* ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ಹೊಸದುರ್ಗ ಬಿಜೆಪಿ ಶಾಸಕ
* ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ
* ಮತಾಂತರ ಬಗ್ಗೆ ವ್ಯಾಪಕ ಚರ್ಚೆ
* ನಾನು ದೇವಸ್ಥಾನಕ್ಕೆ ಹೋದರೂ ವಿರೋಧಿಸ್ತಾರೆ
* ಪ್ರಶ್ನಿಸಿದರೆ ಸತ್ತುಹೋಗ್ತೀನಿ ಎಂದು ಹೆದರಿಸ್ತಾರೆ
ವಿಧಾನಸಭೆ(ಸೆ.22): ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿದ್ದು, ಸ್ವತಃ ತಮ್ಮ ತಾಯಿಯನ್ನೇ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್ ಅಳಲು ತೋಡಿಕೊಂಡ ಘಟನೆಗೆ ಮಂಗಳವಾರ ವಿಧಾನಸಭೆ ಸಾಕ್ಷಿಯಾಯಿತು. ಶೇಖರ್ ಅವರ ಕಳವಳಕ್ಕೆ ಇತರೆ ಹಲವು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕೂಡ ಧ್ವನಿಗೂಡಿಸಿದ್ದು, ಆಮಿಷವೊಡ್ಡಿ ನಡೆಸುವ ಇಂಥ ಮತಾಂತರ ತಡೆಗೆ ಕಠಿಣ ಕಾನೂನು ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
undefined
ಈ ವಿಷಯದ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ‘ಮತಾಂತರದ ವಿರುದ್ಧ ಪ್ರಬಲ ಕಾನೂನು ಜಾರುವ ಬಗ್ಗೆ ಚರ್ಚೆ ನಡೆದಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ಭರವಸೆ ನೀಡಿದರು.
ತಾಯಿ ಮತಾಂತರ:
ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್, ರಾಜ್ಯದಲ್ಲಿ ಮತಾಂತರ ಚಟುವಟಿಕೆ ವ್ಯಾಪಕವಾಗಿದೆ. ತಮ್ಮ ಹೊಸದುರ್ಗ ಕ್ಷೇತ್ರ ಒಂದರಲ್ಲೇ 15ರಿಂದ 20 ಸಾವಿರ ಮಂದಿಯನ್ನು ಮತಾಂತರಗೊಳಿಸಲಾಗಿದೆ. ನನ್ನ ಹೆತ್ತ ತಾಯಿಯೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಹಿಂದೂ ಸಂಪ್ರದಾಯಗಳನ್ನು ತ್ಯಜಿಸುವಂತೆ ಬ್ರೈನ್‌ವಾಶ್ ಮಾಡಿದ್ದಾರೆ. ನಾಮ ತೆಗೆಯುವಂತೆ ಹಾಗೂ ಹಿಂದೂ ದೇವಾಲಯಗಳಿಗೆ ಹೋಗದಂತೆ ಕಟ್ಟಾಜ್ಞೆ ವಿಧಿಸುತ್ತಾರೆ. ಇದೀಗ ನಮ್ಮ ತಾಯಿಗೆ ಕುಂಕುಮ, ದೇವರ ಪೂಜೆ, ಪೂಜಾಸಾಮಗ್ರಿ ಎಂದರೆ ಆಗುವುದಿಲ್ಲ. ಸದಾ ಕ್ರಿಶ್ಚಿಯನ್ ಪ್ರಾರ್ಥನೆ, ಹಾಡು, ರಿಂಗ್ ಟೋನ್ ಸಹ ಅದೇ ಆಗಿದೆ. ಹೀಗಾಗಿ ಜನರ ಎದುರು ನಮಗೆ ಮುಜುಗರ ಉಂಟಾಗುತ್ತಿದೆ. ಈ ಬಗ್ಗೆ ಕೇಳಿದರೆ ನಾನು ಸತ್ತು ಹೋಗುತ್ತೇನೆ ಎಂದು ನಮ್ಮ ತಾಯಿ ಹೇಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆಮಿಷ ಒಡ್ಡಿ ಮತಾಂತರ:
ಹಿಂದೆಲ್ಲ ಹುಷಾರಿಲ್ಲದಿದ್ದರೆ ದಾಟು ತೆಗೆಸುವುದು, ದೇವಸ್ಥಾನಕ್ಕೆ ಹೋಗಿ ಯಂತ್ರ ಹಾಕಿಸಿಕೊಡು ಬರುತ್ತಿದ್ದೆವು. ಆದರೆ, ಮೌಢ್ಯದ ಹೆಸರಿನಲ್ಲಿ ಇದನ್ನೆಲ್ಲ ನಿಷೇಧ ಮಾಡಿದ್ದು, ಇದೀಗ ಆರೋಗ್ಯದ ತೊಂದರೆ ಸರಿಪಡಿಸುವುದಾಗಿ ಚಚ್‌ರ್‍ಗಳು ಹಿಂದೂಗಳನ್ನು ತಮ್ಮತ್ತ ಸೆಳೆಯುತ್ತಿವೆ. ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುತ್ತಿವೆ. ಇದನ್ನು ತಡೆಯಬೇಕು. ಮತಾಂತರ ಆಗುವುದಾದರೆ ಕ್ರಿಶ್ಚಿಯನ್ ಧರ್ಮಕ್ಕೆ ಹೋಗುವ ಎಸ್‌ಸಿ,ಎಸ್‌ಟಿಯವರು ಸೌಲಭ್ಯಗಳನ್ನು ತ್ಯಜಿಸಿ ಹೋಗಬೇಕು ಎಂದು ಆಗ್ರಹಿಸಿದರು.
