ವೋಲ್ವೋಗೆ ಗುಡ್‌ಬೈ: ಟಾಟಾ, ಲೇಲ್ಯಾಂಡ್‌ ಬಸ್‌ ಖರೀದಿಗೆ ಸರ್ಕಾರ ಸಜ್ಜು!

By Kannadaprabha NewsFirst Published Mar 7, 2020, 8:24 AM IST
Highlights

ಇನ್ನು ವೋಲ್ವೋ ಬಿಟ್ಟು ಟಾಟಾ, ಲೇಲ್ಯಾಂಡ್‌ ಬಸ್‌ ಖರೀದಿ| ಮುಂದಿನ ತಿಂಗಳೊಳಗೆ 1500 ಬಸ್‌ ಪೂರೈಕೆ: ಸವದಿ| ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಈ ವರ್ಷ 3000 ಬಸ್‌

ಬೆಂಗಳೂರು[ಮಾ.07]: ಈ ವರ್ಷದಿಂದ ವೋಲ್ವೊ ಬಸ್‌ಗಳ ಖರೀದಿಯನ್ನು ಕಡಿಮೆ ಮಾಡಲಾಗುವುದು, ಇದರ ಬದಲಿಗೆ ಟಾಟಾ, ಲೇಲ್ಯಾಂಡ್‌ ಬಸ್‌ಗಳ ಖರೀದಿ ಹೆಚ್ಚು ಮಾಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಪ್ರಶ್ನೋತ್ತರ ವೇಳೆ ಬಿಜೆಪಿಯ ಡಾ. ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಮೂರು ಸಾವಿರ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಿದ್ದು, ಮೊದಲು 1500 ಬಸ್‌ಗಳು ಬರುವ ಏಪ್ರಿಲ್‌ ಒಳಗೆ ಪೂರೈಕೆಯಾಗಲಿವೆ, ಉಳಿದ ಬಸ್‌ಗಳು ಬಿಎಸ್‌-6 ಮಾದರಿಯದ್ದಾಗಿರುವುದರಿಂದ ಸ್ವಲ್ಪ ತಡವಾಗಿ ಬಸ್‌ಗಳನ್ನು ಪೂರೈಸುವುದಾಗಿ ಕಂಪನಿಗಳು ತಿಳಿಸಿವೆ ಎಂದರು. ಫೇಮ್‌-2 ಯೋಜನೆಯಡಿ 300 ವಿದ್ಯುತ್‌ ಬಸ್‌ಗಳು ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯಡಿ 90 ವಿದ್ಯುತ್‌ ಬಸ್‌ಗಳ ಕಾರ್ಯಾಚರಣೆಗೆ ಟೆಂಡರ್‌ ಕರೆಯಲಾಗಿದೆ. ಅದೇ ರೀತಿ ಹೊಸದಾಗಿ 347 ಬಸ್‌ಗಳು ಸರಬರಾಜು ಹಂತದಲ್ಲಿವೆ ಎಂದರು.

ಕಳಪೆ ಬಿಡಿಭಾಗ ದಂಧೆ:

ನಿಗಮದ ಬಸ್‌ಗಳಿಗೆ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುತ್ತಿರುವುದರಿಂದ ಅಪಘಾತಗಳು ಆಗುತ್ತಿವೆ ಎಂಬ ನಾರಾಯಣಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿರ್ದಿಷ್ಟದಾಖಲೆ, ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಆದರೂ ಈ ಬಗ್ಗೆ ಪರಿಶೀಲಿಸುತ್ತೇನೆ. ಅಪಘಾತವಾಗದಂತೆ ನಾನಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಉಚಿತ ಬಸ್‌ ಪಾಸ್‌ ನೀಡಿಕೆ ಕಷ್ಟ:

ಪ್ರಸ್ತುತ ಸಂದರ್ಭದಲ್ಲಿ ನಾಲ್ಕು ನಿಗಮಗಳೂ ಕಷ್ಟದಲ್ಲಿವೆ. ಉಚಿತ ಬಸ್‌ ಪಾಸ್‌ ಸಂಬಂಧ ರಾಜ್ಯ ಸರ್ಕಾರದಿಂದ ಸುಮಾರು ಮೂರು ಸಾವಿರ ಕೋಟಿ ರು. ಬಾಕಿ ಬರಬೇಕಿದೆ. ನಿಗಮದಿಂದಲೇ ಎಲ್ಲ ಶಾಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡುವುದು ಕಷ್ಟಎಂದು ಸಚಿವ ಲಕ್ಷ್ಮಣ ಸವದಿ ಅಸಹಾಯಕತೆ ವ್ಯಕ್ತಪಡಿಸಿದರು.

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಿಂದ ಬರಬೇಕಾದ ಹಣ ಬಾಕಿ ಇರುವುದರಿಂದ ಹೊಸ ಬಸ್‌ಗಳ ಖರೀದಿ, ನಿರ್ವಹಣೆ, ವೇತನ ನೀಡಿಕೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆರ್ಥಿಕ ಸ್ಥಿತಿ ಸುಧಾರಣೆಯಾದರೆ ಉಚಿತ ಬಸ್‌ ಪಾಸ್‌ ನೀಡಲಾಗುವುದು ಎಂದು ಭರವಸೆ ನೀಡಿದರು.

click me!