ಕೃಷ್ಣಾ ಮೇಲ್ದಂಡೆಗೆ 10000 ಕೋಟಿ ರು. ಅನುದಾನ

By Kannadaprabha News  |  First Published Mar 7, 2020, 7:19 AM IST

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 2020-21ನೇ ಸಾಲಿನಲ್ಲಿ 10 ಸಾವಿರ ಕೋಟಿ ರು. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
 


ವಿಧಾನಸಭೆ (ಮಾ.07):  ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 2020-21ನೇ ಸಾಲಿನಲ್ಲಿ 10 ಸಾವಿರ ಕೋಟಿ ರು. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಶುಕ್ರವಾರ ಸದನ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿಗಳು ಸ್ವಯಂಪ್ರೇರಿತರಾಗಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಅಚ್ಚರಿ ಮೂಡಿಸಿದರು.

Tap to resize

Latest Videos

undefined

ಬಜೆಟ್‌ ಮಂಡನೆ ನಂತರ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.

ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಬೇಕಿತ್ತು ಎಂಬುದು ಬಹುತೇಕರ ಆಗ್ರಹವಾಗಿದೆ. ಹೀಗಾಗಿ ಗುರುವಾರ ಬಜೆಟ್‌ ಮಂಡನೆ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಮತ್ತು 20ಕ್ಕೂ ಹೆಚ್ಚಿನ ಹಳ್ಳಿಗಳ ಪುನರ್ವಸತಿ, ಪುನರ್‌ ನಿರ್ಮಾಣಕ್ಕೆ 10 ಸಾವಿರ ಕೋಟಿ ರು. ಅನುದಾನ ಒದಗಿಸಲಾಗುವುದು. ಯೋಜನೆಯ ಕ್ರಿಯಾಯೋಜನೆ ರೂಪಿಸಿ ಮುಂದಿನ ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಸಂಪನ್ಮೂಲ ಕ್ರೋಢೀಕರಣದಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಕರ್ನಾಟಕ ಬಜೆಟ್ 2020: ಉತ್ತರ ಕರ್ನಾಟಕದ ರೈತನ ಬೆನ್ನಿಗೆ ನಿಂತ ಯಡಿಯೂರಪ್ಪ...

ದೆಹಲಿಗೆ ತೆರಳಿ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗುವುದು. ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು, ಜಿಎಸ್‌ಟಿ ಬಾಕಿ ಪರಿಹಾರ ಮೊತ್ತ ನೀಡುವಂತೆ ಸಂಬಂಧಪಟ್ಟಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಣ ಎಲ್ಲಿದೆ - ಸಿದ್ದು ಪ್ರಶ್ನೆ:  ಮುಖ್ಯಮಂತ್ರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಕಾಮಗಾರಿ ಕುರಿತು ಪ್ರಸ್ತಾಪವಾಗಿಲ್ಲ. ಒತ್ತಡ ಬಂದಿದೆ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಹಣ ನೀಡುತ್ತೇವೆ ಎನ್ನುತ್ತಿದ್ದೀರಿ. ಹಣ ನೀಡುವುದು ಸ್ವಾಗತಾರ್ಹ. ಆದರೆ, ಸರ್ಕಾರದಲ್ಲಿ ಹಣವೇ ಇಲ್ಲ. ಕೇವಲ ಮೂಗಿಗೆ ತುಪ್ಪ ಹಚ್ಚಿ ಆ ಭಾಗದ ಜನರನ್ನು ನಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೃಷ್ಣಾ ಯೋಜನೆಗೆ ಹಣಕಾಸು ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಕಾಮಗಾರಿಯನ್ನು ತಕ್ಷಣ ಆರಂಭಿಸುವ ಪ್ರಯತ್ನ ಮಾಡಲಾಗುವುದು ಎಂದು ಸಮಜಾಯಿಷಿ ನೀಡಿದರು.

