ನನ್ನ ಮೇಲಿನ ಹಲ್ಲೆ ತನಿಖೆ ಸರಿಯಾಗಿ ಆಗಿಲ್ಲ: ತನ್ವೀರ್‌

By Kannadaprabha NewsFirst Published Mar 7, 2020, 8:18 AM IST
Highlights

ನನ್ನ ಮೇಲಿನ ಹಲ್ಲೆ ತನಿಖೆ ಸರಿಯಾಗಿ ಆಗಿಲ್ಲ: ತನ್ವೀರ್‌| ಹಲ್ಲೆ ನಡೆಸಿದವರ ಹಿಂದೆ ಯಾರಿದ್ದಾರೆಂದು ಪತ್ತೆಹಚ್ಚಿ| ಗೃಹ ಸಚಿವರಿಗೆ ಪತ್ರ ಬರೆದು ಕಾಂಗ್ರೆಸ್‌ ಶಾಸಕನ ಬೇಸರ

 ಬೆಂಗಳೂರು[ಮಾ.07]: ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ ಎಂದು ಶಾಸಕ ತನ್ವೀರ್‌ ಸೇಠ್‌ ಬೇಸರ ವ್ಯಕ್ತಪಡಿಸಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಗೃಹ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ, ಕಳೆದ ನ.17ರಂದು ಮದುವೆ ಕಾರ್ಯಕ್ರಮದಲ್ಲಿ ದುಷ್ಕರ್ಮಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ ಸಮರ್ಪಕ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. ತನಿಖೆಗೆ ನೇಮಕಗೊಂಡಿರುವ ಎಸಿಪಿ ನೇತೃತ್ವದ ತಂಡ ಹಲ್ಲೆಕೋರ ಮತ್ತು ಆತನ ಸಹಚರರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಆದರೆ ತನಿಖಾಧಿಕಾರಿಗಳು ಈ ಹಲ್ಲೆಯ ಸಂಚಿನ ಹಿಂದಿರುವ ಪ್ರಮುಖರು ಅಥವಾ ಸಂಘಟನೆ ಹಾಗೂ ಹಲ್ಲೆಯ ಉದ್ದೇಶವನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಆದರಿಂದ ಈ ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ಈ ಹಲ್ಲೆ ಸಂಚಿನ ಹಿಂದಿರುವ ಸಂಘಟನೆ ಅಥವಾ ಪ್ರಮುಖರನ್ನು ಪತ್ತೆಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್‌ 17ರಂದು ರಾತ್ರಿ ಮೈಸೂರಿನ ಬನ್ನಿ ಮಂಟಪದಲ್ಲಿ ನೂರಾರು ಜನರ ಎದುರೇ ತನ್ವೀರ್‌ ಸೇಠ್‌ ಅವರ ಮೇಲೆ ಕೊಲೆ ಯತ್ನ ನಡೆದಿತ್ತು. ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಆರೋಪಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಈ ಘಟನೆಯ ನಂತರ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಸೇಠ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಿ ಕೊಡಲಾಗಿತ್ತು.

click me!