ಸಾಮಾಜಿಕ ಪಿಂಚಣಿ 5 ತಿಂಗಳಿಂದ ಸ್ಥಗಿತ: ಅಂಗವಿಕಲರು ಸೇರಿ 18 ಲಕ್ಷ ಮಂದಿಗೆ ಸಮಸ್ಯೆ, ಹೊಸ ಅರ್ಜಿ ಸಲ್ಲಿಕೆಗೂ ತೊಂದರೆ

Kannadaprabha News   | Kannada Prabha
Published : Sep 19, 2026, 05:45 AM IST
Karnataka Govt Social Pension Stopped for 5 Months

ಸಾರಾಂಶ

ರಾಜ್ಯದಲ್ಲಿ ಆದಾಯ ಮಿತಿ ಹೆಚ್ಚಳದ ಆದೇಶದ ಹೊರತಾಗಿಯೂ ಕಳೆದ ಐದು ತಿಂಗಳಿಂದ 18 ಲಕ್ಷಕ್ಕೂ ಹೆಚ್ಚು ಅಂಗವಿಕಲರು ಮತ್ತು ಅಸಹಾಯಕರಿಗೆ ಸಾಮಾಜಿಕ ಪಿಂಚಣಿ ಬಿಡುಗಡೆಯಾಗಿಲ್ಲ. ಸೇವಾಸಿಂಧು ಪೋರ್ಟಲ್‌ನಲ್ಲಿ ಹೊಸ ಅರ್ಜಿಗಳೂ ಸಲ್ಲಿಕೆಯಾಗುತ್ತಿಲ್ಲ ಹಾಗೂ ಬಾಕಿ ಉಳಿದ 5 ತಿಂಗಳ ಪಿಂಚಣಿ ಸಿಗುವ ಬಗ್ಗೆಯೂ ಆತಂಕ

ಶ್ರೀಕಾಂತ್ ಎನ್.ಗೌಡಸಂದ್ರ

ಬೆಂಗಳೂರು (ಸೆ.19): ರಾಜ್ಯಾದ್ಯಂತ ಅಂಧರು ಸೇರಿ ಅಂಗವಿಕಲರು ಹಾಗೂ ಅಸಹಾಯಕ ವರ್ಗಗಳ ಸಾಮಾಜಿಕ ಪಿಂಚಣಿ ಐದು ತಿಂಗಳಾದರೂ ಬಿಡುಗಡೆ ಆಗಿಲ್ಲ. ವಾರ್ಷಿಕ ವರಮಾನ ಮಿತಿ 1.20 ಲಕ್ಷ ರು.ಗೆ ಹೆಚ್ಚಿಸಿ ಒಂದು ತಿಂಗಳಾದರೂ (ಆ.18) ಆ ಆದೇಶ ಕಾಗದದ ಮೇಲೆಯೇ ಉಳಿದಿದೆ. ಹೀಗಾಗಿ 18 ಲಕ್ಷಕ್ಕೂ ಹೆಚ್ಚು ಮಂದಿ ಅಸಹಾಯಕ ಪಿಂಚಣಿದಾರರ ಬದುಕು ಕಳೆದ ಐದು ತಿಂಗಳಿಂದ ಬಿಡಿಗಾಸು ಇಲ್ಲದೆ ಅತಂತ್ರವಾಗಿದೆ.

ಪಿಂಚಣಿಯನ್ನ ನಂಬಿ ಬದುಕುವ ಜೀವಗಳು ಆತಂಕದಲ್ಲಿ

ಇದೀಗ, ನಿಯಮಗಳ ಪ್ರಕಾರ ಅರ್ಹರಾಗಿರುವ ಫಲಾನುಭವಿಗಳಿಗೂ ಐದು ತಿಂಗಳ ಬಾಕಿ ಪಾವತಿಸುವುದಿಲ್ಲ. ಬದಲಿಗೆ ಸೆಪ್ಟೆಂಬರ್‌ನ ಒಂದು ತಿಂಗಳ ಪಿಂಚಣಿ ಮಾತ್ರ ಬಿಡುಗಡೆ ಮಾಡುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪಿಂಚಣಿಯನ್ನೇ ನೆಚ್ಚಿಕೊಂಡಿರುವ ಜೀವಗಳು ಮತ್ತಷ್ಟು ಆತಂಕಕ್ಕೆ ಸಿಲುಕಿವೆ.

