ಬೆಂಗಳೂರಿಂದಾಚೆ ಕೈಗಾರಿಕೆಗೆ ರಿಯಾಯ್ತಿ: ಶೆಟ್ಟರ್‌

By Kannadaprabha NewsFirst Published Mar 10, 2021, 10:02 AM IST
Highlights

 ಕೈಗಾರಿಕೆ ಬೆಳವಣಿಗೆ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವವರಿಗೆ ರಿಯಾಯಿತಿ ನೀಡಲಾಗುವುದು ಎಂದು ಸಚಿವ ಶೆಟ್ಟರ್ ಹೇಳಿದರು.

 ವಿಧಾನ ಪರಿಷತ್‌ (ಮಾ.10):  ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಬೆಳವಣಿಗೆಗೆ ಹೊಸ ಕೈಗಾರಿಕಾ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 76,376 ಕೋಟಿ ರು.ಗಳ ಯೋಜನೆಗೆ ಸರ್ಕಾರ ಸಮ್ಮತಿ ನೀಡಿದೆ ಎಂದು ಬೃಹತ್‌ ಮತ್ತು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಬಿಜೆಪಿಯ ಎಸ್‌.ವಿ. ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವವರಿಗೆ ರಿಯಾಯಿತಿ ನೀಡಲಾಗುವುದು ಎಂದರು.

ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಸರ್ಕಾರ 76,376 ಕೋಟಿ ರು.ಗಳ ಯೋಜನೆಗೆ ಸಮ್ಮತಿ ನೀಡಿದ್ದು, ಈ ಯೋಜನೆಗಳಿಂದ ಸುಮಾರು 1.77 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಧಾರವಾಡ ಜಿಲ್ಲೆಯೊಂದರಲ್ಲೇ 25 ಸಾವಿರ ಕೋಟಿ ರು. ಮೊತ್ತದ ಯೋಜನೆ ಬರಲಿದೆ ಎಂದು ತಿಳಿಸಿದರು.

ಕೈಗಾರಿಕೆ ತರಬೇತಿ ಶಿಕ್ಷಣ (ITI)ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚ: ಡಿಸಿಎಂ ..

ಕೈಗಾರಿಕಾ ವಲಯ ಚೇತರಿಕೆ:  ಕೋವಿಡ್‌ ಸೋಂಕು ಹಾಗೂ ಲಾಕ್‌ಡೌನ್‌ ಆಗಿ ಸಂಕಷ್ಟದಲ್ಲಿದ್ದ ರಾಜ್ಯದ ಕೈಗಾರಿಕಾ ವಲಯವು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಹಲವು ಕ್ರಮಗಳಿಂದಾಗಿ ಅತ್ಯಂತ ವೇಗವಾಗಿ ಚೇತರಿಸಿಕೊಂಡಿದೆ. ವಿಶೇಷವಾಗಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಘೋಷಿಸಿದ ವಿನಾಯಿತಿಯಿಂದ ಹೆಚ್ಚು ಅನುಕೂಲವಾಗಿದೆ ಎಂದರು.

ಪ್ರಸ್ತುತ ರಾಜ್ಯದಲ್ಲಿ ಇರುವ 712 ಬೃಹತ್‌ ಕೈಗಾರಿಕೆಗಳಲ್ಲಿ 5,02,407 ಕಾರ್ಮಿಕರು/ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ 712 ಕೈಗಾರಿಕೆಗಳ ಪೈಕಿ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 368, ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ 27, ಬೆಳಗಾವಿ 30, ಮೈಸೂರು 38 ಹಾಗೂ ಕೋಲಾರ ಜಿಲ್ಲೆಯಲ್ಲಿ 36 ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂದು ಸಚಿವರು ವಿವರಿಸಿದರು.

click me!