
ಮೈಸೂರು (ಆ.2): ಕಬಿನಿ ಜಲಾಶಯ(Kabini Dam) ತುಂಬುತ್ತಿದೆ. ಹೆಚ್ಚಿನ ಪ್ರಮಾಣದ ನೀರು ಹೊರಗೆ ಬಿಡಲೇಬೇಕು. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಹೋರಾಟಗಾರರು ಜಲಾಶಯದ ಬಳಿ ಹೋಗಬೇಡಿ. ನೀರು ಬಿಡುವುದಿಲ್ಲ ಅಂತಾ ನದಿಗೆ ಇಳಿಯಬೇಡಿ. ಆ ರೀತಿ ಇಳಿದರೆ ಕೊಚ್ಚಿಕೊಂಡು ಹೋಗುತ್ತೀರ. ಜೀವ ಅಮೂಲ್ಯವಾದದ್ದು. ಯಾರು ಈ ರೀತಿಯ ಸಾಹಸಕ್ಕೆ ಕೈ ಹಾಕಬೇಡಿ. ನೀರು ಬಿಡಬಾರದು ಎಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಕಬಿನಿ ಜಲಾಶಯದ ನೀರಿನ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಪ್ರತಿ ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ. ಪ್ರಕೃತಿ ಯಾರ ಸ್ವತ್ತೂ ಅಲ್ಲ. ಪ್ರಕೃತಿಯ ಅಣತಿಯಂತೆ ನಾವು ಬದುಕುತ್ತಿದ್ದೇವೆ. ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು. ನೀರಿನ ರಭಸಕ್ಕೆ ನೀವು ಕೊಚ್ಚಿ ಹೋಗಬಹುದು. ಯಾರೂ ನೀರಿಗೆ ಅಡ್ಡ ಮಲಗಲು ಹೋಗಬೇಡಿ ಎಂದು ಕೋರಿದರು.
ನಮ್ಮ ಸ್ನೇಹಿತರು ತಮಿಳುನಾಡಿಗೆ ನೀರು ಹರಿಸಬಾರದು ಎಂದು ಹೋರಾಟ, ಬಂದ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ಹೋರಾಟಕ್ಕೆ ಹಿನ್ನೆಲೆ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹೋರಾಟಕ್ಕೂ ಗೌರವವಿದೆ. ಆದರೆ ಈಗ ಪ್ರತಿಭಟನೆ ಬೇಡ. ಕಾನೂನು ಚೌಕಟ್ಟಿಗೆ ಏನೂ ತೊಂದರೆ ಆಗಬಾರದು, ಜನಜೀವನಕ್ಕೆ ತೊಂದರೆಯಾಗಬಾರದು. ಈ ರಾಜ್ಯದಲ್ಲಿ ಎಲ್ಲಾ ಜನರು ಬದುಕುತ್ತಿದ್ದಾರೆ. ಎಲ್ಲರನ್ನೂ ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ. ತಮಿಳುನಾಡು ಸೇರಿದಂತೆ ನಾವೆಲ್ಲರೂ ಒಂದೇ ದೇಶದ ಪ್ರಜೆಗಳು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