Bengaluru Stampede Case: ಸಂಭ್ರಮಾಚರಣೆಗೆ KSCA, RCB ಯಿಂದ ಒತ್ತಾಯ, ಸ್ವಯಂಪ್ರೇರಿತ ದೂರು ದಾಖಲು!

Kannadaprabha News   | Kannada Prabha
Published : Jun 06, 2025, 06:41 AM ISTUpdated : Jun 06, 2025, 10:06 AM IST
Bengaluru stampede case

ಸಾರಾಂಶ

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಈವೆಂಟ್ ಮ್ಯಾನೇಜ್‌ಮೆಂಟ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಜೂ.6): ಕಾಲ್ತುಳಿತ ದುರಂತ ಘಟನೆ ಸಂಬಂಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಈವೆಂಟ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಕಬ್ಬನ್‌ ಪಾರ್ಕ್‌ ಠಾಣೆ ಇನ್ಸ್‌ಪೆಕ್ಟರ್‌ ಎ.ಕೆ.ಗಿರೀಶ್‌ ನೀಡಿದ ದೂರಿನಲ್ಲಿ ಆರ್‌ಸಿಬಿ ಗೆದ್ದರೆ ಇಡೀ ರಾತ್ರಿ ಅಭಿಮಾನಿಗಳು ವಿಜಯೋತ್ಸವ ಆಚರಿಸಲಿದ್ದಾರೆ.

ಹೀಗಾಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಬೇಕು. ಸಂಜೆ ವಿಜಯೋತ್ಸವ ಆಯೋಜನೆ ಮಾಡಿದರೆ, ಲಕ್ಷಾಂತರ ಅಭಿಮಾನಿಗಳು ಸೇರುವ ಸಾಧ್ಯತೆಯಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುತ್ತದೆ. ಹೀಗಾಗಿ ಸೂಕ್ತ ಬಂದೋಬಸ್ತ್‌ ಕಲ್ಪಿಸಲು ಕಾಲಾವಕಾಶಬೇಕು ಎಂದು ಮನವರಿಕೆ ಮಾಡಿ, ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೂ ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಜೂ.4ರ ಸಂಜೆ ಕಾರ್ಯಕ್ರಮ ಮಾಡಲೇಬೇಕು ಎಂದು ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯೋತ್ಸವದ ಬಗ್ಗೆ ಬೆಳಗ್ಗೆಯೇ ಫ್ರಾಂಚೈಸಿ ಟ್ವಿಟ್‌:

ಜೂ.4ರ ಬೆಳಗ್ಗೆಯಿಂದಲೇ ಆರ್‌ಸಿಬಿ ಫ್ರಾಂಚೈಸಿಯವರು ಯಾವುದೇ ಅನುಮತಿ ಪಡೆಯದೆ ಅಧಿಕೃತ ಟ್ವಿಟರ್‌ ಖಾತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಗರದಲ್ಲಿ ಆರ್‌ಸಿಬಿ ವಿಜಯೋತ್ಸವ ಹಾಗೂ ವಿಕ್ಟರಿ ಪರೇಡ್‌ ನಡೆಸುವ ಬಗ್ಗೆ ಏಕಪಕ್ಷೀಯವಾಗಿ ಟ್ವಿಟ್‌ ಮಾಡಿ ಮಾಹಿತಿ ನೀಡಿದ್ದರು. ಸಾರ್ವಜನಿಕರು ಹಾಗೂ ಅಭಿಮಾನಿಗಳು ಭಾಗವಹಿಸುವಂತೆ ಆಹ್ವಾನಿಸಿದ್ದರು. ಈ ಮಾಹಿತಿ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಹೀಗಾಗಿ ವಿಜಯೋತ್ಸವದಲ್ಲಿ ಲಕ್ಷಾಂತರ ಮಂದಿ ಸೇರುವ ಸಾಧ್ಯತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಬಂದೋಬಸ್ತ್‌ ಮಾಡಿಕೊಳ್ಳುವ ಬಗ್ಗೆ ಮನವಿ ಮಾಡಿದ್ದೆ.

ಮೇಲಾಧಿಕಾರಿಗಳ ಅನುಮತಿ ಪಡೆದು ಬಂದೋಬಸ್ತ್‌:

ಅದರಂತೆ ಜೂ.4ರಂದು ಬೆಳಗ್ಗೆ 9 ಗಂಟೆಗೆ ಮೇಲಾಧಿಕಾರಿಗಳು ಸೂಕ್ತ ಬಂದೋಬಸ್ತ್‌ ವ್ಯವಸ್ಥೆಯ ಯೋಜನೆ ತಯಾರಿಸಿ ನಗರ ಪೊಲೀಸ್‌ ಆಯುಕ್ತರಿಗೆ ಕಳುಹಿಸಿ ಅನುಮತಿ ಪಡೆದುಕೊಂಡಿದ್ದರು. ಬಳಿಕ ನಗರದ ಎಲ್ಲಾ ವಿಭಾಗಗಳ ಪೊಲೀಸ್‌ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರೆಸಿಕೊಂಡು ತುರ್ತಾಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ನಡುವೆ ರಾಜ್ಯ ಸರ್ಕಾರದಿಂದ ಆರ್‌ಸಿಬಿ ತಂಡದ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ಏರ್ಪಡಿಸಿದ್ದು, ಇದಕ್ಕೂ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಬಳಿಕ ನಗರ ಪೊಲೀಸ್‌ ಆಯುಕ್ತರು ಹಿರಿಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿ ಬಂದೋಬಸ್ತ್ ಯೋಜನೆ ಬಗ್ಗೆ ಚರ್ಚಿಸಿ, ಪ್ರತ್ಯೇಕವಾಗಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದರು. ನಂತರ ನಗರದ ಬೇರೆ ವಿಭಾಗಗಳು, ಪೊಲೀಸ್ ಟ್ರೈನಿಂಗ್‌ ಸೆಂಟರ್‌, ಕೆಎಸ್‌ಆರ್‌ಪಿ ತುಕಡಿ ಸೇರಿ ವಿವಿಧೆಡೆಯಿಂದ ಹೆಚ್ಚಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರೆಸಿ ಬಂದೋಬಸ್ತ್‌ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು.

