ಏಪ್ರಿಲ್ 26ಕ್ಕೆ 100 ದೇಗುಲಗಳಲ್ಲಿ ನಡೆಯಲಿದೆ ‘ಸಪ್ತಪದಿ’

By Kannadaprabha News  |  First Published Feb 8, 2020, 10:25 AM IST

ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ  ಸಪ್ತಪದಿ ಕಾರ್ಯಕ್ರಮವು ಏಪ್ರಿಲ್ 26 ರಂದು ರಾಜ್ಯದ 100 ದೇಗುಲಗಳಲ್ಲಿ ನಡೆಯಲಿದೆ. ರಥಯಾತ್ರೆ ಮೂಲಕ ಇದಕ್ಕೆ ಪ್ರಚಾರ ನೀಡಲಾಗುತ್ತದೆ


ಬೆಂಗಳೂರು [ಫೆ.08]:  ರಾಜ್ಯ ಸರ್ಕಾರವು ಏಪ್ರಿಲ್‌ 26ರಂದು ರಾಜ್ಯಾದ್ಯಂತ 100 ಆಯ್ದ ಮುಜರಾಯಿ ದೇವಸ್ಥಾನಗಳಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ‘ಸಪ್ತಪದಿ’ಗೆ ಭರದ ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಪ್ರಚಾರ ಕೊಡುವ ಸಲುವಾಗಿ ಫೆ.13ರಿಂದ ಹನ್ನೆರಡು ಪ್ರಮುಖ ದೇವಾಲಯಗಳಲ್ಲಿ ‘ಪ್ರಚಾರ ರಥೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕಾಗಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಂಬಂಧಪಟ್ಟಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ವಿವಾಹಕ್ಕಾಗಿ ಜೋಡಿಗಳು ಮಾ.27ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಹೀಗಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಲುವಾಗಿ ರಾಜ್ಯಾದ್ಯಂತ 750 ಪ್ರಚಾರ ಫಲಕ ಅಳವಡಿಸಲಾಗಿದೆ. ಅಲ್ಲದೆ, ಫೆ.13ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಪ್ರಚಾರ ರಥಯಾತ್ರೆ ಉದ್ಘಾಟಿಸುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ಇದೇ ರೀತಿ ರಾಜ್ಯದ ಪ್ರಮುಖ ಹನ್ನೆರಡು ವಿವಿಧ ದೇವಾಲಯಗಳಲ್ಲಿ ಮಾ.27ಕ್ಕೆ ಹದಿನೈದು ದಿನ ಮೊದಲಿನಿಂದ ಧ್ವನಿ ವರ್ಧಕಗಳ ಮೂಲಕ ಪ್ರಚಾರ ರಥ ಜನಸಾಮಾನ್ಯರಿಗೆ ಮಾಹಿತಿ ಒದಗಿಸಲಿದೆ ಎಂದು ಹೇಳಿದರು.

Tap to resize

Latest Videos

12 ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಚಾರ:

ಧ್ವನಿವರ್ಧಕ ಹಾಗೂ ಪ್ರಚಾರ ವಾಹನದ ಮೂಲಕ ರಾಜ್ಯದ ಒಟ್ಟು 12 ದೇವಸ್ಥಾನಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

110 ದೇಗುಲಗಳಲ್ಲಿ ಸಾಮೂಹಿಕ ವಿವಾಹ : ಚಿನ್ನ, ಸೀರೆ ಉಡುಗೊರೆ...

ಬೆಂಗಳೂರಿನ ಎಸ್‌. ಕರಿಯಪ್ಪ ರಸ್ತೆಯಲ್ಲಿರುವ ಬನಶಂಕರಿ ದೇವಾಲಯ, ಎಸ್‌.ಎಸ್‌. ಘಾಟಿಯ ಘಾಟಿ ಸುಬ್ರಹ್ಮಣ್ಯ ದೇವಾಲಯ, ಬೆಳಗಾವಿ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಹಾಸನದ ಹಾಸನಾಂಬ ದೇವಾಲಯ, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯ, ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯ, ಹುಲಿಗಿಯ ಹುಲಿಗೆಮ್ಮ ದೇವಾಲಯ, ಶ್ರೀರಂಗಪಟ್ಟಣ ಗಂಜಾಂನ ನಿಮಿಷಾಂಬ ದೇವಾಲಯಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುವುದು ಎಂದರು.

100 ದೇಗುಲಗಳಲ್ಲಿ ಸಾಮೂಹಿಕ ವಿವಾಹ:

ರಾಜ್ಯದಲ್ಲಿರುವ 100 ‘ಎ’ ದರ್ಜೆ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಆಗುವ ಖರ್ಚನ್ನು ಆಯಾ ದೇವಸ್ಥಾನಗಳ ನಿಧಿಯಿಂದ ಪಡೆಯಬಹುದು. ಜತೆಗೆ ಯಾವ ಜಿಲ್ಲೆಗಳಲ್ಲಿ ಆದಾಯವಿರುವ ಎ ವರ್ಗದ ದೇವಾಲಯಗಳು ಇಲ್ಲವೋ ಅಂತಹ ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಅಥವಾ ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚು ‘ಬಿ’ ಮತ್ತು ‘ಸಿ’ ದರ್ಜೆ ದೇವಸ್ಥಾನಗಳನ್ನು ಆಯ್ಕೆ ಮಾಡಲಾಗುವುದು. ಇಂತಹ ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದಲೇ ಅನುದಾನ ನೀಡಲಾಗುವುದು ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕಾಗಿ ವಿಶೇಷ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಜತೆಗೆ ಈಗಾಗಲೇ ಖುದ್ದಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮಡಿಕೇರಿ, ಕೊಡಗು ಮತ್ತಿತರ ಜಿಲ್ಲೆಗಳಿಗೆ ಭೇಟಿ ನೀಡಿ ಸಾಮೂಹಿಕ ವಿವಾಹ ಏರ್ಪಡಿಸಲು ದೇವಾಲಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪೂಜಾರಿ ಹೇಳಿದರು.

ಸಹಾಯವಾಣಿ

ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಶುಲ್ಕ ರಹಿತ ಸಹಾಯವಾಣಿ ಸೇವೆ ಒದಗಿಸಲಾಗಿದೆ. ಆಸಕ್ತರು ದೂ.ಸಂಖ್ಯೆ 18004256654 ಗೆ ಕರೆ ಮಾಡಿ ಮಾಹಿತಿ ಕೇಂದ್ರದಿಂದ ಅಗತ್ಯ ಮಾಹಿತಿ ಪಡೆಯಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

click me!