ಇದನ್ನು ಒಪ್ಪದ ಸಿದ್ದರಾಮಯ್ಯ, ಕಳೆದ ಒಂದು ತಿಂಗಳಿನಿಂದ ಏನು ಮಾಡುತ್ತಿದ್ದೀರಿ? 10 ಸಾವಿರ ಕೋಟಿ ರು. ಬಜೆಟ್‌ನ ಲೆಕ್ಕದಲ್ಲಿಲ್ಲ. ಹೆಚ್ಚುವರಿಯಾಗಿ ಪ್ರಕಟಿಸುತ್ತಿರುವ ಈ ಹಣ ಎಲ್ಲಿಂದ ತರುತ್ತೀರಿ? ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತೇವೆ, ಹೇಗಾದರೂ ಹೊಂದಿಸುತ್ತೇವೆ ಎಂಬ ಸುಳ್ಳು ಭರವಸೆಯ ಮಾತುಗಳನ್ನು ನಂಬಲಾಗುವುದಿಲ್ಲ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬ್ರಿಜೇಶ್‌ ಪಟೇಲ್‌ ಸಮಿತಿ ಕರ್ನಾಟಕಕ್ಕೆ ಕೃಷ್ಣಾನದಿ ಪಾತ್ರದಿಂದ 173 ಟಿಎಂಸಿ ನೀರು ಹಂಚಿಕೆ ಮಾಡಿ 7 ವರ್ಷ ಕಳೆದಿದೆ. ಹಿಂದಿನ ಸರ್ಕಾರ ಯೋಜನೆಗೆ ಹಣ ನೀಡಲಿಲ್ಲ. 2012-13ನೇ ಸಾಲಿನಲ್ಲಿ ಸಚಿವ ಜಗದೀಶ್‌ ಶೆಟ್ಟರ್‌ ನೇತೃತ್ವದ ಸರ್ಕಾರ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾಮಗಾರಿಗೆ 17,207 ಕೋಟಿ ರು. ನಿಗದಿ ಮಾಡಿ ಕ್ರಿಯಾಯೋಜನೆ ರೂಪಿಸಿತ್ತು. ನಾನು ಕೃಷ್ಣಾ ಯೋಜನೆಯ ಮುಳುಗಡೆ ಪ್ರದೇಶದಿಂದ ಬಂದಿದ್ದು, ಸಿದ್ದರಾಮಯ್ಯ ಸಹ ಈಗ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಯಡಿಯೂರಪ್ಪ ಅವರು 10 ಸಾವಿರ ಕೋಟಿ ರು. ಘೋಷಣೆ ಮಾಡಿದಾಗ ಅಭಿನಂದನೆ ಹೇಳಲಿದ್ದಾರೆ ಎಂದು ಭಾವಿಸಿದ್ದೆ ಎಂದರು.

ಆಗ ಸಿದ್ದರಾಮಯ್ಯ, ಬಜೆಟ್‌ನ ಲೆಕ್ಕದಲ್ಲಿ 10 ಸಾವಿರ ಕೋಟಿ ರು. ಸೇರಿದ್ದರೆ ಅಭಿನಂದನೆ ಹೇಳುತ್ತಿದ್ದೆ. ಆದರೆ, ಸುಳ್ಳು ಭರವಸೆಯ ಮಾತುಗಳನ್ನು ನಂಬಲು ಸಾಧ್ಯವಿಲ್ಲ. ಮೊದಲು ಯೋಜನೆ ಜಾರಿಗೊಳಿಸಲಿ. ನಮ್ಮ ಸರ್ಕಾರ ಐದು ವರ್ಷದಲ್ಲಿ ನೀರಾವರಿಗೆ 58 ಸಾವಿರ ಕೋಟಿ ರು. ಖರ್ಚು ಮಾಡಿದೆ ಎಂದು ತಿರುಗೇಟು ನೀಡಿದರು.

ಆಲಮಟ್ಟಿಡ್ಯಾಂ ಎತ್ತರ  ಹೆಚ್ಚಿಸುವ, ಪುನರ್ವಸತಿ ಕಲ್ಪಿಸುವ ಯೋಜನೆ

ಕೃಷ್ಣಾ ನದಿಯ ನೀರನ್ನು ಉತ್ತರ ಕರ್ನಾಟಕದ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಪೂರೈಸಲು ಸರ್ಕಾರ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರಡಿ 1ನೇ ಹಂತದಲ್ಲಿ ಆಲಮಟ್ಟಿಹಾಗೂ ನಾರಾಯಣಪುರ ಅಣೆಕಟ್ಟೆನಿರ್ಮಿಸಲಾಗಿದೆ. 2ನೇ ಹಂತದಲ್ಲಿ ಈ ಅಣೆಕಟ್ಟೆಗಳಿಗೆ ನಾಲೆಗಳನ್ನು ನಿರ್ಮಿಸಿ ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. 3ನೇ ಹಂತದಲ್ಲಿ ಆಲಮಟ್ಟಿಜಲಾಶಯದ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ (5 ಮೀಟರ್‌) ಎತ್ತರಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ 25ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಲಿವೆ. ಅವುಗಳ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಮಾಡುವುದೂ ಯೋಜನೆಯಲ್ಲಿದೆ. ಯೋಜನೆಯಿಂದ ನೀರಿನ ಸಂಗ್ರಹ ಹೆಚ್ಚಳವಾಗಲಿದ್ದು, ಬರ ಪರಿಸ್ಥಿತಿಯಂತಹ ವೇಳೆ ನೀರಿನ ಕೊರತೆ ನೀಗಿಸಲು ಸಹಕಾರಿಯಾಗಲಿದೆ.

click me!