ಇಂದು ‘ಹಳ್ಳಿ ಫೈಟ್‌’ ಫಲಿತಾಂಶ: 2.22 ಲಕ್ಷ ಅಭ್ಯರ್ಥಿಗಳ ಭವಿಷ್ಯ ಬಹಿರಂಗ!

By Kannadaprabha NewsFirst Published Dec 30, 2020, 7:14 AM IST
Highlights

ಇಂದು ‘ಹಳ್ಳಿ ಫೈಟ್‌’ ಫಲಿತಾಂಶ| 5,728 ಗ್ರಾ.ಪಂ.ಗಳ 82,616 ಸ್ಥಾನ| 2.22 ಲಕ್ಷ ಅಭ್ಯರ್ಥಿಗಳ ಭವಿಷ್ಯ ಬಹಿರಂಗ| ಮತಪತ್ರಗಳ ಎಣಿಸಬೇಕಿರುವುದರಿಂದ ರಾತ್ರಿ ವೇಳೆಗೆ ಸಂಪೂರ್ಣ ಫಲಿತಾಂಶ ಲಭ್ಯ| ಈಗಾಗಲೇ 8074 ಜನ ಅವಿರೋಧ ಆಯ್ಕೆ| ಪಕ್ಷಾತೀತವಾದರೂ ಮೂರೂ ಪಕ್ಷಗಳಿಗೆ ಮಹತ್ವದ ಚುನಾವಣೆ ಇದು| ಬೆಂಬಲಿತ ಅಭ್ಯರ್ಥಿಗಳ ನಿಲ್ಲಿಸಿ ಬೇರೂರಲು ಪಕ್ಷಗಳ ಯತ್ನ

ಬೆಂಗಳೂರು(ಡಿ.30): ರಾಜ್ಯದ 5,728 ಗ್ರಾಮಪಂಚಾಯಿತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಲಿದ್ದು, 2.22 ಲಕ್ಷ ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗಲಿದೆ.

ಎರಡು ಹಂತಗಳಲ್ಲಿ 226 ತಾಲೂಕುಗಳ 5,728 ಗ್ರಾ.ಪಂ.ಗಳ 82,616 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶೇ.80ಕ್ಕೂ ಹೆಚ್ಚು ಮತದಾನವಾಗಿತ್ತು. 2,22,814 ಹುರಿಯಾಳುಗಳು ಸ್ಪರ್ಧಿಸಿದ್ದರು. ಈಗಾಗಲೇ 8074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಆಯಾ ತಾಲೂಕುಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಜರುಗಲಿದೆ. ಮತಪತ್ರಗಳ ಮೂಲಕ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿವರೆಗೆ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ.

ಈ ಬಾರಿಯ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಎಂಜಿನಿಯರ್‌ಗಳು, ಉನ್ನತ ಶಿಕ್ಷಣ ಪಡೆದ ಪದವೀಧರರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ಇದು ಪಕ್ಷಾತೀತ ಚುನಾವಣೆ ಆಗಿದ್ದರೂ, ಆಯಾ ಪಕ್ಷಗಳು ಅಭ್ಯರ್ಥಿಗಳನ್ನು ಬೆಂಬಲಿಸಿ ಗ್ರಾಮ ಮಟ್ಟದಲ್ಲಿ ತಮ್ಮ ಬೇರು ಬಿಗಿ ಮಾಡಿಕೊಳ್ಳಲು ಯತ್ನಿಸುತ್ತಿವೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಗೆ ಈ ಚುನಾವಣಾ ಫಲಿತಾಂಶ ಮಹತ್ವದ್ದಾಗಿದೆ.

ಮುಂಜಾಗ್ರತಾ ಕ್ರಮ:

ಕೋವಿಡ್‌-19 ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸ್‌, ಮಾಸ್ಕ್‌ ಹಾಕುವುದನ್ನು ಕಡ್ಡಾಯ ಪಾಲನೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿಯೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಬಳಿಕ ಜನರು ಗುಂಪು ಸೇರದಂತೆ ಎಚ್ಚರ ವಹಿಸಲಾಗಿದೆ. ಗೆದ್ದ ಅಭ್ಯರ್ಥಿಯು ವಿಜಯೋತ್ಸವ ಆಚರಣೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿದೆ.

2 ಹಂತದಲ್ಲಿ ನಡೆದಿತ್ತು ಚುನಾವಣೆ:

ಡಿ.22ರಂದು ನಡೆದ ಮೊದಲ ಹಂತದಲ್ಲಿ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಮತದಾನ ನಡೆದಿದ್ದು, ಒಟ್ಟು 1,17,838 ಅಭ್ಯರ್ಥಿಗಳು ಕಣದಲ್ಲಿದ್ದರು. 4377 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಡಿ.27ರಂದು ನಡೆದ ಎರಡನೇ ಹಂತದಲ್ಲಿ 2,709 ಗ್ರಾಮಪಂಚಾಯಿತಿಗಳ 39,378 ಸ್ಥಾನಗಳಿಗೆ ಮತ ನಡೆದಿದ್ದು, ಒಟ್ಟು 1,05,431 ಅಭ್ಯರ್ಥಿಗಳು ಕಣದಲ್ಲಿದ್ದರು. 3,697 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದೆ. ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 648 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಮೊದಲ ಹಂತದಲ್ಲಿ ಶೇ.82.04ರಷ್ಟುಮತದಾನವಾಗಿದ್ದರೆ, ಎರಡನೇ ಹಂತದಲ್ಲಿ ಶೇ.80.71ರಷ್ಟುಮತದಾನವಾಗಿದೆ.

click me!