
ಆನಂದ್ ಎಂ. ಸೌದಿ
ಯಾದಗಿರಿ: ‘ಯಾದಗಿರಿ ಜಿಲ್ಲೆಯಲ್ಲಿ 16,116 ಗರ್ಭಗಳೇ ನಾಪತ್ತೆ’ ಶೀರ್ಷಿಕೆಯಡಿ ಜು.13ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ವರದಿಯನ್ನು ಪರಿಶೀಲಿಸಿ, ತಕ್ಷಣವೇ ಅಗತ್ಯ ಕ್ರಮ ಕೈಗೊಂಡು, ಅತೀ ಜರೂರಾಗಿ ತಮ್ಮ ಕಚೇರಿಗೆ ಅನುಪಾಲನಾ ವರದಿ ಸಲ್ಲಿವಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಕಚೇರಿಯಿಂದ ಜಿಲ್ಲಾಧಿಕಾರಿಗೆ ಬಂದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಇಲಾಖೆ, ಖುದ್ದು ಸಿಎಂ ಅವರಿಗೇ ಸುಳ್ಳು ಮಾಹಿತಿ ರವಾನಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ। ಕೆ.ವೈಷ್ಣವಿ ಅವರಿಂದ ಈ ಕುರಿತ ಪತ್ರಕ್ಕೆ ಸ್ಪಷ್ಟನೆ ನೀಡುವ ಭರದಲ್ಲಿ, ರಾಜ್ಯಮಟ್ಟದ ಸಮಿತಿಯ ಮಹತ್ವದ ವರದಿಯನ್ನೇ ಪರಿಗಣಿಸದೆ, ಅಂಕಿ-ಅಂಶಗಳು ಹೊಂದಾಣಿಕೆಯಾಗುವಂತೆ ಲೆಕ್ಕ ತೋರಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೂ ಬಾರದಂತೆ, ‘ವರದಿ ಸತ್ಯಕ್ಕೆ ದೂರ’ ಎಂದು ಸಿಎಂ ಕಚೇರಿಗೆ ಮಾಹಿತಿ ಸಲ್ಲಿಸಿಸಲಾಗಿದೆ. ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾಗುವ ಪ್ರಯತ್ನ ನಡೆಸಿದಂತಿದೆ ಎಂಬ ದೂರು ಕೇಳಿ ಬಂದಿದೆ.
ಈ ಗರ್ಭ ನಾಪತ್ತೆ ಪ್ರಕರಣಗಳಿಗೆ ‘10-12 ವಾರದೊಳಗಿನ ಪ್ರಕರಣಗಳು’ ಹಾಗೂ ‘ಶೇ.50ರಷ್ಟು ಮನೆಯಲ್ಲಿಯೇ ಗರ್ಭಪಾತ ಮಾಡಿಸಿಕೊಂಡಿದ್ದಾರೆ’ ಎಂಬ ಲೆಕ್ಕ ತೋರಿಸಲಾಗಿದೆ. ಪ್ರಕರಣಗಳನ್ನು ತಾಲೂಕಾವಾರು ಹಂಚಿಕೆ ಮಾಡಿ, ‘ವೈದ್ಯರಿಗೆ ಒತ್ತಡ ಹೇರಲಾಗುತ್ತಿದೆ. ಮನೆಯಲ್ಲಾದ ಗರ್ಭಪಾತಗಳನ್ನು ಕುಟುಂಬಸ್ಥರು ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ’ ಎಂದು ಷರಾ ಬರೆಯಲಾಗಿದೆ. 10-12 ವಾರದ ಒಳಗಿನ ಪ್ರಕರಣಗಳಿಗೆ ವೈದ್ಯಕೀಯ ಗರ್ಭಪಾತಕ್ಕೆ ಬೇಕಿರುವ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಇದಕ್ಕೆಂದು ತಯಾರಿಸಲಾಗಿರುವ ಪಟ್ಟಿಯಲ್ಲಿ, ಹೆಸರಿಲ್ಲದವರ ಮಹಿಳೆಯರ ಹೆಸರುಗಳನ್ನೂ ಸೇರಿಸಲಾಗುತ್ತಿದೆ...’ ಎಂದು ‘ಕನ್ನಡಪ್ರಭ’ಕ್ಕೆ ಹೆಸರು ಹೇಳಲು ಇಚ್ಚಿಸದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕಾಗಿ ಗ್ರಾಮೀಣ ಭಾಗದ ವೈದ್ಯರು ಸೇರಿದಂತೆ ಅನೇಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
‘ಯಾದಗಿರಿ ಜಿಲ್ಲೆಯಲ್ಲಿ 16,116 ಗರ್ಭಗಳೇ ನಾಪತ್ತೆ’ ಶೀರ್ಷಿಕೆಯಡಿ ಜು.13ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಹಾಗೂ ಮಾರ್ಚ್, ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ಸರಣಿ ವರದಿಗಳನ್ನು ಉಲ್ಲೇಖಿಸಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರರ್ಜಿ ದಾಖಲಿಸಿಕೊಂಡಿದೆ. ಈ ಬಗ್ಗೆ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಇದೇ ಸೆ.16ರ ಒಳಗೆ ಸಲ್ಲಿಸುವಂತೆ ಯಾದಗಿರಿ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಸೆ.17ರಂದು ಆಯೋಗದ ಪೂರ್ಣಪೀಠದೆದುರು ವರದಿ ಮಂಡಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಐದೇ ವರ್ಷದಲ್ಲಿ ಯಾದಗಿರಿಯ 16116 ಗರ್ಭಗಳೇ ನಾಪತ್ತೆ! - ಗರ್ಭ ಧರಿಸಿದ್ದವರಿಗೆ ಹೆರಿಗೆಯಾಯಿತೆ? ಗರ್ಭಪಾತವಾಯಿತೆ? ಲೆಕ್ಕವೇ ಇಲ್ಲ
ಯಾದಗಿರಿ ಜಿಲ್ಲೆಯಲ್ಲಿ ಗರ್ಭಗಳ ನಾಪತ್ತೆ ಕುರಿತು ಜಿಲ್ಲೆಯ ಆರೋಗ್ಯ ಇಲಾಖೆ ವಾಸ್ತವಾಂಶ ವರದಿ ನೀಡುತ್ತಿಲ್ಲ ಎಂಬ ಆರೋಪವಿತ್ತು. ಹಾಗಾಗಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಹರ್ಷ ಗುಪ್ತ ಅವರ ಸೂಚನೆಯ ಮೇರೆಗೆ ರಚಿತಗೊಂಡ ರಾಜ್ಯಮಟ್ಟದ ಸಮಿತಿಯು, ಏ.6ರಿಂದ ಏ.20ರವರೆಗೆ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಜೂ.5ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ 74 ಪುಟಗಳ ವರದಿ ಸಲ್ಲಿಸಿತ್ತು. ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ 16,116 ಗರ್ಭಗಳ ನಾಪತ್ತೆ ಕುರಿತ ಆಘಾತ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಯಾದಗಿರಿ: ದಿನಕ್ಕೆ 3 ಬಾಟಲ್ ಸ್ಟಿಂಗ್ ಜ್ಯೂಸ್ ಕುಡೀತಿದ್ದವ ಕಿಡ್ನಿ ಫೇಲಾಗಿ ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