
ಬೆಂಗಳೂರು (ಫೆ.11): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಭಾರಿ ಮಟ್ಟದ ಬದಲಾವಣೆ ಮಾಡಿದೆ. ಬುಧವಾರದಂದು ಏಕಕಾಲಕ್ಕೆ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 23 ಡಿವೈಎಸ್ಪಿ (DySP) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಫೆಬ್ರವರಿ 11ರಂದು ಹೊರಬಿದ್ದಿರುವ ಈ ಆದೇಶವು ಇಲಾಖೆಯಲ್ಲಿ ದೊಡ್ಡ ಮಟ್ಟದ 'ಮೇಜರ್ ಸರ್ಜರಿ' ಎಂದೇ ಬಣ್ಣಿಸಲಾಗುತ್ತಿದೆ. ಆದರೆ, ಈ ಪಟ್ಟಿಯಲ್ಲಿ ಬೆಂಗಳೂರು ನಗರದ ಆಂತರಿಕ ವರ್ಗಾವಣೆಗಳು ಕಾಣಿಸದಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ ನಿರ್ಧಾರದಂತೆ, ಒಟ್ಟು 129 ನಾಗರಿಕ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ (DG & IGP) ಪರವಾಗಿ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಈ ಆದೇಶ ಹೊರಡಿಸಿದ್ದಾರೆ. ಈ ಪಟ್ಟಿಯಲ್ಲಿ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ ಹಾಗೂ ರಾಮನಗರ ಜಿಲ್ಲೆಯ ಮಾಗಡಿ, ಬಿಡದಿ ಮತ್ತು ತಾವರೆಕೆರೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಸೇರಿದ್ದಾರೆ. ಬೆಂಗಳೂರಿನ ಸಿಸಿಬಿ ಘಟಕದ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ.
ಇನ್ಸ್‌ಪೆಕ್ಟರ್‌ಗಳ ಜೊತೆಗೆ 23 ಡಿವೈಎಸ್ಪಿ (ನಾಗರಿಕ) ಅಧಿಕಾರಿಗಳನ್ನೂ ಸ್ಥಳಾಂತರಿಸಲಾಗಿದೆ. ಲೋಕಾಯುಕ್ತ, ರಾಜ್ಯ ಗುಪ್ತವಾರ್ತೆ (Intelligence), ಆಂತರಿಕ ಭದ್ರತಾ ವಿಭಾಗ (ISD) ಹಾಗೂ ವಿವಿಧ ಉಪ ವಿಭಾಗಗಳ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು, ಕಲಬುರಗಿ, ಉಡುಪಿ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ಉಪ ವಿಭಾಗಗಳಿಗೆ ಹೊಸ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯದಾದ್ಯಂತ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದರೂ, ಬೆಂಗಳೂರು ನಗರ ಪೊಲೀಸ್ ಠಾಣೆಗಳ ಆಂತರಿಕ ವರ್ಗಾವಣೆ ಪಟ್ಟಿಯನ್ನು ಮಾತ್ರ ಸರ್ಕಾರ ಇನ್ನು ಬಿಡುಗಡೆ ಮಾಡಿಲ್ಲ. ಕಳೆದ 6 ತಿಂಗಳಿಂದ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯದ ಪಟ್ಟಿಯಲ್ಲಿ ಕೇವಲ ಬೆಂಗಳೂರು ನಗರದಿಂದ ಹೊರ ಜಿಲ್ಲೆಗಳಿಗೆ ಹೋಗುವ ಇನ್ಸ್‌ಪೆಕ್ಟರ್‌ಗಳಿಗೆ ಮಾತ್ರ 'ವರ್ಗಾವಣೆ ಭಾಗ್ಯ' ಸಿಕ್ಕಿದೆ. ಆದರೆ ನಗರದೊಳಗಿನ ಠಾಣೆಗಳಿಗೆ ನಿಯೋಜನೆಗೊಳ್ಳಬೇಕಿದ್ದ ಇನ್ಸ್‌ಪೆಕ್ಟರ್‌ಗಳ ಲಿಸ್ಟ್ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇದು ಸಿಟಿ ಪೊಲೀಸ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಅಸಮಾಧಾನಕ್ಕೂ ಕಾರಣವಾಗಿದೆ.
ವರ್ಗಾವಣೆಗೊಂಡಿರುವ ಎಲ್ಲಾ 152 ಅಧಿಕಾರಿಗಳನ್ನು ತಕ್ಷಣವೇ ಅವರ ಹಾಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯೋಜಿಸಲಾದ ಹೊಸ ಸ್ಥಳಗಳಲ್ಲಿ ಕೂಡಲೇ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಸೇರುವಿಕೆ ಕಾಲಾವಕಾಶವನ್ನು (Joining Time) ನೀಡಲಾಗಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಒಟ್ಟಾರೆಯಾಗಿ, ರಾಜ್ಯ ಪೊಲೀಸ್ ಪಡೆಯಲ್ಲಿ ಹೊಸ ಚೈತನ್ಯ ತುಂಬಲು ಸರ್ಕಾರ ಮುಂದಾಗಿದ್ದರೂ, ಬೆಂಗಳೂರು ನಗರದ ವರ್ಗಾವಣೆ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಈಗ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