ಯುಪಿ ಮಾದರಿ ಕಾಯ್ದೆ:
ಈ ವೇಳೆ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ, ಮತಾಂತರ ದೊಡ್ಡ ಪಿಡುಗಾಗಿದೆ. ಪರಿಶಿಷ್ಟರು ಇರುವ ಕಡೆ ವಿದೇಶಿ ಮಿಷನರಿಗಳ ಮೂಲಕ ಕೆಲವು ಸಂಘಟನೆಗಳು ಮತಾಂತರ ಮಾಡುತ್ತಿವೆ. ಇದನ್ನು ತಡೆಯಲು ಉತ್ತರ ಪ್ರದೇಶದ ರೀತಿಯಲ್ಲಿ ಬಿಗಿಯಾದ ಕಾನೂನು ತರಬೇಕು ಎಂದು ಒತ್ತಾಯಿಸಿದರು.
ಲಂಬಾಣಿಗಳಿಗೂ ಮತಾಂತರ ಬಿಸಿ:
ಜೆಡಿಎಸ್ ಸದಸ್ಯ ದೇವಾನಂದ್, ನಮ್ಮ ಕ್ಷೇತ್ರದಲ್ಲಿರುವ ಲಂಬಾಣಿ ಸಮುದಾಯದವನ್ನು ಪಕ್ಷಾಂತರದ ಮೂಲಕ ಇಬ್ಭಾಗ ಮಾಡಿದ್ದಾರೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದವರ ನಡುವೆ ಗುಂಪುಗಾರಿಕೆ, ವೈಷಮ್ಯ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.
ಶಿಕ್ಷಾರ್ಹ ಅಪರಾಧ:
ಇದಕ್ಕೆ ಉತ್ತರಿಸಿದ ಗೃಹ ಸಚಿವರು, ‘ಮತಾಂತರ ನಡೆಯುತ್ತಿರುವುದು ಸರ್ಕಾರದ ಗಮನದಲ್ಲಿದೆ. ಯಾವುದೇ ಆಸೆ, ಆಮಿಷ ತೋರಿಸಿ ಮತಾಂತರ ಮಾಡುವುದು ಶಿಕ್ಷಾರ್ಹ ಅಪರಾಧ. ಇದು ಗಲಭೆಗೂ ಕಾರಣವಾಗಬಹುದು. ಹೀಗಾಗಿ ಮತಾಂತರ ನಿಯಂತ್ರಿಸಲು ಪ್ರಬಲ ಕಾನೂನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ 20000 ಮಂದಿ ಮತಾಂತರ
ರಾಜ್ಯದಲ್ಲಿ ಮತಾಂತರ ಚಟುವಟಿಕೆ ವ್ಯಾಪಕವಾಗಿದೆ. ಅವರು ನನ್ನ ತಾಯಿಯನ್ನೂ ಬಿಟ್ಟಿಲ್ಲ. ನನ್ನ ಕ್ಷೇತ್ರವೊಂದರಲ್ಲೇ 20000 ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಆಮಿಷ ಒಡ್ಡಿ ಮಾಡುವ ಇಂಥ ಚಟುವಟಿಕೆಗೆ ಸರ್ಕಾರ ಕಡಿವಾಣ ಹಾಕಬೇಕು.
ಗೂಳಿಹಟ್ಟಿಶೇಖರ್, ಬಿಜೆಪಿ ಶಾಸಕ