18,06,032 ಫಲಾನುಭವಿಗಳ ಪಿಂಚಣಿ ಸ್ಥಗಿತ

ವಾರ್ಷಿಕ ಆದಾಯ 32,000 ರು.ಗಿಂತ ಹೆಚ್ಚಿದ್ದರೆ ಪಿಂಚಣಿಗೆ ಅರ್ಹರಲ್ಲ ಎಂಬ ಕಾರಣಕ್ಕೆ ಪಿಂಚಣಿ ಪಡೆಯುತ್ತಿದ್ದ 23,14,544 ಫಲಾನುಭವಿಗಳ ಪೈಕಿ 18,06,032 ಫಲಾನುಭವಿಗಳ ಪಿಂಚಣಿಯನ್ನು ಏಪ್ರಿಲ್‌ ತಿಂಗಳಿಂದ ಸ್ಥಗಿತಗೊಳಿಸಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು 32,000 ರು.ಗಿಂತ ಕಡಿಮೆ ಆದಾಯದ ಪ್ರಮಾಣಪತ್ರ ನೀಡುವುದಿಲ್ಲ. 32,000 ರು.ಗಿಂತ ಮೇಲಿನ ಆದಾಯದ ಪ್ರಮಾಣಪತ್ರವಿದ್ದರೆ ಪಿಂಚಣಿ ಸಿಗುವುದಿಲ್ಲ. ಇಂತಹ ಸಂದಿಗ್ಧ ಸ್ಥಿತಿಗೆ ಪಿಂಚಣಿದಾರರನ್ನು ದೂಡಿ ಕಳೆದ ಏಪ್ರಿಲ್‌ನಿಂದ ಪಿಂಚಣಿ ಸ್ಥಗಿತಗೊಳಿಸಲಾಗಿತ್ತು.

ಬಳಿಕ ಇದಕ್ಕೆ ಪರಿಹಾರವಾಗಿ ಆ.18ರಂದು ಆದಾಯ ಮಿತಿಯನ್ನು 32,000 ರು.ಗಳಿಂದ 1,20,000 ರು.ಗೆ ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶ ಮಾಡಿತ್ತು. 1.20 ಲಕ್ಷ ರು.ವರೆಗೆ ಆದಾಯದ ಪ್ರಮಾಣಪತ್ರ ಇರುವವರಿಗೂ ಪಿಂಚಣಿ ನೀಡಬಹುದು ಎಂದು ಹೇಳಿತ್ತು. ಆದರೆ, 1.20 ಲಕ್ಷ ರು.ವರೆಗಿನ ಆದಾಯ ಪ್ರಮಾಣಪತ್ರ ಆದೇಶವಾಗಿ ಒಂದು ತಿಂಗಳು ಕಳೆದರೂ ಅರ್ಹರಿಗೂ ಪಿಂಚಣಿ ಬಿಡುಗಡೆ ಆಗಿಲ್ಲ.

ಹೊಸ ಪಿಂಚಣಿ ಅರ್ಜಿಗೂ ಬಾಗಿಲು ಬಂದ್‌:

ಇನ್ನು ಹೊಸದಾಗಿ ವಿಕಲಚೇತನರು ಪಿಂಚಣಿಗೆ ಅರ್ಜಿ ಸಲ್ಲಿಸಲು ಸಹ ಅವಕಾಶವಿಲ್ಲದಂತಾಗಿದೆ. ಹೊಸದಾಗಿ ಪಿಂಚಣಿಗೆ ಅರ್ಜಿ ಸಲ್ಲಿಸಲು ವಿಕಲಚೇತನರು ತೆರಳಿದರೆ ಸೇವಾಸಿಂಧು ಪೋರ್ಟಲ್‌ನಲ್ಲಿ 32,000 ರು.ಗಿಂತ ಹೆಚ್ಚು ಆದಾಯದ ಪ್ರಮಾಣಪತ್ರ ಪರಿಗಣಿಸುವುದೇ ಇಲ್ಲ. ಈ ಮಿತಿಯನ್ನು 1.20 ಲಕ್ಷ ರು.ಗೆ ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶಿಸಿದ್ದರೂ ಆನ್‌ಲೈನ್‌ ಆಯ್ಕೆ ಪರಿಗಣಿಸುತ್ತಿಲ್ಲ ಎಂಬ ಸಬೂಬು ಸೇವಾಸಿಂಧು ಕಾರ್ಯಾಲಯಗಳದ್ದು.

