿವು ಆರಂಭವಾಗಿದೆ. 

ಹೀಗಾಗಿ ನೀರು ಬಿಟ್ಟರೆ ಕರ್ನಾಟಕದ ರೈತರ ಆಕ್ರೋಶ, ಬಿಡದೇ ಇದ್ದರೆ ನ್ಯಾಯಾಲಯದ ಛೀಮಾರಿಗೆ ಗುರಿಯಾಗಬೇಕಿದ್ದ ಸಂಕಷ್ಟದಿಂದ ಸದ್ಯಕ್ಕೆ ಕರ್ನಾಟಕ ಸರ್ಕಾರ ಪಾರಾಗಿದೆ. ಮತ್ತೊಂದೆಡೆ ಅಧಿಕಾರಕ್ಕೆ ಏರಿದ ಬಳಿಕ ಮೊದಲ ಬಾರಿಗೆ ಕಾವೇರಿ ಬಿಕ್ಕಟ್ಟು ಎದುರಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡಾ ಸದ್ಯಕ್ಕೆ ಜಲಗಂಡಾಂತರಿಂದ ಪಾರಾಗಿದ್ದಾರೆ.

ಕಬಿನಿ ಜಲಾಶಯ ಭರ್ತಿ:

ಕೇರಳದ ವಯನಾಡು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಇರುವ ಕಬಿನಿ ಜಲಾಶಯವು ಭರ್ತಿ ಆಗುವ ಹಂತ ತಲುಪಿದೆ. ಸದ್ಯ ಜಲಾಶಯಕ್ಕೆ 16000 ಕ್ಯುಸೆಕ್‌ ಒಳಹರಿವು ಇದ್ದು, 10000 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 2284 ಅಡಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2,281 ಅಡಿ ನೀರು ಸಂಗ್ರಹವಾಗಿದ್ದು ಯಾವುದೇ ಹೊತ್ತಿನಲ್ಲಿ ತುಂಬಲಿದೆ. ಈ ನೀರು ನೇರವಾಗಿ ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡು ಸೇರಲಿದೆ.

ಅಂದರೆ ತಮಿಳುನಾಡಿಗೆ ಬಿಡಬೇಕಿದ್ದ 3500 ಕ್ಯುಸೆಕ್ ಬದಲಾಗಿ ಹೆಚ್ಚುವರಿ ನೀರು ತಮಿಳುನಾಡನ್ನು ಸೇರಲಿದೆ. ಅಷ್ಟರ ಮಟ್ಟಿಗೆ ಕರ್ನಾಟಕ ಸರ್ಕಾರ ಬಿಕಟ್ಟಿನಿಂದ ಪಾರಾಗಿದೆ.

ಹಾರಂಗಿ ಜಲಾಶಯವೂ ಭರ್ತಿ:

ಈ ನಡುವೆ ಕೊಡಗು ಜಿಲ್ಲೆಯಾದ್ಯಂತ ಶನಿವಾರವೂ ಭಾರಿ ಮಳೆ ಆಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

2,859 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಶನಿವಾರ ನೀರಿನ ಮಟ್ಟ 2857.83 ಅಡಿಗಳಷ್ಟಿತ್ತು. ಸದ್ಯ ಜಲಾಶಯಕ್ಕೆ ಒಳಹರಿವು 9896 ಕ್ಯುಸೆಕ್ ಇದ್ದು, 20000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಕೆಆರ್‌ಎಸ್‌ಗೆ ಒಳಹರಿವು ಏರಿಕೆ:

ಹಾರಂಗಿಯಿಂದ ಹೆಚ್ಚುವರಿ ನೀರು ಹೊರಬಿಡುತ್ತಿರುವ ಕಾರಣ, ಕೃಷ್ಣರಾಜಸಾಗರ ಜಲಾಶಯಕ್ಕೆ ಶನಿವಾರ ರಾತ್ರಿ 8 ಗಂಟೆ ವೇಳೆಗೆ 20,438 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಶುಕ್ರವಾರ 93.55 ಅಡಿ ಇದ್ದ ಜಲಾಶಯದಲ್ಲಿ ನೀರಿನ ಮಟ್ಟ ಶನಿವಾರ 95.57 ಅಡಿಗೆ ಏರಿದೆ. ಇನ್ನು ಜಲಾಶಯದಿಂದ 1768 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 19.535 ಟಿಎಂಸಿ ನೀರು ಸಂಗ್ರಹವಾಗಿದೆ.

ಚಿಕ್ಕಮಗಳೂರು ವ್ಯಾಪ್ತಿಯಲ್ಲೂ ಉತ್ತಮ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ 11685 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯ ಶೇ.70ರಷ್ಟು ಮಾತ್ರ ಭರ್ತಿ ಆಗಿರುವ ಕಾರಣ 500 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ. 

ಜಲಾಶಯಗಳ ಇಂದಿನ ನೀರಿನ ಮಟ್ಟ (1-8-2026)

ಕಬಿನಿ 88% 2284 2280.08

ಹೇಮಾವತಿ 70% 2922 2909.06

ತುಂಗಭದ್ರಾ 37% 1633 1610.56

ಸೂಪಾ(ಮೀ.) 39% 564 537.90

ಕೆಆರ್‌ಎಸ್ 38% 124.80 94.40

ಘಟಪ್ರಭಾ 69% 2175 2153.65

ಲಿಂಗನಮಕ್ಕಿ 34% 1819.12 1777.95

ಭದ್ರಾ 56% 2158 2129.25

ಹಾರಂಗಿ 95% 2859 2857.83

ಆಲಮಟ್ಟಿ(ಮೀ.) 92% 519.60 518.97

ನಾರಾಯಣಪುರ(ಮೀ.) 89% 492.25 491.39

ಮಲಪ್ರಭಾ 42% 2079.50 2059.10

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಪ್ರಕೃತಿ ಯಾರ ಸ್ವತ್ತೂ ಅಲ್ಲ..' ನೀರು ಬಿಡೋಲ್ಲ ಅಂತಾ ನದಿಗೆ ಇಳೀಬೇಡಿ ಕೊಚ್ಚಿ ಹೋಗ್ತೀರ: ಹೋರಾಟಗಾರರಿಗೆ ಸಿಎಂ ಎಚ್ಚರಿಕೆ
ರಾಜ್ಯದಲ್ಲಿ ಹೆಚ್‌ಐವಿ ನಿಯಂತ್ರಣದಲ್ಲಿದೆ, ಕಾಲೇಜು ವಿದ್ಯಾರ್ಥಿಗಳ ಸೋಂಕಿನ ಸುದ್ದಿ ಸುಳ್ಳು: ಸಚಿವ ಯು.ಟಿ. ಖಾದರ್