ಅಧಿಕಾರಿ-ಸಿಬ್ಬಂದಿಗೆ ಸೂಚನೆ:

ಪ್ರತ್ಯೇಕವಾಗಿ ಸಂಚಾರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರ ನಿರ್ವಹಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಲಾಗಿತ್ತು. ಬಳಿಕ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರು ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ನಲ್ಲಿ ಹಾಗೂ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರು ಕಮಾಂಡ್‌ ಸೆಂಟರ್‌ನಲ್ಲಿ ಕುಳಿತು ಕ್ಷಣ ಕ್ಷಣದ ಚಲನವಲನ ಮತ್ತು ಆಗುಹೋಗುಗಳ ಬಗ್ಗೆ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದರು.

ವಿಧಾನಸೌಧ ಕಾರ್ಯಕ್ರಮ ಸುಲಲಿತ:

ಆರ್‌ಸಿಬಿ ತಂಡದ ಆಟಗಾರರು ಹಾಗೂ ಸಿಬ್ಬಂದಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ತಾಜ್‌ವೆಸ್ಟೆಂಡ್‌ ಹೋಟೆಲ್‌ ವರೆಗೆ ಎಸ್ಕಾರ್ಟ್‌ ನೀಡಿ ಭದ್ರತೆಯಲ್ಲಿ ಕರೆತರಲಾಗಿತ್ತು. ಬಳಿಕ ಸಂಜೆ 4 ಗಂಟೆಗೆ ಆಟಗಾರರನ್ನು ವಿಧಾನಸೌಧಕ್ಕೆ ಕರೆತಂದು ಸರ್ಕಾರದ ಸನ್ಮಾನ ಕಾರ್ಯಕ್ರಮ ಲಕ್ಷಾಂತರ ಮಂದಿಯ ನಡುವೆ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗಿತ್ತು. ಸಂಜೆ 6.30ಕ್ಕೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಿಮ ವಿಜಯೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹೀಗಾಗಿ ಸ್ಟೇಡಿಯಂ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಇದಕ್ಕೆ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸ್ಟೇಡಿಯಂನಲ್ಲಿ ಸುಮಾರು 30-35 ಸಾವಿರ ಆಸನ ವ್ಯವಸ್ಥೆ ಮಾತ್ರ ಇದ್ದು, ಅಭಿಮಾನಿಗಳಿಗೆ ಯಾವ ರೀತಿ ಪ್ರವೇಶ ನೀಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುವಲ್ಲಿ ಆರ್‌ಸಿಬಿ ಫ್ರಾಂಚೈಸಿ, ಡಿಎನ್‌ಎ ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ಹಾಗೂ ಕೆಎಸ್‌ಸಿಎ ವಿಫಲವಾಯಿತು.

ಗೇಟ್‌ನಿಂದ ಒಳಗೆ ಬಿಡುವಾಗ ಕಾಲ್ತುಳಿತ:

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದ ಸ್ಥಳಗಳಲ್ಲಿ ಗೇಟ್‌ಗಳನ್ನು ತೆರೆದು ಒಳಗೆ ಬಿಡಲಾಯಿತು. ಹೀಗೆ ಅಭಿಮಾನಿಗಳು ಸ್ಟೇಡಿಯಂ ಪ್ರವೇಶಿಸುವಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತವಾಯಿತು. ಈ ವೇಳೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಖಾಸಗಿ ಭದ್ರತಾ ಸಿಬ್ಬಂದಿ, ಹರಸಾಹಸ ಮಾಡಿ ಅಭಿಮಾನಿಗಳನ್ನು ನಿಯಂತ್ರಿಸಲಾಯಿತು. ಕಾಲ್ತುಳಿತಕ್ಕೆ ಸಿಲುಕಿದವರನ್ನು ಹೊರಗೆ ತಂದು ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಈ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟರು. ಹಲವರು ಗಾಯಗೊಂಡರು. ಪರಿಸ್ಥಿತಿ ನಿರ್ವಹಿಸುವಾಗ ಹಲವು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗೊಂಡರು. ಬಳಿಕ ಸಂಜೆ 5.45ಕ್ಕೆ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳಲಾಯಿತು.

ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ಕಾರಣ:

ಅನುಮತಿ ಇಲ್ಲದೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪೊಲೀಸರಿಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ, ಉಚಿತ ಪಾಸ್‌ ನೀಡುವುದಾಗಿ ಹೇಳಿ ಲಕ್ಷಾಂತರ ಅಭಿಮಾನಿಗಳು ಸೇರುವಂತೆ ಮಾಡಿ ಗೊಂದಲ ಸೃಷ್ಟಿಸಿ, ಕಾಲ್ತುಳಿತದಲ್ಲಿ 11 ಮಂದಿ ಮೃತರಾಗಲು ಕೆಎಸ್‌ಸಿಎ ಆಡಳಿತ ಮಂಡಳಿ, ಆರ್‌ಸಿಬಿ ಫ್ರಾಂಚೈಸಿ ಹಾಗು ಡಿಎನ್‌ಎ ಈವೆಂಟ್ ಮ್ಯಾನೇಜ್ಮೆಂಟ್‌ ಕಂಪನಿಯೇ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