ಹೀಗಾಗಿ ಯಾವುದೇ ಹೊಸ ಅರ್ಜಿಯನ್ನೂ ಪಡೆಯುತ್ತಿಲ್ಲ. ಹೀಗಾಗಿ ಕಳೆದ 6-7 ತಿಂಗಳಿಂದ ಅಂಗವಿಕಲರು ದುಡಿಯುವ ಶಕ್ತಿ ಇಲ್ಲದಿದ್ದರೂ ಕನಿಷ್ಠ ಪಿಂಚಣಿ ಪಡೆಯಲೂ ಅಲೆದಾಡುವಂತಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿರುವ ಫಲಾನುಭವಿಯೊಬ್ಬರು, ಪಿಂಚಣಿಗೆ ಅರ್ಜಿ ಸಲ್ಲಿಸಲು ಆದಾಯ ಪ್ರಮಾಣಪತ್ರ ಬೇಕು ಎಂದರು. ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಆರ್‌ಡಿ1218115081154 ಸಂಖ್ಯೆಯ ವಾರ್ಷಿಕ 1.20 ಲಕ್ಷ ರು. ಆದಾಯದ ಪ್ರಮಾಣಪತ್ರ ನೀಡಿದ್ದರು. ನಾನು ಸಂಪೂರ್ಣ ಅಂಗವಿಕಲ, ನನಗೆ ಆದಾಯವೇ ಇಲ್ಲ ಎಂದರೂ ಕೇಳದೆ ಇದಕ್ಕಿಂತ ಕಡಿಮೆ ಆದಾಯ ದಾಖಲಿಸಲು ಸಾಧ್ಯವಿಲ್ಲ ಎಂದು ತಹಸಿಲ್ದಾರ್‌ ಕಚೇರಿ ಅಧಿಕಾರಿಗಳು ಹೇಳಿದ್ದರು.

ಇದೀಗ ಆ.18 ರಿಂದ 1.20 ಲಕ್ಷ ರು.ವರೆಗಿನ ಫಲಾನುಭವಿಗಳಿಗೂ ಪಿಂಚಣಿ ನೀಡಬೇಕು ಎಂದು ಆಗಿದೆ. ಆದರೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಯನ್ನೇ ಪರಿಗಣಿಸುತ್ತಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದಕ್ಕೆ ಪರಿಹಾರವೇನು? ಬಡವರಿಗೆ ಗ್ಯಾರಂಟಿ ಎನ್ನುವ ಸರ್ಕಾರ ಅಸಹಾಯಕರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಕಿಡಿ ಕಾರಿದರು.

ಲಕ್ಷಾಂತರ ಮಂದಿಯ ಬದುಕು ಅತಂತ್ರ:

ರಾಜ್ಯದಲ್ಲಿ ಶೇ.40 ರಿಂದ ಶೇ.74 ರವರೆಗೆ ಅಂಗವೈಕಲ್ಯ ಉಳ್ಳ 2.93 ಲಕ್ಷ ಮಂದಿಗೆ ಮಾಸಿಕ 800 ರು. ಪಿಂಚಣಿ, ಶೇ.75 ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವ 4.47 ಲಕ್ಷ ಮಂದಿಗೆ ಮಾಸಿಕ 1,400 ರು. ಹಾಗೂ ಶೇ.75 ಕ್ಕಿಂತ ಹೆಚ್ಚು ಮನೋವಿಕಲತೆ ಉಳ್ಳ 68,923 ಮಂದಿಗೆ ಮಾಸಿಕ 2,000 ರು. ಪಿಂಚಣಿ ನೀಡಲಾಗುತ್ತಿತ್ತು.

ಆದರೆ, ಅರ್ಹತಾ ಪರಿಶೀಲನೆ ಹೆಸರಿನಲ್ಲಿ ಏಪ್ರಿಲ್‌ನಿಂದ ಸಾಮಾಜಿಕ ಭದ್ರತಾ ಪಿಂಚಣಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿತ್ತು. ಆದಾಯ ಮಿತಿಯ ಅಸಮರ್ಪಕ ನಿಯಮಗಳಿಂದಾಗಿ ಅರ್ಹ ಅಂಗವಿಕಲರೂ ಪಿಂಚಣಿಗೆ ಅನರ್ಹರು ಎಂಬಂತಾಗಿತ್ತು. ಇದೀಗ 1.20 ಲಕ್ಷ ರು.ಗೆ ಆದಾಯ ಮಿತಿ ಹೆಚ್ಚಳ ಮಾಡಿ ಒಂದು ತಿಂಗಳಾದರೂ 1.20 ಲಕ್ಷ ರು.ಗಿಂತ ಕಡಿಮೆ ಆದಾಯದ ಪ್ರಮಾಣಪತ್ರ ಸಲ್ಲಿಸಿರುವವರಿಗೂ ಪಿಂಚಣಿ ಬಿಡುಗಡೆ ಮಾಡಿಲ್ಲ.

ಬದುಕಿನ ಪ್ರತಿಯೊಂದು ಹೆಜ್ಜೆಗೂ ಮತ್ತೊಬ್ಬರ ನೆರವು ಬೇಕಾದ ಪರಿಸ್ಥಿತಿಯಲ್ಲಿರುವ ಅಂವಿಕಲರಿಗೆ ಸರ್ಕಾರ ನೆರವಿನ ಹಸ್ತ ನೀಡುವ ಬದಲು ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದು ಅಂಗವಿಕಲ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

5 ತಿಂಗಳ ಪಿಂಚಣಿ ರದ್ದಾಗುವ ಆತಂಕ:

ಶೇ.100 ರಷ್ಟು ಅಂಧರಾಗಿರುವ ಬೆಂಗಳೂರಿನ ಚಲ್ಲಘಟ್ಟ ನಿವಾಸಿಯೊಬ್ಬರು ಜೀವನ ದೂಡುವಷ್ಟು ಆದಾಯ ಗಳಿಸಲೂ ಅಸಹಾಯಕರು. ಯುಡಿ ಐಡಿ- ಕೆಎ18140219720016930ಯ ಅವರ ವಿಕಲಚೇತನರ ಪಿಂಚಣಿಯನ್ನು ಕಳೆದ 5 ತಿಂಗಳ ಹಿಂದೆ ತಡೆ ಹಿಡಿದು ರದ್ದತಿ ಪಟ್ಟಿಗೆ ಸೇರಿಸಲಾಗಿತ್ತು. ಇದೀಗ ಆದಾಯ ಮಿತಿಯ ಸಡಿಲಿಕೆಯಿಂದ ನಿಟ್ಟಿಸಿರು ಬಿಡುವಂತಾಗಿದ್ದರೂ 5 ತಿಂಗಳ ಬದಲಿಗೆ ಒಂದು ತಿಂಗಳ ಪಿಂಚಣಿ ಮಾತ್ರ ನೀಡುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಫಲಾನುಭವಿಗೆ ಹೊಸ ಆತಂಕ ಶುರುವಾಗಿದೆ.

ಈ ಬಗ್ಗೆ ನೋವು ಹಂಚಿಕೊಂಡಿರುವ ಅವರು, ಏಪ್ರಿಲ್‌ ತಿಂಗಳಲ್ಲಿ ಕೊನೇ ಬಾರಿಗೆ 1,400 ರು. ಪಿಂಚಣಿ ಬಂದಿದೆ. ಕಳೆದ ನಾಲ್ಕೈದು ತಿಂಗಳಿಂದ ಸಾಲ ಮಾಡಿ ಜೀವನ ನಡೆಸುವಂತಾಗಿದೆ. ಇದೀಗ 5 ತಿಂಗಳ ಬದಲಿಗೆ ಒಂದು ತಿಂಗಳದ್ದು ಮಾತ್ರ ಪಿಂಚಣಿ ನೀಡಿದರೆ ಹೇಗೆ? ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಾಡಿಗೆ ದರ ಹೆಚ್ಚಳ, ಮಕ್ಕಳ ಶಾಲಾ ಶುಲ್ಕಗಳಿಂದ ಬೇಸತ್ತಿದ್ದೇವೆ. ದುಡಿಯುವ ಶಕ್ತಿ ಇಲ್ಲದ ನಮಗೆ ಸರ್ಕಾರ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಪ್ರತಿಕ್ರಿಯೆಗೆ ಸಿಗದ ಅಧಿಕಾರಿಗಳು:

ಪಿಂಚಣಿ ಸಮಸ್ಯೆ ಬಗ್ಗೆ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಅವರನ್ನು ಕನ್ನಡಪ್ರಭ ಪ್ರಶ್ನಿಸಿದರೆ, ‘ಪಿಂಚಣಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮನೋಜ್‌ ಕುಮಾರ್ ಮೀನಾ ಅವರನ್ನು ಕೇಳಿ’ ಎಂದರು. ಕಂದಾಯ ಇಲಾಖೆ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ ಅವರು ಕರೆಗೆ ಲಭ್ಯವಾಗಲಿಲ್ಲ. ಕಂದಾಯ ಇಲಾಖೆ ಆಯುಕ್ತರಾದ ಮೀನಾ ನಾಗರಾಜ್‌ ಅವರು ಕಳೆದ ಮೂರು ದಿನಗಳಿಂದ ಯತ್ನಿಸಿದರೂ ಕರೆ ಸ್ವೀಕರಿಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆಯ ಈ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ!
ಇದು ಬರೀ ಬಿಸಿಲಲ್ಲ, ಭವಿಷ್ಯದ ಭೀಕರ ಎಚ್ಚರಿಕೆ! ನಾವೀಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಚಿತ!