
ಬೆಂಗಳೂರು(ಡಿ.30): ರಾಜಧಾನಿ ಬೆಂಗಳೂರಲ್ಲಿ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟತಾಯಿ ಮತ್ತು ಮಗಳ ಸಂಪರ್ಕದಲ್ಲಿದ್ದವರು ಸಾಂಸ್ಥಿಕ ಕ್ವಾರಂಟೈನ್‌ಗೆ ನಿರಾಕರಿಸಿದ ಕಾರಣ ಅವರು ವಾಸವಿರುವ ಅಪಾರ್ಟ್‌ಮೆಂಟ್ ಅನ್ನೇ ಬಿಬಿಎಂಪಿ ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಡಿಸಿದ್ದಾರೆ.
ಬ್ರಿಟನ್‌ನಿಂದ ವಾಪಸ್ಸಾದವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದವರಿಗೆ ನಡೆಸಲಾಗಿದ್ದ ವಂಶವಾಹಿ ಪರೀಕ್ಷಾ ಫಲಿತಾಂಶಯನ್ನು ಮಂಗಳವಾರ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಬೆಂಗಳೂರಿನ 34 ವರ್ಷದ ತಾಯಿ ಮತ್ತು ಆಕೆಯ 6 ವರ್ಷದ ಮಗಳು ಹಾಗೂ ಜೆ.ಪಿ.ನಗರ ಮೂರನೇ ಹಂತದ 34 ವರ್ಷದ ಮತ್ತೊಬ್ಬ ವ್ಯಕ್ತಿಗೆ ಬ್ರಿಟನ್ ರೂಪಾಂತರಿ ವೈರಸ್ ದೃಢಪಟ್ಟಿರುವುದಾಗಿ ತಿಳಿಸಿತು.
ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR
ಈ ಪ್ರಕಟಣೆ ಬೆನ್ನಲ್ಲೇ ಸೋಂಕಿತರ ಸಂಪರ್ಕಿತರ ಕಾರ್ಯಾಚರಣೆಗಿಳಿದ ಬಿಬಿಎಂಪಿ ಅಧಿಕಾರಿಗಳು ಸೋಂಕಿತ ತಾಯಿ ಮತ್ತು ಮಗು ವಾಸವಿದ್ದ ಬೊಮ್ಮನಹಳ್ಳಿ ವಲಯದ ವಸಂತಪುರ ಬಳಿಯ ಸಿರಿ ಎಂಬೆಸಿ ಅಪಾರ್ಟ್‌ಮೆಂಟ್‌ಗೆ ತೆರಳಿ ಅವರ ಕುಟುಂಬದವರು ಹಾಗೂ ಇತರೆ 35 ಪ್ರಾಥಮಿಕ ಸಂಪರ್ಕಿತರಿಗೆ ವಿಷಯ ತಿಳಿಸಿ ಸಾಂಸ್ಥಿಕ ಸ್ವಾರಂಟೈನ್‌ಗಾಗಿ ಹೋಟೆಲ್‌ವೊಂದಕ್ಕೆ ಕರೆದೊಯ್ಯಲು ಮುಂದಾದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಪಾರ್ಟ್‌ಮೆಂಟ್ ನಿವಾಸಿಗಳು ನಾವು ಎಲ್ಲಿಗೂ ಬರುವುದಿಲ್ಲ ನಮ್ಮ ಮನೆಗಳಲ್ಲೇ ಹೋಂ ಕ್ವಾರಂಟೈನ್‌ನಲ್ಲಿ ಇರುವುದಾಗಿ ಪಟ್ಟುಹಿಡಿದರು. ಇದರಿಂದ ಬೇರೆ ದಾರಿ ಕಾಣದೇ ಅಧಿಕಾರಿಗಳು ಅವರಿಗೆ ಅಪಾರ್ಟ್‌ಮೆಂಟ್‌ನಲ್ಲೇ ಕ್ವಾರಂಟೈನ್‌ನಲ್ಲಿರಲು ಅವಕಾಶ ನೀಡಿ ಇಡೀ ಅಪಾರ್ಟ್‌ಮೆಂಟ್ ಅನ್ನು ಸೀಲ್‌ಡೌನ್ ಮಾಡಿ ಕ್ವಾರಂಟೈನ್ ಕೇಂದ್ರವಾಗಿಸಿದ್ದಾರೆ.
35 ಮಂದಿ ಕ್ವಾರಂಟೈನ್:
ಅಪಾರ್ಟ್‌ಮೆಂಟ್‌ನ ಒಟ್ಟು 17 ಪ್ಲಾಟ್‌ನಲ್ಲಿ ವಾಸವಿದ್ದ 35 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮರಾ ವ್ಯವಸ್ಥೆ, ಗೇಟ್‌ಗೆ ಬೀಗ ಹಾಕಲಾಗಿದೆ. ಸಂಪರ್ಕಿತರ ಮೇಲೆ ನಿಗಾ ವಹಿಸಲು ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮನೆ ಸದಸ್ಯರು ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಇಡೀ ಅಪಾರ್ಟ್‌ಮೆಂಟ್‌ಗೆ ಸ್ಯಾನಿಟೈಸ್ ಮಾಡಲಾಗಿದೆ. ಭದ್ರತೆಗೆ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಗೇಟ್‌ಗೆ ಹೋಂ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸಲಾಗಿದೆ.
ಮನೆ ಬಾಗಿಲಿಗೆ ಹಾಲು, ಹಣ್ಣು, ತರಕಾರಿ:
ಅಪಾರ್ಟ್‌ಮೆಂಟ್ ನಿವಾಸಿಗಳು ಕ್ವಾರಂಟೈನ್ ಅವಧಿ ಮುಕ್ತಾಗೊಳ್ಳುವವರಿಗೆ ದಿನ ಬಳಕೆಗೆ ಬೇಕಾದ ದಿನಸಿ, ಹಣ್ಣು, ತರಕಾರಿ, ಹಾಲು ಪೂರೈಕೆಗೆ ಬಿಬಿಎಂಪಿ ಸ್ವಯಂ ಸೇವಕರನ್ನು ನಿಯೋಜಿಸಿದೆ. ಹಣ ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬೊಮ್ಮನಹಳ್ಳಿಯ ಜಂಟಿ ಆಯುಕ್ತ ರಾಮಕೃಷ್ಣ ‘ಕನ್ನಡಪ್ರಭ’ಕ್ಕೆ ಮಾಹಿತಿ ನಿಡಿದ್ದಾರೆ.
ಸೋಂಕಿತನ ಪತ್ನಿ, ಮಗನನ್ನು ಕ್ವಾರಂಟೈನ್ ಮಾಡದೆ ನಿರ್ಲಕ್ಷ್ಯ?
ಇನ್ನು, ಬ್ರಿಟನ್ ವೈರಸ್ ದೃಢಪಟ್ಟಜೆ.ಪಿ.ನಗರದ 34 ವರ್ಷದ ವ್ಯಕ್ತಿಯೊಂದಿಗೆ ಬ್ರಿಟನ್‌ನಿಂದ ಆಗಮಿಸಿದ ಆತನ ಪತ್ನಿ ಹಾಗೂ ಮಗನನ್ನು ಕ್ವಾರಂಟೈನ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸೋಂಕಿತ ವ್ಯಕ್ತಿಯ ಕುಟುಂಬದವರು ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಿದ್ದಾರೆ. ಆದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಅವರ ತಂದೆ, ತಾಯಿ ಸೇರಿದಂತೆ ಸೋಂಕಿತ ವ್ಯಕ್ತಿಯೊಂದಿಗೆ ಏಳು ಮಂದಿ ಸಂಪರ್ಕದಲ್ಲಿದ್ದರು ಎಂದಷ್ಟೇ ಹೇಳುತ್ತಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡುವುದಕ್ಕೆ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