Bidadi Farmers: ಟೌನ್‌ಶಿಪ್ ಸರ್ವೆಗೆ ತೆರಳಿದ್ದ ಅಧಿಕಾರಿಗಳಿಗೆ ಬಿಡದಿ ರೈತರ ಪೊರಕೆ ಏಟು ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು

Kannadaprabha News   | Kannada Prabha
Published : Aug 25, 2026, 09:47 AM IST
Karnataka HC stays investigation against Bidadi farmers who protested with brooms opposing survey

ಸಾರಾಂಶ

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆರು ರೈತರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಆ.25): ಬಿಡದಿ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯ ಸಮೀಕ್ಷೆಗೆ ತೆರಳಿದ್ದ ಜಂಟಿ ಮಾಪನ ಸಮಿತಿ (JMC) ಅಧಿಕಾರಿಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದ ಆರೋಪ ಸಂಬಂಧ ಆರು ಮಂದಿ ರೈತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಮಂಡಲಹಳ್ಳಿ ಗ್ರಾಮದ ಎಚ್.ಆರ್. ನಾಗರಾಜು, ಕೋಡಿಹಳ್ಳಿ ಗ್ರಾಮದ ಜಯಮ್ಮ ಸೇರಿ ಆರು ಮಂದಿ ರೈತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮಧ್ಯಂತರ ಆದೇಶ ಮಾಡಿತು.

ಪ್ರಕರಣದಲ್ಲಿ ದೂರು ದಾಖಲಿಸಿರುವ ವ್ಯಕ್ತಿಯು ಜಂಟಿ ಮಾಪನ ಸಮಿತಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದ ಬಾಡಿಗೆ ಕಾರಿನ ಚಾಲಕರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿ ದೂರು ದಾಖಲಿಸಿಲ್ಲ. ಪ್ರಕರಣ ದಾಖಲಿಸಿರುವ ರೀತಿಯೇ ಅನುಮಾನಾಸ್ಪದವಾಗಿದೆ. ಇದರಿಂದ ಅರ್ಜಿಯ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ಧದ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್, ಟೌನ್‌ಶಿಪ್ ಯೋಜನೆಗೆ ಜಮೀನು ಬಿಟ್ಟುಕೊಡಲು ಇಷ್ಟಪಡದ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಸರ್ಕಾರವೇ ಹೇಳಿಕೆ ನೀಡಿದೆ. ಇದು ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ. ಆದರೆ, ಜಂಟಿ ಮಾಪನ ಸಮಿತಿಯ ಅಧಿಕಾರಿಗಳು ಖಾಸಗಿ ಕಾರಿನಲ್ಲಿ ರೈತರ ಜಮೀನುಗಳಿಗೆ ತೆರಳಿದ್ದರು. ಸ್ಥಳದಲ್ಲಿ ಅರ್ಜಿದಾರರೂ ಸೇರಿ ಹಲವು ರೈತರು ಪೊರಕೆಗಳನ್ನು ಹಿಡಿದುಕೊಂಡು ‘ಪೊರಕೆ ಚಳವಳಿ’ ನಡೆಸುತ್ತಿದ್ದರು ಎಂದು ವಿವರಿಸಿದರು.

ಜಮೀನು ಸ್ವಾಧೀನ ವಿಚಾರದಲ್ಲಿ ಸರ್ಕಾರವೇ ನೀಡಿದ್ದ ಹೇಳಿಕೆ ಆಧರಿಸಿ ಅರ್ಜಿದಾರರು ಅಧಿಕಾರಿಗಳನ್ನು ಜಮೀನು ಪ್ರವೇಶಿಸದಂತೆ ತಡೆದಿದ್ದರು. ಘಟನೆಯ ನಂತರ ಸಮಿತಿಯ ಕೆಲಸಕ್ಕಾಗಿ ಬಾಡಿಗೆಗೆ ಪಡೆದಿದ್ದ ಖಾಸಗಿ ಕಾರಿನ ಚಾಲಕ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆದರೆ, ಗಾಯಗೊಂಡಿದ್ದಾರೆ ಎನ್ನಲಾದ ಯಾವ ವ್ಯಕ್ತಿಯೂ ದೂರು ದಾಖಲಿಸಿಲ್ಲ. ದೂರು ದಾಖಲಿಸಲು ಬಾಡಿಗೆ ಕಾರು ಚಾಲಕನಿಗೆ ಸುಪಾರಿ ನೀಡಲಾಗಿದೆ. ಇಲ್ಲಿ ಕೊಲೆ ಯತ್ನ ಹಾಗೂ ಮಹಿಳೆ ಮೇಲಿನ ಹಲ್ಲೆಯ ಆರೋಪ ಎಲ್ಲಿದೆ ಎಂದು ಆಕ್ಷೇಪಿಸಿದರು.

ಇದೇನು ಸರ್ಕಾರ ಸುಪಾರಿ ಕೊಡಲು ಶುರು ಮಾಡಿದೆಯೇ?

ಆಗ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಇದೇನು? ಸರ್ಕಾರ ಸುಪಾರಿ ಕೊಡಲು ಶುರು ಮಾಡಿದೆಯೇ? ಅಧಿಕೃತ ಸುಪಾರಿಯೇ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು ಮುಂದುವರಿದು, ಅರ್ಜಿದಾರರು ಪ್ರಗತಿಪರ ರೈತರಾಗಿದ್ದಾರೆ. ಅವರನ್ನು ಈ ರೀತಿ ನಡೆಸಿಕೊಳ್ಳಲಾಗದು. ಅರ್ಜಿದಾರರ ವಿರುದ್ಧ ತೆಗೆದುಕೊಂಡಿರುವ ಈ ಕ್ರಮ ಕಠೋರವಾಗಿದೆ. ಅರ್ಜಿದಾರ ರೈತರು ನಗರದ ಗಡಿ ಭಾಗದಲ್ಲಿದ್ದಾರೆ ಎಂಬ ಕಾರಣಕ್ಕೆ ಅವರು ತಮ್ಮ ಕೃಷಿ ಭೂಮಿ ಕಳೆದುಕೊಳ್ಳಬೇಕು ಎಂದರ್ಥವಲ್ಲ. ಅವರ ಕೃಷಿ ಭೂಮಿಯ ಮೇಲೆ ಅವರಿಗೆ ಹಕ್ಕಿದೆ. ತಲೆಮಾರುಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ಭೂಸ್ವಾಧೀನದ ವಿರುದ್ಧ ಕಳೆದ ಎರಡೂವರೆ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅರ್ಜಿದಾರರು ಈ ಪೊರಕೆ ಚಳವಳಿ ನಡೆಸುತ್ತಿದ್ದರು. ಈ ಪೊರಕೆ ಚಳವಳಿಯೇ, ಬಿಎನ್‌ಎಸ್ ಸೆಕ್ಷನ್ 109 (ಕೊಲೆ ಯತ್ನ) ಹಾಗೂ 74ರ (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ) ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲು ಕಾರಣವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೈಋತ್ಯ ರೈಲ್ವೇ ವ್ಯಾಪ್ತಿಗೆ ಮಂಗಳೂರು ಸೇರಿದ್ಯಾಕೆ? ಇಲಾಖೆಯಿಂದಲೇ ಬಂತು ಸ್ಪಷ್ಟನೆ
Karnataka News Live: ಟೌನ್‌ಶಿಪ್ ಸರ್ವೆಗೆ ತೆರಳಿದ್ದ ಅಧಿಕಾರಿಗಳಿಗೆ ಬಿಡದಿ ರೈತರ ಪೊರಕೆ ಏಟು ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು